ಕಳೆದೆರಡು ದಿನಗಳ ಹಿಂದಷ್ಟೇ ತೆರೆಕಂಡಿರುವ 'ಮಿಷನ್ ಮಂಗಲ್' ಹಾಗೂ 'ಬಾಟ್ಲಾ ಹೌಸ್' ಸಿನಿಮಾಗಳ ಮೇಲೆ ಸಿನಿ ಕಳ್ಳರ ವಕ್ರದೃಷ್ಟಿ ಬಿದ್ದಿದೆ. ನೈಜ ಘಟನೆಯಾಧಾರಿತ ಈ ಎರಡೂ ಸಿನಿಮಾಗಳು ಇದೀಗ ಆನ್‌ಲೈನ್‌ನಲ್ಲಿ ಸೋರಿಕೆ ಆಗಿವೆ.
ಆಗಸ್ಟ್ 15 ರಂದು ತೆರೆಕಂಡು ಅಕ್ಷಯ್ ಕುಮಾರ್, ವಿದ್ಯಾಬಾಲನ್ ಮುಖ್ಯಭೂಮಿಕೆಯಲ್ಲಿರುವ ಮಿಷನ್ ಮಂಗಲ್ ಹಾಗೂ ಜಾನ್ ಅಬ್ರಾಹಂ ನಟಿಸಿರುವ ಬಾಟ್ಲಾ ಹೌಸ್ ಸಿನಿಮಾಗಳು ಭರ್ಜರಿ ಓಪನಿಂಗ್ ಪಡೆದಿವೆ. ಎರಡೇ ದಿನದಲ್ಲಿ ನಿರ್ಮಾಪಕರ ಜೇಬು ತುಂಬಿಸುತ್ತಿರುವ ಈ ಸಿನಿಮಾಗಳಿಗೆ ತಮಿಳು ರಾಕರ್ಸ್ ಎಂಬ ವೆಬ್‌ಸೈಟ್ ಅಡ್ಡಗಾಲು ಹಾಕಿದೆ. ಸಿನಿಮಾ ಬಿಡುಗಡೆ ದಿನದಂದೇ ವೆಬ್‌ಸೈಟ್ ಈ ಚಿತ್ರಗಳಿಗೆ ಕನ್ನ ಹಾಕಿದೆ. ಪೂರ್ತಿ ಸಿನಿಮಾಗಳನ್ನು ಆನ್ಲೈನ್ಲ್ಲಿ ಲೀಕ್ ಮಾಡಿದ್ದು, ಇದರಿಂದ ಚಿತ್ರದ ಗಳಿಕೆ ಮೇಲೆ ದೊಡ್ಡ ಹೊಡೆತ ಬಿದ್ದಿದೆ.
ಕೆಲ ದಿನಗಳ ಹಿಂದಷ್ಟೇ ಮದ್ರಾಸ್ ಹೈಕೋರ್ಟ್ ತಮಿಳು ರಾಕರ್ಸ್ ಬ್ಯಾನ್ ಮಾಡಿ ಆದೇಶ ಹೊರಡಿಸಿತ್ತು. ಆದರೆ, ಅದು ಮತ್ತೆ ತನ್ನ ಹಳೇ ಚಾಳಿ ಮುಂದುವರೆಸಿದೆ. ಕಷ್ಟಪಟ್ಟು ನಿರ್ಮಿಸಿದ ಸಿನಿಮಾಗಳು ಪೈರಸಿಯಾಗುತ್ತಿದ್ದು, ನಿರ್ಮಾಪಕರು ಹಿಡಿಶಾಪ ಹಾಕುತ್ತಿದ್ದಾರೆ.