ಹೈದರಾಬಾದ್ : ಒಟಿಟಿ ಪ್ಲಾಟ್ಫಾರ್ಮ್ನಲ್ಲಿ ಇತ್ತೀಚೆಗೆ ಬಿಡುಗಡೆಯಾದ 'ಫ್ಯಾಮಿಲಿ ಮ್ಯಾನ್ 2' ವೆಬ್ ಸಿರೀಸ್ನಲ್ಲಿ ನಟಿಸಿದ್ದ ಬಹುಭಾಷಾ ನಟಿ ಸಮಂತಾ ರುತ್ ಪ್ರಭು ಅತ್ಯುತ್ತಮ ನಟಿ ಪ್ರಶಸ್ತಿ ತಮ್ಮದಾಗಿಸಿಕೊಂಡಿದ್ದಾರೆ. ಜಾಲತಾಣದಲ್ಲಿ ಈ ಬಗ್ಗೆ ನಟಿ ಖುಷಿ ಹಂಚಿಕೊಂಡಿದ್ದಾರೆ.
ಮುಂಬೈನಲ್ಲಿ ಗುರುವಾರ ನಡೆದ ಫಿಲ್ಮ್‌ಫೇರ್ ಒಟಿಟಿ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ 'ಫ್ಯಾಮಿಲಿ ಮ್ಯಾನ್ 2' ವೆಬ್ ಸಿರೀಸ್ ಅತ್ಯುತ್ತಮ ಮೂಲ ಕಥೆ, ಅತ್ಯುತ್ತಮ ಚಿತ್ರಕಥೆ, ಅತ್ಯುತ್ತಮ ನಿರ್ದೇಶನ-ಕ್ರಿಟಿಕ್ಸ್ (ಸುಪರ್ಣ್ ವರ್ಮಾ), ಅತ್ಯುತ್ತಮ ನಟಿ (ಸಮಂತಾ), ಅತ್ಯುತ್ತಮ ವೆಬ್ ಸಿರೀಸ್ ಪ್ರಶಸ್ತಿಗಳನ್ನು ಬಾಚಿಕೊಂಡಿದೆ.
ಅನೇಕ ವಿವಾದಗಳ ನಡುವೆ ಒಟಿಟಿಯಲ್ಲಿ ಬಿಡುಗಡೆಯಾದ 'ದಿ ಫ್ಯಾಮಿಲಿ ಮ್ಯಾನ್ 2' ವೆಬ್ ಸರಣಿಯು ಪ್ರಪಂಚದಾದ್ಯಂತ ಪ್ರೇಕ್ಷಕರಿಂದ ಅಪಾರ ಜನಪ್ರಿಯತೆಯನ್ನು ಗಳಿಸಿದೆ. ಜನಪ್ರಿಯ IMDB TV ಸರಣಿ ಶ್ರೇಯಾಂಕಗಳಲ್ಲಿ ಈ ಸಿರೀಸ್ ನಾಲ್ಕನೇ ಸ್ಥಾನದಲ್ಲಿದೆ. 'ದಿ ಫ್ಯಾಮಿಲಿ ಮ್ಯಾನ್ ಸೀಸನ್ 2' ಅನ್ನು ರಾಜ್ ಮತ್ತು ಡಿಕೆ ನಿರ್ದೇಶಿಸಿದ್ದಾರೆ.
ಈ ವೆಬ್ ಸರಣಿಯಲ್ಲಿ ಸಮಂತಾ ತಮಿಳು ಈಳಂ ಸೈನಿಕ ರಾಜಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಅಮೆಜಾನ್ ಪ್ರೈಂ ವಿಡಿಯೋ ಮೂಲಕ ಬಿಡುಗಡೆಯಾದ ಈ ವೆಬ್ ಸರಣಿಯಲ್ಲಿ ಸಖತ್ ಬೋಲ್ಡ್ ಆದಂತಹ ಪಾತ್ರವನ್ನು ಸಮಂತಾ ಮಾಡಿದ್ದಾರೆ. ಹಾಗಾಗಿ, ವೆಬ್ ಸಿರೀಸ್ ವಿವಾದಕ್ಕೀಡಾಗಿತ್ತು.
ಗುಲ್ಲಕ್ ಸೀಸನ್ 2, ದಿ ಫ್ಯಾಮಿಲಿ ಮ್ಯಾನ್ 2, ಸ್ಕ್ಯಾಮ್ 1992 ಸೇರಿದಂತೆ ಹಲವು ವೆಬ್ ಸರಣಿಗಳು ಪ್ರತಿಷ್ಠಿತ ಪ್ರಶಸ್ತಿ ಸಮಾರಂಭದಲ್ಲಿ ಭಾಗಿಯಾಗಿದ್ದವು. ಕೊರೊನಾ ಬಳಿಕ ಒಟಿಟಿ ಪ್ಲಾಟ್ಫಾರ್ಮ್ ಹೆಚ್ಚು ಪ್ರಚಲಿತಗೊಂಡಿದೆ. ವೆಬ್ ಸಿರೀಸ್ ಮಾತ್ರವಲ್ಲದೇ, ಹಲವು ಬಿಗ್ ಸಿನಿಮಾಗಳು ಸಹ ಇದರಲ್ಲೇ ಬಿಡುಗಡೆಯಾಗುತ್ತಿವೆ.
ಇದನ್ನೂ ಓದಿ : Watch.. ಮತ್ತೆ ಯಾವತ್ತೂ ಈ ಹಾಡು ಹಾಡುವುದಿಲ್ಲ... ಅಪ್ಪು ನೆನೆದು ಎನ್ಟಿಆರ್ ಭಾವುಕ