ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಈಗಾಗಲೇ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಬಾಲಿವುಡ್ ನಿರ್ಮಾಪಕರು, ನಿರ್ದೇಶಕರು ಹಾಗೂ ಸುಶಾಂತ್ ಸಿಂಗ್ ಆಪ್ತರ ಹೇಳಿಕೆ ಪಡೆದುಕೊಂಡಿದ್ದಾರೆ
ಸೋಮವಾರ ಮುಂಬೈ ಪೊಲೀಸರು ಬಾಲಿವುಡ್ ಫಿಲ್ಮ್ ಮೇಕರ್ ಮಹೇಶ್ ಭಟ್ ಅವರನ್ನು ವಿಚಾರಣೆ ಮಾಡಿದ್ದಾರೆ. ಸುಶಾಂತ್ ಅವರನ್ನು ಬಿಟ್ಟು ಹೋಗುವಂತೆ ನಾನು ಎಂದಿಗೂ ರಿಯಾ ಚಕ್ರವರ್ತಿಗೆ ಹೇಳಿರಲಿಲ್ಲ. ನನ್ನ ಮೇಲಿನ ಆರೋಪ ಆಧಾರ ರಹಿತವಾದದ್ದು ಎಂದು ಮಹೇಶ್ ಭಟ್ ಹೇಳಿದ್ದಾರೆ. ಅಷ್ಟೇ ಅಲ್ಲ ನನ್ನ ಜೀವನದಲ್ಲಿ ಸುಶಾಂತ್ ಅವರನ್ನು ಭೇಟಿಯಾಗಿರುವುದು ಕೇವಲ 2 ಬಾರಿ ಎಂದು ಮಹೇಶ್ ಭಟ್ ಹೇಳಿದ್ದಾರೆ.
ನಾನು ಎಂದಿಗೂ ಸ್ವಜನ ಪಕ್ಷಪಾತವನ್ನು ಪ್ರೋತ್ಸಾಹಿಸುವುದಿಲ್ಲ. ಸಾಕಷ್ಟು ಹೊಸ ಪ್ರತಿಭೆಗಳಿಗೆ ನಾನು ಅವಕಾಶ ನೀಡಿದ್ದೇನೆ. 2018 ರಲ್ಲಿ ನನ್ನ ಪುಸ್ತಕಕ್ಕೆ ಸಂಬಂಧಿಸಿದಂತೆ ಹಾಗೂ 2020 ಒಮ್ಮೆ ಅವರನ್ನು ಭೇಟಿ ಮಾಡಿದ್ದೆ ಅಷ್ಟೇ ಎಂದು ಮಹೇಶ್ ಭಟ್ ಮುಂಬೈನ ಸಂತ ಕ್ರೂಜ್ ಪೊಲೀಸ್ ಠಾಣೆಯಲ್ಲಿ ಹೇಳಿಕೆ ನೀಡಿದ್ದಾರೆ.
ಕೆಲವೊಂದು ಅನಿವಾರ್ಯ ಕಾರಣಗಳಿಂದ 'ಸಡಕ್-2' ನಿಂದ ಸುಶಾಂತ್ ಸಿಂಗ್ ರಜಪೂತ್ ಅವರನ್ನು ತೆಗೆಯಲಾಯಿತು. ಆದರೆ ರಿಯಾ ಅವರನ್ನು ತನ್ನೊಂದಿಗೆ ನಟಿಸಲು ಸುಶಾಂತ್ ಹೇಳಿದ್ದಕ್ಕೆ ನಾವು ಅವರನ್ನು ಚಿತ್ರದಿಂದ ಕೈ ಬಿಟ್ಟೆವು ಎಂಬ ಆರೋಪ ಸುಳ್ಳು ಎಂದು ಮಹೇಶ್ ಭಟ್ ಸ್ಪಷ್ಟಪಡಿಸಿದ್ದಾರೆ. 'ಸಡಕ್-2' ಚಿತ್ರದ ಮೂಲಕ ಮಹೇಶ್ ಭಟ್ ಸುಮಾರು 21 ವರ್ಷಗಳ ನಂತರ ಮತ್ತೆ ನಿರ್ದೇಶನಕ್ಕೆ ಇಳಿದಿದ್ದಾರೆ. ಆಲಿಯಾ ಭಟ್ ಜೊತೆ ಚಿತ್ರದಲ್ಲಿ ಆದಿತ್ಯ ರಾಯ್ ಕಪೂರ್, ಸಂಜಯ್ ದತ್ ಹಾಗೂ ಪೂಜಾ ಭಟ್ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ.
ಸಿನಿಮಾ ವಿಮರ್ಶಕ ರಾಜೀವ್ ಮಸಂದ್, ನಿರ್ದೇಶಕ-ನಿರ್ಮಾಪಕ ಸಂಜಯ್ ಲೀಲಾ ಬನ್ಸಾಲಿ, ನಿರ್ಮಾಪಕ ಆದಿತ್ಯ ಛೋಪ್ರಾ ಸೇರಿದಂತೆ ಇಲ್ಲಿವರೆಗೂ ಸುಮಾರು 40 ಮಂದಿಯನ್ನು ಸುಶಾಂತ್ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸಲಾಗಿದೆ ಎಂದು ಮುಂಬೈ ಪೊಲೀಸರು ಹೇಳಿದ್ದಾರೆ.
ಇವರೊಂದಿಗೆ ಸುಶಾಂತ್ ಅಪಾರ್ಟ್ಮೆಂಟ್ನಲ್ಲಿ ಅಡುಗೆ ಮಾಡುತ್ತಿದ್ದ ನೀರಜ್ ಸಿಂಗ್, ಸಹಾಯಕ ಕೇಶವ್ ಬಚ್ನೆರ್, ಮ್ಯಾನೇಜರ್ ದೀಪಕ್ ಸಾವಂತ್, ಕ್ರಿಯೇಟಿವ್ ಮ್ಯಾನೇಜರ್ ಸಿದ್ದಾರ್ಥ್ ರಮಾನಾಥಮೂರ್ತಿ, ಸಹೋದರಿಯರಾದ ನೀತು ಹಾಗೂ ಮೀತು ಸಿಂಗ್ ಹಾಗೂ ಇನ್ನಿತರರ ಹೇಳಿಕೆಗಳನ್ನು ಬಾಂದ್ರಾ ಪೊಲೀಸರು ದಾಖಲಿಸಿಕೊಂಡಿದ್ದಾರೆ.
ಜೂನ್ 14 ರಂದು ಸುಶಾಂತ್ ಸಿಂಗ್ ರಜಪೂತ್ ದೇಹ ಮುಂಬೈನ ಅವರ ಅಪಾರ್ಟ್ಮೆಂಟ್ನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಅಂದಿನಿಂದ ಸುಶಾಂತ್ ಸಾವಿನ ಬಗ್ಗೆ ಚರ್ಚೆ ನಡೆಯುತ್ತಲೇ ಇದೆ. ಈ ನಡುವೆ ರಿಯಾ ಚಕ್ರವರ್ತಿ ಟ್ವಿಟ್ಟರ್ನಲ್ಲಿ ಅಮಿತ್ ಷಾ ಅವರಿಗೆ ಸುಶಾಂತ್ ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸಬೇಕು ಎಂದು ಮನವಿ ಮಾಡಿದ್ದರು. ಈ ಮೂಲಕ ಅವರು ತಾವು ಸುಶಾಂತ್ ಅವರೊಂದಿಗೆ ರಿಲೇಶನ್ನಲ್ಲಿದ್ದ ವಿಚಾರವನ್ನು ಬಹಿರಂಗವಾಗಿ ಹೇಳಿಕೊಂಡಿದ್ದರು.