ನಮ್ಮ ದೇಶಕ್ಕೆ ಇಂಡಿಯಾ ಎಂಬ ಹೆಸರನ್ನು ಬ್ರಿಟಿಷರು ಕೊಟ್ಟಿದ್ದು, ಆ ಹೆಸರನ್ನು ಬದಲಾಯಿಸಿ ಭಾರತ ಎಂದು ಮರುನಾಮಕರಣ ಮಾಡಬೇಕು ಎಂದು ಬಾಲಿವುಡ್ ನಟಿ ಕಂಗನಾ ರಣಾವತ್ ಹೇಳಿದ್ದಾರೆ.
ಈ ಕುರಿತು ಇನ್ಸ್ಟಾಗ್ರಾಂನಲ್ಲಿ ಎರಡು ಪೋಸ್ಟ್ಗಳನ್ನು ಹಾಕಿರುವ ಕಂಗನಾ, ಭಾರತ ಎಂಬ ಪದದ ಅರ್ಥವೇನು ಎಂದು ವಿವರಿಸುವುದರ ಜೊತೆಗೆ, ಆ ಹೆಸರಿಡುವ ಮೂಲಕ ಬ್ರಿಟಿಷರ ಗುಲಾಮಗಿರಿಯಿಂದ ಭಾರತೀಯರು ಆಚೆ ಬರಬೇಕು ಎಂದು ಆಗ್ರಹಿಸಿದ್ದಾರೆ.
ಭಾರತ ಎಂಬ ಪದ ಮೂರು ಸಂಸ್ಕೃತ ಪದಗಳಿಂದ ಆಧರಿಸಿದೆ. ಭ (ಭವ), ರ (ರಾಗ) ಮತ್ತು ತ (ತಾಳ) ಎಂಬ ಪದಗಳಿಂದ ಬಂದಿದೆ. ಇದು ನಮ್ಮ ದೇಶದ ಬುನಾದಿ. ಇಂಡಿಯಾ ಎಂಬ ಪದವನ್ನು ಭಾರತಕ್ಕೆ ಕೊಟ್ಟಿದ್ದು ಬ್ರಿಟಿಷರು. ಇಂಡಸ್ ನದಿಯ ಪೂರ್ವಕ್ಕೆ ಇರುವುದರಿಂದ ಅವರು ಇಂಡಿಯಾ ಎಂಬ ಹೆಸರನ್ನು ಕೊಟ್ಟಿದ್ದಾರೆ. ಆ ಪದವನ್ನು ಬದಲಾಯಿಸಿ, ಭಾರತ ಎಂದು ಮರುನಾಮಕರಣ ಮಾಡಬೇಕಿದೆ ಎಂದು ಕಂಗನಾ ಹೇಳಿಕೊಂಡಿದ್ದಾರೆ.
ಭಾರತದ ಆತ್ಮವಾಗಿರುವ ಆಧ್ಯಾತ್ಮಿಕತೆ ಮತ್ತು ಜ್ಞಾನ ಭಂಡಾರವನ್ನು ವಿಸ್ತರಿಸಿದರೆ, ನಾವು ಜಗತ್ತಿನ ಸರ್ವಶಕ್ತ ರಾಷ್ಟ್ರಗಳಲ್ಲಿ ಒಂದಾಗಬಹುದು ಎಂದು ಅಭಿಪ್ರಾಯ ವ್ಯಕ್ತಪಡಿಸಿರುವ ಕಂಗನಾ, ನಮ್ಮ ವೇದಗಳು, ಯೋಗ ಮತ್ತು ಭಗವದ್ಗೀತೆಯ ಬಗ್ಗೆ ಎಲ್ಲರೂ ಹೆಚ್ಚುಹೆಚ್ಚು ಆಸಕ್ತಿಯನ್ನು ಬೆಳಸಿಕೊಳ್ಳಬೇಕು ಎಂದು ಹೇಳಿದ್ದಾರೆ.
ಇದನ್ನೂ ಓದಿ: ಶಾಲೆ ತೆರೆಯುವ ನಿರ್ಧಾರವನ್ನು ಎಚ್ಚರಿಕೆಯಿಂದ ತೆಗೆದುಕೊಳ್ಳಬೇಕು: ವಿ.ಕೆ.ಪೌಲ್