ಭಾರತೀಯ ಸಿನಿಮಾ ಕ್ಷೇತ್ರಕ್ಕೆ ನಟಿ ವಿದ್ಯಾಬಾಲನ್ ನೀಡಿದ ಕೊಡುಗೆಯನ್ನು ಗುರುತಿಸಿ ಭಾರತೀಯ ಸೇನೆಯು ಫೈರಿಂಗ್ ರೇಂಜ್ಗೆ ನಟಿಯ ಹೆಸರನ್ನಿಟ್ಟಿದೆ. ಕಾಶ್ಮೀರದ ಗುಲ್ಮಾರ್ಗ್ನಲ್ಲಿರುವ ಫೈರಿಂಗ್ ರೇಂಜ್ಗೆ ವಿದ್ಯಾಬಾಲನ್ ಹೆಸರಿಡಲಾಗಿದೆ. ಹಲವಾರು ಸಾಮಾಜಿಕ ಕಾರ್ಯಕರ್ತರು, ಅಭಿಮಾನಿಗಳು ಈ ಬಗ್ಗೆ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಆದರೆ, ಈವರೆಗೆ ಈ ಕುರಿತಂತೆ ನಟಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
2021 ರ ಆರಂಭದಲ್ಲಿ ವಿದ್ಯಾ ಬಾಲನ್ ತನ್ನ ಪತಿ ಸಿದ್ಧಾರ್ಥ್ ರಾಯ್ ಕಪೂರ್ರೊಂದಿಗೆ ಭಾರತೀಯ ಸೇನೆ ಆಯೋಜಿಸಿದ್ದ ಗುಲ್ಮಾರ್ಗ್ ಚಳಿಗಾಲದ ಉತ್ಸವದಲ್ಲಿ ಭಾಗಿಯಾಗಿದ್ದರು. ಆಸ್ಕರ್ ಪ್ರಶಸ್ತಿ ನೀಡುವ ಆಡಳಿತ ಮಂಡಳಿಯಾದ ಅಕಾಡೆಮಿ ಆಫ್ ಮೋಷನ್ ಪಿಕ್ಚರ್ ಆರ್ಟ್ಸ್ ಆ್ಯಂಡ್ ಸೈನ್ಸಸ್‌ಗೆ ಸೇರಲು ನಟಿಯನ್ನು ಆಹ್ವಾನಿಸಲಾಗಿದೆ.
ವಿದ್ಯಾ ಬಾಲನ್ ಇತ್ತೀಚಿನ ತಮ್ಮ ಸಿನಿಮಾಗಳಲ್ಲಿ ಸಮಾಜದಲ್ಲಿನ ಆಗುಹೋಗುಗಳ ಬಗ್ಗೆ ದನಿಯೆತ್ತುತ್ತಿದ್ದಾರೆ. ಅಮೆಜಾನ್ ಪ್ರೈಮ್ನಲ್ಲಿ ಬಿಡುಗಡೆಯಾದ ಶೆರ್ನಿಯಲ್ಲಿನ ಅಭಿನಯ ಎಲ್ಲರ ಮನಸೂರೆಗೊಂಡಿತ್ತು.
ಶೆರ್ನಿ ಚಿತ್ರದಲ್ಲಿ ನಟಿ, ಅರಣ್ಯಾಧಿಕಾರಿ ಪಾತ್ರ ನಿರ್ವಹಿಸಿದ್ದು, ಸಾಮಾಜಿಕ ಅಡೆತಡೆಗಳ ಮಧ್ಯೆಯೂ ತಾವು ಅಂದುಕೊಂಡಿದ್ದನ್ನು ಸಾಧಿಸಿದ್ದಾರೆ. ಪಿತೃಪ್ರಧಾನ ಸಮಾಜದ ವರ್ತನೆ, ಅಸಂಪ್ರದಾಯಿಕ, ಕಟ್ಟುಪಾಡುಗಳ ವಿರುದ್ಧ ವಿದ್ಯಾ ಹೇಗೆ ಸೆಣಸಾಡುತ್ತಾಳೆ ಅನ್ನೋದು ಸಿನಿಪ್ರಿಯರ ಮನಗೆದ್ದಿತ್ತು.
ಚಿತ್ರದಲ್ಲಿ ವಿದ್ಯಾ ಬಾಲನ್, ನೀರಜ್ ಕಬಿ, ವಿಜಯ್ ರಾಜ್, ಶರತ್ ಸಕ್ಸೇನಾ, ಮುಕುಲ್ ಚಡ್ಡಾ, ಬ್ರಿಜೇಂದ್ರ ಕಲಾ ಮತ್ತು ಇಲಾ ಅರುಣ್ ಸೇರಿ ದೊಡ್ಡ ತಾರಾ ಬಳಗವೇ ಇದೆ. ಚಿತ್ರವು ಮನುಷ್ಯ, ಪ್ರಾಣಿಗಳ ನಡುವೆ ಮಾತ್ರವಲ್ಲ, ಮನುಷ್ಯ-ಮನುಷ್ಯರ ನಡುವೆ ಗೌರವ, ಪರಸ್ಪರ ತಿಳುವಳಿಕೆ ಮತ್ತು ಸಹಬಾಳ್ವೆಯನ್ನು ಸ್ಪರ್ಶಿಸುವ ಸೂಕ್ಷ್ಮ ವಿಷಯವನ್ನು ಹೊಂದಿದೆ.