ಒಂದು ವೇಳೆ ನಟ ಸಲ್ಮಾನ್ ಖಾನ್ ನಿಷೇಧಿತ ಗಾಯಕ ಮಿಕಾ ಸಿಂಗ್ ಜತೆ ವರ್ಕ್ ಮಾಡಿದ್ರೆ ಭಾರತೀಯ ಚಿತ್ರರಂಗದಿಂದ ಬ್ಯಾನ್ ಆಗ್ಬೇಕಾಗುತ್ತೆ ಎಂದು ಅಖಿಲ ಭಾರತ ಸಿನಿ ಕಾರ್ಮಿಕರ ಸಂಘ ಎಚ್ಚರಿಕೆ ನೀಡಿದೆ.
ಇತ್ತೀಚಿಗಷ್ಟೆ ಪಾಕ್ನಲ್ಲಿ ಸಂಗೀತ ಕಾರ್ಯಕ್ರಮ ನೀಡಿದ ಗಾಯಕ ಮಿಕಾ ಸಿಂಗ್ ಅವರ ಮೇಲೆ ಭಾರತೀಯ ಚಿತ್ರರಂಗ ನಿಷೇಧ ಹೇರಿದೆ. ಈತನ ಜತೆ ಯಾರೂ ವರ್ಕ್ ಮಾಡದಂತೆ ಕಟ್ಟುನಿಟ್ಟಿನ ನಿರ್ಬಂಧ ಹೇರಿದೆ. ಒಂದು ವೇಳೆ ಈ ನಿಯಮ ಮೀರಿ ಅವರೊಂದಿಗೆ ಕೆಲಸ ಮಾಡಿದ್ರೆ, ಅವರನ್ನೂ ಚಿತ್ರರಂಗದಿಂದ ಬಹಿಷ್ಕಾರ ಹಾಕಬೇಕಾಗುತ್ತೆ ಎಂದು ಅಖಿಲ ಭಾರತ ಸಿನಿ ಕಾರ್ಮಿಕರ ಸಂಘ ಹೇಳಿದೆ.
ಈ ನಡುವೆ ಇದೇ 28 ರಂದು ಅಮೆರಿಕದಲ್ಲಿ ನಡೆಯಲಿರುವ six-city gig ಕಾರ್ಯಕ್ರಮದಲ್ಲಿ ಮಿಕಾ ಜತೆ ಬಾಲಿವುಡ್ ಭಾಯ್ಜಾನ್ ಸಲ್ಮಾನ್ ಖಾನ್ ವೇದಿಕೆ ಹಂಚಿಕೊಳ್ಳಲಿದ್ದಾರೆ ಎನ್ನಲಾಗುತ್ತಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಅಖಿಲ ಭಾರತ ಸಿನಿ ಕಾರ್ಮಿಕರ ಸಂಘದ ಅಧ್ಯಕ್ಷ ಅಶೋಕ ದುಬೆ, ಈಗಾಗಲೇ ಮಿಕಾ ಜತೆ ಯಾರೂ ವರ್ಕ್ ಮಾಡದಂತೆ ಸೂಚಿಸಿದ್ದೇವೆ. ಒಂದು ವೇಳೆ ನಮ್ಮ ಸೂಚನೆಯನ್ನು ಉಲ್ಲಂಘಿಸಿದರೆ, ಯಾರೇ ಆಗಲಿ ಅವರನ್ನು ಬ್ಯಾನ್ ಮಾಡುತ್ತೇವೆ. ಅದು ಸಲ್ಮಾನ್ ಖಾನ್ ಅವರೇ ಆಗಲಿ ಅಥವಾ ಮತ್ತ್ಯಾರೆ ಆಗಲಿ, ಮುಲಾಜಿಲ್ಲದೇ ನಿಷೇಧ ಹೇರುತ್ತವೆ ಎಂದಿದ್ದಾರೆ.
ಅದು ವಿದೇಶದಲ್ಲಿ ನಡೆಯುವ ಕಾರ್ಯಕ್ರವಾದರೂ ಸರಿ ಮಿಕಾ ಜತೆ ನಮ್ಮವರು ವರ್ಕ್ ಮಾಡದಂತೆ ಕಟ್ಟಪಣೆ ನೀಡಿದ್ದೇವೆ ಎಂದಿದ್ದಾರೆ ಅಶೋಕ.
ಮಿಕಾ ಜತೆ ವೇದಿಕೆ ಹಂಚಿಕೊಳ್ತಾರಾ ಸಲ್ಲು ?
ಇನ್ನು ಯುಎಸ್ನಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಸಲ್ಲು ಹಾಗೂ ಮಿಕಾ ಒಟ್ಟಿಗೆ ವೇದಿಕೆ ಮೇಲೆ ಕಾಣಿಸಿಕೊಳ್ಳುವುದಿಲ್ಲವಂತೆ. ಸ್ಥಳೀಯರ ಕೋರಿಕೆ ಮೇರೆಗೆ ಮಿಕಾ ಸಿಂಗ್ ಅವರನ್ನು ಆಹ್ವಾನಿಸಲಾಗಿದೆ. ಇದರಲ್ಲಿ ಸಲ್ಮಾನ್ ಖಾನ್ ಅವರ ಪಾತ್ರವೇನು ಇಲ್ಲ. ಕಾರ್ಯಕ್ರದ ವೇದಿಕೆಯಲ್ಲಿಯೂ ಅವರು ಮುಖಾಮುಖಿಯಾಗುವುದಿಲ್ಲ ಎಂದು ಆಯೋಜಕರು ಸ್ಪಷ್ಟ ಪಡಿಸಿದ್ದಾರೆ.