ಮುಂಬೈ: ಬಾಲಿವುಡ್ ನಟಿ ಕಂಗನಾ ರಣಾವತ್ ಒಂದಲ್ಲಾ ಒಂದು ಸಮಸ್ಯೆಗಳಲ್ಲಿ ಸಿಲುಕುತ್ತಲೇ ಇದ್ದಾರೆ. ಅನೇಕ ಬಾರಿ ಸೋಷಿಯಲ್ ಮೀಡಿಯಾದಲ್ಲಿ ಇನ್ನೊಬ್ಬರ ಬಗ್ಗೆ ಇಲ್ಲಸಲ್ಲದ ಕಮೆಂಟ್ಗಳನ್ನು ಮಾಡುವ ಮೂಲಕವೇ ತೊಂದರೆಗೆ ಸಿಲುಕುತ್ತಾರೆ. ಬಾಲಿವುಡ್ ಖ್ಯಾತ ಸಾಹಿತಿ ಜಾವೇದ್ ಅಖ್ತರ್, ಕಂಗನಾ ವಿರುದ್ಧ ಸ್ಥಳೀಯ ನ್ಯಾಯಾಲಯದಲ್ಲಿ ಕ್ರಿಮಿನಲ್ ಪ್ರಕರಣ ದಾಖಲಿಸಿದ್ದು ಮುಂಬೈ ಪೊಲೀಸರು ಕಂಗನಾಗೆ ಸಮನ್ಸ್ ನೀಡಿದ್ದಾರೆ.
ಜುಹು ಪೊಲೀಸರು ಕಂಗನಾ ಅವರನ್ನು ನಾಳೆ, ಅಂದರೆ ಜನವರಿ 22 ರಂದು ವಿಚಾರಣೆಗೆ ಹಾಜರು ಪಡಿಸಲಿದ್ದಾರೆ. "ವಾಹಿನಿಯೊಂದಕ್ಕೆ ಕಂಗನಾ ನೀಡಿರುವ ಸಂದರ್ಶನದಲ್ಲಿ ನನ್ನ ವಿರುದ್ಧ ಅವಹೇಳನಾಕಾರಿ ಹೇಳಿಕೆಗಳನ್ನು ನೀಡುತ್ತಾ ಬಂದಿದ್ದಾರೆ. ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆ ನಂತರ ಬಾಲಿವುಡ್ನಲ್ಲಿರುವ ಗುಂಪುಗಾರಿಕೆ ಬಗ್ಗೆ ಮಾತನಾಡುವಾಗ ಕಂಗನಾ ನನ್ನ ಹೆಸರನ್ನು ಉಲ್ಲೇಖಿಸಿದ್ದಾರೆ. ಅಷ್ಟೇ ಅಲ್ಲ ಹೃತಿಕ್ ರೋಷನ್ ವಿಚಾರದಲ್ಲಿ ನನಗೆ ಬೆದರಿಕೆ ಒಡ್ಡುತ್ತಿದ್ದಾರೆ. ಹೃತಿಕ್ ರೋಷನ್ ತಂದೆ ದೊಡ್ಡ ವ್ಯಕ್ತಿ. ನೀವು ಅವರಿಗೆ ಕ್ಷಮೆ ಯಾಚಿಸದಿದ್ದರೆ ಅವರು ನಿಮ್ಮನ್ನು ಬಿಡುವುದಿಲ್ಲ. ನಿಮ್ಮನ್ನು ಜೈಲಿಗೆ ಕಳಿಸುತ್ತಾರೆ. ನಂತರ ನೀವು ಆತ್ಮಹತ್ಯೆ ಮಾಡಿಕೊಳ್ಳದೆ ವಿಧಿ ಇಲ್ಲ ಎಂದು ಜಾವೇದ್ ಅಖ್ತರ್ ನನಗೆ ಹೇಳಿದ್ದರು. ಇದರಿಂದ ನಾನು ಬಹಳ ಹೆದರಿದ್ದೆ ಎಂದೆಲ್ಲಾ ಕಂಗನಾ ವಾಹಿನಿಯಲ್ಲಿ ಮಾತನಾಡಿದ್ದಾರೆ".
ಇದನ್ನೂ ಓದಿ: ಸಾಜಿದ್ ಖಾನ್ ಮೇಲೆ ಲೈಂಗಿಕ ಕಿರುಕುಳ ಆರೋಪ ಹೊರಿಸಿದ ಶೆರ್ಲಿನ್ ಛೋಪ್ರಾ
"ಲಕ್ಷಾಂತರ ಜನರು ಇದನ್ನು ವೀಕ್ಷಿಸುತ್ತಿರುತ್ತಾರೆ. ಕಂಗನಾ ಅವರ ಹೇಳಿಕೆಯಿಂದ ನನ್ನ ವರ್ಚಸ್ಸಿಗೆ ಧಕ್ಕೆಯಾಗಿದೆ. ಸುಮ್ಮನೆ ಕಂಗನಾ ನನ್ನ ಬಗ್ಗೆ ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ" ಎಂದು ಆರೋಪಿಸಿರುವ ಜಾವೇದ್ ಅಖ್ತರ್, ಅಂಧೇರಿಯ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ನಲ್ಲಿ ದೂರು ದಾಖಲಿಸಿ ಕಂಗನಾ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ. ಕಂಗನಾ ಸಹೋದರಿ ರಂಗೋಲಿ ಚಂದೇಲ್ ಕೂಡಾ ಜಾವೇದ್ ಅಖ್ತರ್ ವಿರುದ್ಧ ಸಾಮಾಜಿಕ ಮಾಧ್ಯಮದಲ್ಲಿ ಇದೇ ರೀತಿ ಆರೋಪ ಮಾಡಿದ್ದರು.