ನವದೆಹಲಿ: ಹಿರಿಯ ಮುಸ್ಲಿಂ ವ್ಯಕ್ತಿ ಮೇಲೆ ಹಲ್ಲೆ ನಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ ನಟಿ ಸ್ವರಾ ಭಾಸ್ಕರ್ ಹಾಗೂ ಟ್ವಿಟರ್ ಇಂಡಿಯಾ ವ್ಯವಸ್ಥಾಪಕ ನಿರ್ದೇಶಕ ಮನೀಶ್ ಮಹೇಶ್ವರಿ, ಪತ್ರಕರ್ತೆ ಅರ್ಫಾ ಖಾನಮ್ ವಿರುದ್ಧ ದೆಹಲಿ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ.
ದೆಹಲಿಯ ತಿಲಕ್ ಮಾರ್ಗ್ ಪೊಲೀಸ್ ಠಾಣೆಯಲ್ಲಿ ಪ್ರಚೋದನಕಾರಿ ಟ್ವೀಟ್ ಮಾಡಿದ್ದಾರೆ ಎಂಬ ಆರೋಪದ ಮೇಲೆ ದೂರು ದಾಖಲಾಗಿದ್ದು, ವಿಚಾರಣೆ ನಡೆಸಲಾಗುತ್ತಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಆದರೆ ಈ ಕುರಿತು ಯಾರು ದೂರು ನೀಡಿದ್ದಾರೆಂಬ ಮಾಹಿತಿ ಸಿಕ್ಕಿಲ್ಲ. ಜೂನ್ 5ರಂದು ಅಬ್ದುಲ್ ಸಮದ್ ಎಂಬ ವೃದ್ಧ ಮಸೀದಿಯಲ್ಲಿ ಪ್ರಾರ್ಥನೆ ಮುಗಿಸಿ ಮನೆಗೆ ವಾಪಸ್ ಆಗುತ್ತಿದ್ದರು. ಆಟೋದಲ್ಲಿ ಪ್ರಯಾಣಿಸುತ್ತಿದ್ದ ಈತನ ಮೇಲೆ ಕೆಲ ಕಿಡಿಗೇಡಿಗಳು ದಾಳಿ ನಡೆಸಿ ಹತ್ತಿರದ ಅರಣ್ಯ ಪ್ರದೇಶಕ್ಕೆ ಕರೆದೊಯ್ದಿದ್ದಾರೆ. ಈ ವೇಳೆ ಜೈ ಶ್ರೀರಾಮ್ , ವಂದೇ ಮಾತರಂ ಎಂದು ಘೋಷಣೆ ಕೂಗುತ್ತಾ ಹಲ್ಲೆ ನಡೆಸಿದ್ದಾರೆ ಎನ್ನಲಾಗ್ತಿದೆ.
ದಾಳಿ ಮಾಡಿದ ಗುಂಪಿನಲ್ಲಿದ್ದ ಒಬ್ಬ ವ್ಯಕ್ತಿ ಸಮದ್ ಗಡ್ಡ ಕತ್ತರಿಸುವ ಪ್ರಯತ್ನ ನಡೆಸಿದ್ದಾನೆ. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಸಮದ್ ತಮ್ಮನ್ನು ಬಿಟ್ಟು ಬಿಡುವಂತೆ ಯುವಕರಲ್ಲಿ ಅಂಗಲಾಚಿದ್ದಾರೆ. ಈ ಎಲ್ಲಾ ದೃಶ್ಯಗಳು ವಿಡಿಯೋದಲ್ಲಿ ದಾಖಲಾಗಿದೆ. ಘಟನೆ ನಡೆದು 2 ದಿನಗಳ ಬಳಿಕ ಬೆಳಕಿಗೆ ಬಂದಿದ್ದು, ಈ ಸಂಬಂಧ ಎಫ್ಐಆರ್ ದಾಖಲಿಸಿಕೊಳ್ಳಲಾಗಿದೆ ಎಂದು ಘಾಜಿಯಾಬಾದ್ ಪೊಲೀಸರು ತಿಳಿಸಿದ್ದಾರೆ.
ವೃದ್ಧ ಅಬ್ದುಲ್ ಬುಲಂದ್ ಶೆಹರ್ ನಿವಾಸಿಯಾಗಿದ್ದು, ಎಫ್ಐಆರ್ನಲ್ಲಿ ಜೈ ಶ್ರೀ ರಾಮ್ ಎಂದು ಘೋಷಣೆ ಕೂಗುವಂತೆ ಬಲವಂತ ಮಾಡಿರುವ ಬಗ್ಗೆ ಹೇಳಿಕೆ ನೀಡಿಲ್ಲ ಎನ್ನಲಾಗ್ತಿದೆ. ಪ್ರಕರಣ ಸಂಬಂಧ ಉತ್ತರಪ್ರದೇಶ ಪೊಲೀಸರು ಟ್ವಿಟರ್ ಇಂಕ್, ಟ್ವಿಟರ್ ಕಮ್ಯುನಿಕೇಷನ್ಸ್ ಇಂಡಿಯಾ, ನ್ಯೂಸ್ ಪೋರ್ಟಲ್ ದಿ ವೈರ್, ಲೇಖಕರಾದ ಮೊಹಮ್ಮದ್ ಜುಬೈರ್ ಮತ್ತು ರಾಣಾ ಅಯೂಬ್, ಹಿರಿಯ ಪತ್ರಕರ್ತ ಮತ್ತು ಲೇಖಕ ಸಬಾ ನಖ್ವಿ, ಕಾಂಗ್ರೆಸ್ ಮುಖಂಡರಾದ ಸಲ್ಮಾನ್ ನಿಜಾಮಿ, ಮಸ್ಕೂರ್ ಉಸ್ಮಾನಿ ಮತ್ತು ಸಾಮ ಮೊಹಮ್ಮದ್ ವಿರುದ್ಧ ಎಫ್ಐಆರ್ ದಾಖಲಿಸಿಕೊಂಡಿದ್ದಾರೆ.
ಓದಿ:ಪ್ರಚಾರಕ್ಕಾಗಿ ಅರವಿಂದ್ ಬೆಲ್ಲದ್ ಫೋನ್ ಟ್ಯಾಪಿಂಗ್ ಆರೋಪ: ರೇಣುಕಾಚಾರ್ಯ ಕಿಡಿ