ಮುಂಬೈ (ಮಹಾರಾಷ್ಟ್ರ) : ವಿಚಾರಣೆಗೆ ತಡವಾಗಿ ಬಂದಿದ್ದಕ್ಕಾಗಿ ಬಾಲಿವುಡ್ ನಟಿ ಅನನ್ಯಾ ಪಾಂಡೆಯನ್ನು ಮಾದಕ ವಸ್ತು ನಿಯಂತ್ರಣ ದಳ (ಎನ್‌ಸಿಬಿ)ದ ಮುಂಬೈ ವಲಯ ನಿರ್ದೇಶಕ ಸಮೀರ್ ವಾಂಖೆಡೆ ತರಾಟೆಗೆ ತೆಗೆದುಕೊಂಡಿದ್ದಾರೆ ಎಂದು ತಿಳಿದು ಬಂದಿದೆ.
ಡ್ರಗ್ಸ್ ಪ್ರಕರಣ ಸಂಬಂಧ ನಿನ್ನೆ ಬೆಳಗ್ಗೆ 11 ಗಂಟೆಗೆ ವಿಚಾರಣೆಗೆ ಬರುವಂತೆ ನಟಿ ಅನನ್ಯಾಗೆ ಎನ್‌ಸಿಬಿ ಸೂಚಿಸಿತ್ತು. ಆದರೆ, ಆಕೆ ತನ್ನ ತಂದೆ ನಟ ಚಂಕಿ ಪಾಂಡೆ ಜೊತೆ ಮಧ್ಯಾಹ್ನ 2 ಗಂಟೆಗೆ ಎನ್‌ಸಿಬಿ ಕಚೇರಿಗೆ ಬಂದಿದ್ದರು. ಇದರಿಂದ ಕೋಪಗೊಂಡಿದ್ದ ಸಮೀರ್ ವಾಂಖೆಡೆ, ಅನನ್ಯಾ ಬರುತ್ತಿದ್ದಂತೆಯೇ, "ನಮ್ಮ ಅಧಿಕಾರಿಗಳು ನಿಮಗಾಗಿ ಕಾಯುತ್ತಾ ಕುಳಿತಿದ್ದರು. ಯಾವಾಗ ಬೇಕಾದಾಗ ಬರಲು ಇದು ನಿಮ್ಮ ಸಿನಿಮಾ ಪ್ರೊಡಕ್ಷನ್ ಹೌಸ್ ಅಲ್ಲ, ಕೇಂದ್ರದ ಒಂದು ತನಿಖಾ ಸಂಸ್ಥೆ" ಎಂದು ಚಳಿ ಬಿಡಿಸಿದ್ದಾರೆ.
ಇದನ್ನೂ ಓದಿ: Drugs Case: ಸತತ 4 ಗಂಟೆ ವಿಚಾರಣೆ ಎದುರಿಸಿದ ಅನನ್ಯಾ... ಸೋಮವಾರ ಮತ್ತೆ ಹಾಜರು
ಕ್ರೂಸ್ ಡ್ರಗ್ಸ್ ಪ್ರಕರಣದಲ್ಲಿ ಭಾಗಿಯಾಗಿರುವ ಆರೋಪದ ಮೇಲೆ ಜೈಲುವಾಸ ಅನುಭವಿಸುತ್ತಿರುವ ಬಾಲಿವುಡ್ ಬಾದ್ ಶಾ ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ವಿಚಾರಣೆ ನಡೆಸುತ್ತಿರುವ ಎನ್‌ಸಿಬಿ ಅಧಿಕಾರಿಗಳು, ಅನನ್ಯಾ ಮತ್ತು ಆರ್ಯನ್ ಖಾನ್ ನಡುವೆ ಕೆಲವು ವಾಟ್ಸ್‌ಆ್ಯಪ್ ಚಾಟ್‌ಗಳು ಮೊಬೈಲ್ ಫೋನ್‌ನಲ್ಲಿ ಪತ್ತೆಯಾದ ನಂತರ ನಟಿಯನ್ನು ಎರಡು ಬಾರಿ ಕರೆದು ವಿಚಾರಣೆ ನಡೆಸಿದ್ದಾರೆ.
ಆರ್ಯನ್‌ಗೆ ಡ್ರಗ್ ಡೀಲರ್‌ಗಳ ಸಂಖ್ಯೆಯನ್ನು ಒದಗಿಸುವ ಮೂಲಕ ಮೂರು ಬಾರಿ ಡ್ರಗ್ಸ್ ಪೂರೈಸಲು ಅನನ್ಯಾ ಸಹಾಯ ಮಾಡಿದ್ದಾರೆ ಎಂಬುದು ಆರ್ಯನ್ ಖಾನ್ ಮೊಬೈಲ್ ಫೋನ್‌ನಿಂದ ಮರು ಪಡೆಯಲಾದ 2018-19ರ ಚಾಟ್‌ಗಳಿಂದ ತಿಳಿದು ಬಂದಿದೆ ಎಂದು ಎನ್‌ಸಿಬಿ ಮೂಲಗಳು ತಿಳಿಸಿವೆ. ಆದರೆ, ಅನನ್ಯಾ ಮಾತ್ರ ಡ್ರಗ್ಸ್ ಸರಬರಾಜು ಹಾಗೂ ಸೇವನೆಯ ಆರೋಪಗಳನ್ನು ನಿರಾಕರಿಸಿದ್ದಾರೆ.