ಮುಂಬೈ: ಪಾಕಿಸ್ತಾನದ ವಿರುದ್ಧ ಭಾರತೀಯ ಸೇನಾ ಕಾರ್ಯಾಚರಣೆ ಆಧರಿಸಿದ 'ಉರಿ' ಚಲನಚಿತ್ರ ಬಾಕ್ಸ್ ಆಫೀಸ್ ಕೊಳ್ಳೆ ಹೊಡೆದಿತ್ತು. ಜನವರಿ 11 ರಂದು ಬಿಡುಗಡೆಯಾದ ಸಿನಿಮಾದಲ್ಲಿ ವಿಕ್ಕಿ ಕೌಶಲ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.
ವಿಶೇಷ ಎಂದರೆ, ಈ ಸಿನಿಮಾ ನೋಡಿ ಪ್ರೇರಿತನಾದ ವ್ಯಕ್ತಿಯೊಬ್ಬರು ಭಾರತೀಯ ಸೈನ್ಯ ಸೇರಿದ್ದಾರೆ. 2016ರ ಸೆಪ್ಟೆಂಬರ್ 18ರಂದು ಜಮ್ಮು ಕಾಶ್ಮೀರದ ಉರಿ ಸೇನಾ ನೆಲೆಯ ಮೇಲೆ ಪಾಕಿಸ್ತಾನದ ನಾಲ್ವರು ಯೋಧರು ದಾಳಿ ಮಾಡಿದ ಪರಿಣಾಮ 19 ಸೈನಿಕರು ಹುತಾತ್ಮರಾಗಿದ್ದರು. ಇದಕ್ಕೆ ಉತ್ತರ ನೀಡಲು ಭಾರತದ ಯೋಧರು ಅದೇ ತಿಂಗಳ 28-29ರಂದು ಪಾಕಿಸ್ತಾನಕ್ಕೆ ತಕ್ಕ ಪಾಠ ಕಲಿಸುವ ಉದ್ದೇಶದಿಂದ ಸರ್ಜಿಕಲ್ ಸ್ಟ್ರೈಕ್ ನಡೆಸುತ್ತಾರೆ. ಇದಕ್ಕಾಗಿ ಭಾರತೀಯ ಸೇನೆ ಯಾವ ರೀತಿ ಸಿದ್ಧತೆ ಮಾಡಿಕೊಂಡಿತ್ತು. ಈ ದಾಳಿ ವೇಳೆ ಎದುರಾದ ಕಷ್ಟಗಳೇನು ಎಂಬುದನ್ನು 'ಉರಿ' ಸಿನಿಮಾದಲ್ಲಿ ತೋರಿಸಲಾಗಿದೆ.
ಈ ಸಿನಿಮಾ ಚಿತ್ರ ವಿಮರ್ಶಕರು ಹಾಗೂ ಸಿನಿಮಾ ಪ್ರಮುಖರಿಂದ ಭಾರೀ ಪ್ರಶಂಸೆಗೆ ಪಾತ್ರವಾಗಿತ್ತು. ಇನ್ನು 45 ಕೋಟಿ ರೂಪಾಯಿ ಬಜೆಟ್ನ ಈ ಸಿನಿಮಾ 342 ಕೋಟಿ ರೂಪಾಯಿ ಲಾಭ ಮಾಡಿತ್ತು. 'ನಮ್ಮ ಸಿನಿಮಾದಿಂದ ಸ್ಫೂರ್ತಿ ಪಡೆದ ಅಭಿಮಾನಿ ಸೈನ್ಯ ಸೇರಿರುವುದು ನಿಜಕ್ಕೂ ಸಂತೋಷದ ವಿಷಯ. ಈ ಸಿನಿಮಾ ಎಲ್ಲರ ಹೃದಯದಲ್ಲಿ ಚಿರಕಾಲ ಉಳಿಯಲಿದೆ. ಉರಿ ನೋಡಿದ ನಂತರ ನಾನು ನೌಕಾಸೇನೆಗೆ ಸೇರಿರುವುದಾಗಿ ಅಭಿಮಾನಿಯೊಬ್ಬರು ನನ್ನ ಬಳಿ ಹೇಳಿರುವುದಾಗಿ ವಿಕ್ಕಿ ಕೌಶಲ್ ಹೇಳಿಕೊಂಡು ಸಂತೋಷ ವ್ಯಕ್ತಪಡಿಸಿದ್ದಾರೆ'. ಆದಿತ್ಯಧರ್ ನಿರ್ದೇಶನದ ಸಿನಿಮಾದಲ್ಲಿ ಪರೇಶ್ ರಾವಲ್, ರಜಿತ್ ಕಪೂರ್, ಯಾಮಿ ಗೌತಮ್, ಕೃತಿ ಕುಲ್ಹಾರಿ ಹಾಗೂ ಇನ್ನಿತರರು ನಟಿಸಿದ್ದಾರೆ.