ಬಾಲಿವುಡ್ ನಟ ಸಲ್ಮಾನ್ ಖಾನ್ ತಮ್ಮನ್ನು ತಾವೇ ಚಾವಟಿಯಿಂದ ಹೊಡೆದುಕೊಂಡಿರುವ ವಿಡಿಯೋವೊಂದು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಆ್ಯಕ್ಟಿಂಗ್ ಮಾತ್ರ ಅಲ್ಲ, ತಮ್ಮ ಕಟ್ಟುಮಸ್ತಾದ ದೇಹದಿಂದ ಕೂಡಾ ಫೇಮಸ್ ಆದ ಈ ಸಲ್ಲು ಭಾಯ್ ಚಾವಟಿಯಿಂದ ಹೊಡೆದುಕೊಳ್ಳುವುದಕ್ಕೂ ಕಾರಣ ಇದೆ.
ಸದ್ಯಕ್ಕೆ ಸಲ್ಮಾನ್ ಖಾನ್ ದಬಾಂಗ್-3 ಶೂಟಿಂಗ್ ಬ್ಯುಸಿಯಲ್ಲಿದ್ದಾರೆ. ಮಹಾರಾಷ್ಟ್ರದಲ್ಲಿ ಶೂಟಿಂಗ್ ಕೂಡಾ ಭರದಿಂದ ಸಾಗುತ್ತಿದ್ದು ಫೈನಲ್ ಹಂತದಲ್ಲಿದೆ. ಮಹಾರಾಷ್ಟ್ರದ ಪಶ್ಚಿಮ ಪ್ರದೇಶಗಳಲ್ಲಿ ಕಡಕ್ ಲಕ್ಷ್ಮಿ ದೇವತೆಯನ್ನು (ಕರ್ನಾಟಕದಲ್ಲಿ ಮಾರಮ್ಮ ಎಂದು ಕರೆಯುತ್ತಾರೆ) ಆರಾಧಿಸುವ ಬುಡಕಟ್ಟು ಜನಾಂಗದ ಗುಂಪೊಂದು ಶೂಟಿಂಗ್ ಜರುಗುತ್ತಿರುವ ಸ್ಥಳಕ್ಕೆ ಬಂದಿದ್ದಾರೆ. ಈ ವೇಳೆ ಆ ಜನರನ್ನು ಮಾತನಾಡಿಸಿದ ಸಲ್ಮಾನ್ ಖಾನ್, ಅವರ ಚಾಟಿಯನ್ನು ಪಡೆದು ಅದೇ ಚಾಟಿಯಲ್ಲಿ ತಾವು ಹೊಡೆದುಕೊಂಡಿದ್ದಾರೆ. ಕೊನೆಗೆ ಆ ಗುಂಪಿನೊಂದಿಗೆ ನಿಂತು ಫೋಟೋ ತೆಗೆಸಿಕೊಂಡಿದ್ದಾರೆ. ಈ ವಿಡಿಯೋವನ್ನು ತಮ್ಮ ಇನ್ಸ್ಟಾಗ್ರಾಂನಲ್ಲಿ ಸಲ್ಮಾನ್ ಖಾನ್ ಪೋಸ್ಟ್ ಮಾಡಿದ್ದಾರೆ. ಆದರೆ ಆ ಸ್ಥಳ ಯಾವುದು ಎಂದು ಅವರು ಹೇಳಿಲ್ಲ. 'ಅವರ ನೋವನ್ನು ಅನುಭವಿಸಲು ಮತ್ತು ಹಂಚಿಕೊಳ್ಳಲು ಸಂತೋಷ ಎನಿಸುತ್ತದೆ. ಆದರೆ ದಯವಿಟ್ಟು ಯಾರೂ ಇದನ್ನು ನಿಮ್ಮ ಮೇಲೆ ಅಥವಾ ಯಾರ ಮೇಲೂ ಪ್ರಯತ್ನಿಸಬೇಡಿ' ಎಂದು ಸಲ್ಮಾನ್ ಎಚ್ಚರಿಸಿದ್ದಾರೆ.
ಇನ್ನು ಸಲ್ಮಾನ್ ಹಾಗೂ ಆಲಿಯಾ ಭಟ್ ಅಭಿನಯದ ಇನ್ಷಾಲ್ಲ 2020ರ ಈದ್ ಹಬ್ಬದಂದು ಬಿಡುಗಡೆಯಾಗಲಿದೆ. ಬಿಎಸ್ಎಫ್ ಯೋಧನ ಜೀವನಚರಿತ್ರೆ ಕಥೆಯನ್ನು ಹೊಂದಿರುವ ಸಿನಿಮಾವನ್ನು ಸಂಜಯ್ ಲೀಲಾ ಬನ್ಸಾಲಿ ನಿರ್ದೇಶಿಸಿದ್ದಾರೆ.