ಮುಂಬೈ (ಮಹಾರಾಷ್ಟ್ರ) ಕೋವಿಡ್ ಗೆದ್ದ ಸೂಪರ್ ಮಾಡೆಲ್ ಮಿಲಿಂದ್ ಸೋಮನ್ ಮತ್ತೆ ರನ್ನಿಂಗ್ ಟ್ರ್ಯಾಕ್ಗೆ ಇಳಿದಿದ್ದಾರೆ. ಮಿಂಚಿನ ಓಟದ ಮೂಲಕ ದೇಹ ದಂಡನೆಗೆ ಮುಂದಾಗಿರುವ ಮಿಲಿಂದ್, ತಮ್ಮ ಮುಂದಿನ ಗುರಿ ಏನು ಅನ್ನೋದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
ನಾನು ಕೋವಿಡ್ನಿಂದ ಸಂಪೂರ್ಣ ಗುಣಮುಖ ಹೊಂದಿದ್ದೇನೆ. ಏಪ್ರಿಲ್ 5 ರಂದು ನೆಗೆಟಿವ್ ವರದಿ ಬಂದಿದ್ದು ಅಂದಿನಿಂದ ನಿತ್ಯ ನಾನು 5 ರಿಂದ 6 ಕಿ.ಮೀ ಓಡುವ ಮೂಲಕ ದೇಹ ದಂಡಿಸುತ್ತಿದ್ದೇನೆ. ಮಾರಕ ಕಾಯಿಲೆಯಿಂದ ಚೇತರಿಸಿಕೊಂಡ ನಂತರ ತನ್ನ ಮೊದಲ 10,000 ಕಿ.ಮೀ ಓಟವನ್ನು ಸಾಧಿಸುವಲ್ಲಿ ಯಶಸ್ವಿಯಾಗಿದ್ದೇನೆ ಎಂದಿದ್ದಾರೆ.
ಇನ್ನು ನಿಮ್ಮ ಓಟದ ಪ್ರಕ್ರಿಯೆ ಹೇಗಿರಲಿದೆ ಎಂಬ ಬಗ್ಗೆ ಕೇಳಲಾದ ಕೆಲವು ಪ್ರಶ್ನೆಗಳಿಗೆ ಉತ್ತರ ನೀಡಿರುವ 55 ವರ್ಷದ ಸೂಪರ್ ಮಾಡೆಲ್, ನಾನು ಕಾಲಿನ ಬೆರಳುಗಳು ಹೊರಗೆ ಕಾಣಿಸುವಂತಹ ಶೂ ಬಳಸುತ್ತೇನೆ. ಇದರಿಂದ ವೇಗ ಹೆಚ್ಚಾಗುತ್ತದೆ. ನಿಯಮಿತ ಹಾಗೂ ಕ್ರಮಬದ್ಧತೆ ಓಟದಿಂದ ಕಾಲುಗಳ ಬಲ ಹೆಚ್ಚಾಗುತ್ತದೆ. ಈ ರೀತಿಯ ಓಟ ಮೊಣಕಾಲುಗಳಿಗೆ ಒಳ್ಳೆಯದು ಎಂದು ಯಾರು ಮತ್ತು ಯಾವ ರೀತಿ ಓಡಬೇಕು ಅನ್ನುವುದರ ಬಗ್ಗೆ ಮಾಹಿತಿ ನೀಡಿದ್ದಾರೆ.
ಆಹಾರ ಪದ್ಧತಿ ಬಗ್ಗೆಯೂ ಮಾತನಾಡಿದ ಮಿಸ್ಟರ್ ಮಾಡೆಲ್, 'ನಾನು ದಿನಕ್ಕೆ 5-6 ಕಿ.ಮೀ ಓಡುತ್ತಿದ್ದರೆ ನನಗೆ ಯಾವುದೇ ರೀತಿಯ ವಿಶೇಷ ಆಹಾರ ಬೇಕಾಗಿರುವುದಿಲ್ಲ. ಆದರೆ, ನಾನು ದಿನಕ್ಕೆ 50-60 ಕಿ.ಮೀ ಓಡಿದರೆ/ಓಡುತ್ತಿದ್ದರೆ ಹೆಚ್ಚು ತಿನ್ನಬೇಕಾಗಬಹುದು' ಎಂದು ತಮ್ಮ ಆಹಾರ ಸೇವನೆ ಬಗ್ಗೆ ವಿವರಿಸಿದರು.
ಚರ್ಮದ ಬಗ್ಗೆಯೂ ಕಾಳಜಿ ವಹಿಸಿ ಎಂದು ಸಲಹೆ ನೀಡಿರುವ ಮಿಲಿಂದ್ ಸೋಮನ್, ಕಂದು ಬಣ್ಣವನ್ನು ತಪ್ಪಿಸಲು ತಾನು ಯಾವುದೇ ಸನ್‌ಸ್ಕ್ರೀನ್ ಬಳಸುವುದಿಲ್ಲ. ಓಡಿದ ಬಳಿಕ ಸೂರ್ಯನ ಶಾಖ ಬಿಸಿಯಾಗಿದ್ದರೆ ನಾನು ಮುಖದ ಮೇಲೆ ಸ್ವಲ್ಪ ಮೊಸರು ಹಚ್ಚಿಕೊಳ್ಳುತ್ತೇನೆ. ಒಣಗಿದ ಬಳಿಕ ಮತ್ತೆ ಅದನ್ನು ನೀರಿನಿಂದ ತೊಳೆಯುತ್ತೇನೆ. ಇದರಿಂದ ಚರ್ಮಕ್ಕೆ ಒಳ್ಳೆಯದು. ನೀವು ಹೀಗೆ ಮಾಡಿದರೆ ನಿಮ್ಮ ಆರೋಗ್ಯಕ್ಕೂ ಒಳ್ಳೆಯದು ಎಂದು ಕೆಲವು ಟಿಪ್ಸ್ ನೀಡಿದ್ದಾರೆ.
ಮಿಲಿಂದ್ ಮಾರ್ಚ್‌ನಲ್ಲಿ COVID-19 ಟೆಸ್ಟ್ ಮಾಡಿಕೊಂಡಿದ್ದರು. ಆಗ ಅವರಗೆ ಸೋಂಕು ದೃಢಪಟ್ಟಿತ್ತು. ಇತ್ತೀಚೆಗೆ ಮತ್ತೆ ಟೆಸ್ಟ್ಗೆ ಒಳಗಾಗಿದ್ದರು. ವರದಿಯಲ್ಲಿ ನೆಗೆಟಿವ್ ಬಂದಿದ್ದರಿಂದ ಮತ್ತೆ ರನ್ನಿಂಗ್ ಟ್ರ್ಯಾಕ್ನಲ್ಲಿ ಬೆವರು ಹರಿಸುತ್ತಿದ್ದಾರೆ. ಪತ್ನಿಯೂ ಸಹ ಇದಕ್ಕೆ ಸಾಥ್ ನೀಡುತ್ತಿದ್ದಾರೆ.