ಹೈದರಾಬಾದ್ : ಬಾಲಿವುಡ್‌ನಲ್ಲಿ ಸ್ಟಾರ್ ಜೋಡಿಗಳು ಮದುವೆಯಾದಾಗ ಅವರ ವೇಷಭೂಷಣಗಳು ಮತ್ತು ಬೆಲೆಬಾಳುವ ಆಭರಣಗಳ ಬಗ್ಗೆ ಚರ್ಚೆಯಾಗುವುದು ಸಾಮನ್ಯ. ಇದೀಗ ಕತ್ರಿನಾ ಕೈಫ್ ಅವರು ಮದುವೆಗೆ ಧರಿಸಿದ ಲೆಹೆಂಗಾ ಮತ್ತು ಆಭರಣಗಳ ಕುರಿತು ಸಾಮಾಜಿಕ ಜಾಲತಾಣದಲ್ಲಿ ಭಾರಿ ಚರ್ಚೆಯಾಗುತ್ತಿದೆ.
ಬಾಲಿವುಡ್‌ನ ಹಿರಿಯ ನಟಿಯರಾದ ಐಶ್ವರ್ಯಾ ರೈಯಿಂದ ಹಿಡಿದು ಪ್ರಿಯಾಂಕಾ ಚೋಪ್ರಾ ಅವರು ಮದುವೆಯ ವೇಷಭೂಷಣ ಹಾಗೂ ಆಭರಣಗಳಿಗಾಗಿ ಲಕ್ಷಾಂತರ ರೂ. ಮೌಲ್ಯವನ್ನು ಖರ್ಚು ಮಾಡಿದ್ದಾರೆ. ನಿನ್ನೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಕತ್ರಿನಾ ಕೈಫ್ ಮತ್ತು ವಿಕ್ಕಿ ಕೌಶಲ್ ಮದುವೆಯ ಉಡುಪು ಇದೀಗ ಎಲ್ಲರ ಗಮನ ಸೆಳೆದಿದೆ.
ಬಾಲಿವುಡ್ ದಂಪತಿ ಮದುವೆಗೆ ಹೆಚ್ಚಿನದಾಗಿ ವೇಷಭೂಷಣಗಳನ್ನು ಪ್ರಸಿದ್ಧ ಫ್ಯಾಷನ್ ಡಿಸೈನರ್ ಸಬ್ಯಸಾಚಿ ಮುಖರ್ಜಿ ಸಿದ್ಧಪಡಿಸುತ್ತಾರೆ. ಅನುಷ್ಕಾ ಶರ್ಮಾ, ಪ್ರಿಯಾಂಕಾ ಚೋಪ್ರಾ ಸೇರಿದಂತೆ ಅನೇಕ ಬಾಲಿವುಡ್ ನಟಿಯರ ವಿವಾಹದ ಲೆಹೆಂಗಾಗಳು ಮತ್ತು ಆಭರಣಗಳನ್ನು ಸಬ್ಯಸಾಚಿಯೇ ಸಿದ್ಧಪಡಿಸಿದ್ದಾರೆ.
ಹಾಗೆಯೇ ಕತ್ರಿನಾ ವಸ್ತ್ರ ವಿನ್ಯಾಸ ಹಾಗೂ ಆಭರಣಗಳನ್ನು ಸಹ ಸಬ್ಯಸಾಚಿ ಮುಖರ್ಜಿಯೇ ವಿನ್ಯಾಸಗೊಳಿಸಿದ್ದು, ವಿಕ್ಕಿ ಕೌಶಲ್ ಅವರ ಶೇರ್ವಾನಿಯನ್ನ ಆಕರ್ಷಕವಾಗಿ ಸಿದ್ಧಪಡಿಸಿದ್ದಾರೆ.
ಡೈಮಂಡ್ ಲೆಹೆಂಗಾ ಧರಿಸಿದ ಕತ್ರಿನಾ ಕೈಫ್ : ಮದುವೆಯಲ್ಲಿ ಕತ್ರಿನಾ ಸುಂದರವಾದ ಕೆಂಪು ಬಣ್ಣದ ಲೆಹೆಂಗಾವನ್ನು ಧರಿಸಿದ್ದರು. ಪಂಜಾಬಿ ಸಂಪ್ರದಾಯಗಳಿಗೆ ಅನುಗುಣವಾಗಿ ಲೆಹೆಂಗಾದಲ್ಲಿನ ಮುಸುಕನ್ನು ಚಿನ್ನದಿಂದ ಅಲಂಕರಿಸಲಾಗಿತ್ತು. ಅಷ್ಟೇ ಅಲ್ಲ, ಲೆಹೆಂಗಾದಲ್ಲಿ ಮುತ್ತು, ವಜ್ರಗಳನ್ನು ಸಹ ಜೋಡಿಸಲಾಗಿದೆ. 22 ಕ್ಯಾರಟ್ ಚಿನ್ನದಿಂದ ಉಡುಪನ್ನು ವಿನ್ಯಾಸಗೊಳಿಸಲಾಗಿದೆ ಎನ್ನಲಾಗಿದೆ.
ನಿಶ್ಚಿತಾರ್ಥ ಉಂಗುರದ ಬೆಲೆ : ಕತ್ರಿನಾ-ವಿಕ್ಕಿ ನಿಶ್ಚಿತಾರ್ಥದ ಉಂಗುರದ ಬೆಲೆ ₹7.41 ಲಕ್ಷ ಎಂದು ಹೇಳಲಾಗುತ್ತಿದೆ. ಇದು ರಾಜಕುಮಾರಿ ಡಯಾನಾ ಅವರ ಐಕಾನಿಕ್ ನೀಲಮಣಿ ಉಂಗುರದಂತೆ ಕಾಣುತ್ತದೆ. ಇದು ವಜ್ರದ ಉಂಗುರವಾಗಿದ್ದು, ವಜ್ರ ಮತ್ತು ನೀಲಮಣಿ ಕಲ್ಲುಗಳಿಂದ ಕೂಡಿದೆ.
ವಜ್ರದ ಮಂಗಳಸೂತ್ರ : ಕತ್ರಿನಾ ಕೈಫ್ ಧರಿಸಿರುವ ವಜ್ರದ ಮಂಗಳಸೂತ್ರವನ್ನು ಸಬ್ಯಸಾಚಿಯವರ ಬೆಂಗಾಲ್ ಟೈಗರ್ ಸಂಗ್ರಹದಿಂದ ರಚಿಸಲಾಗಿದೆ. ಮಂಗಳಸೂತ್ರವು ಕಪ್ಪು ಮತ್ತು ಚಿನ್ನದ ಮಣಿಗಳಿಂದ ಅಲಂಕರಿಸಲ್ಪಟ್ಟಿದೆ. ಕೆಳಭಾಗದಲ್ಲಿ ಎರಡು ವಜ್ರದ ಮಣಿಗಳಿಂದ ಅಲಂಕರಿಸಲ್ಪಟ್ಟಿದೆ.
ವಿಕ್ಕಿ ಕೌಶಲ್ ಶೇರ್ವಾನಿ : ವಿಕ್ಕಿ ಕೌಶಲ್ ಅವರ ಶೇರ್ವಾನಿ ಬಗ್ಗೆ ಮಾತನಾಡುದಾದ್ರೆ, ಇದನ್ನು ಸಹ ಸಬ್ಯಸಾಚಿ ಮುಖರ್ಜಿಯೇ ಸಿದ್ಧಪಡಿಸಿದ್ದಾರೆ. ಶೆರ್ವಾನಿಯಲ್ಲಿ ಚಿನ್ನದ ಲೇಪಿತ ಬೆಂಗಾಲ್ ಟೈಗರ್ ಬಟನ್ ಇತ್ತು. ರೋಸ್ ಕಟ್ ವಜ್ರಗಳು, ಸ್ಫಟಿಕ ಶಿಲೆ ಬಳಸಿ ಮಾಡಿದ್ದ ಜ್ಯುವೆಲ್ಲರಿ ಧರಿಸಿ ವಿಕ್ಕಿ ಕೌಶಲ್ ವರನಾಗಿ ಮಿಂಚಿದ್ರು.