ನವದೆಹಲಿ: ಲಾಸ್ ಏಂಜಲೀಸ್ನಲ್ಲಿರುವ ಡಾಲ್ಬಿ ಥಿಯೇಟರ್ನಲ್ಲಿ ನಡೆದ 94ನೇ ಅಕಾಡೆಮಿ ಪ್ರಶಸ್ತಿ ಪ್ರದಾನ ಸಮಾರಂಭವು ಪ್ರತಿಷ್ಠಿತ ಆಸ್ಕರ್ ಇತಿಹಾಸದಲ್ಲಿ ಹಲವು ಕಾರಣಗಳಿಗೆ ಹೆಸರು ಮಾಡಿತು. ಅದರಲ್ಲಿ ನಟ ವಿಲ್ ಸ್ಮಿತ್ ಅವರ ಕಪಾಳಮೋಕ್ಷ ವಿವಾದವೂ ಹೌದು. ಈ ಘಟನೆ ಆಸ್ಕರ್ ಪ್ರಶಸ್ತಿ ಸಮಾಂಭರದಲ್ಲಿ ಒಂದು ಕಪ್ಪು ಚುಕ್ಕೆಯಾಗಿದೆ.
ಪ್ರಶಸ್ತಿ ಸಮಾರಂಭದ ವೇದಿಕೆಯಲ್ಲಿ ನಟ ವಿಲ್ ಸ್ಮಿತ್ ಅವರು ಹಾಸ್ಯನಟ ಕ್ರಿಸ್ ರಾಕ್ ಅವರಿಗೆ ಕಪಾಳಮೋಕ್ಷ ಮಾಡಿದ ಸುದ್ದಿ ಪ್ರಪಂಚದಾದ್ಯಂತ ಸದ್ದು ಮಾಡ್ತಿದೆ. ಇದೀಗ ಎಲ್ಲಡೆ ಆಕ್ರೋಶ ವ್ಯಕ್ತವಾಗುತ್ತಿದೆ. ಬಾಲಿವುಡ್ ಮತ್ತು ಹಾಲಿವುಡ್‌ನ ಹಲವು ಸೆಲೆಬ್ರಿಟಿಗಳು ಕೂಡ ಈ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ. ಬಿಟೌನ್ ಬೆಡಗಿ ಕಂಗನಾ ರಣಾವತ್ ಕೂಡ ಈ ಘಟನೆಯ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. 'ಯಾವುದೋ ಮೂರ್ಖರು ಕೆಟ್ಟ ಜೋಕ್ ಮಾಡಲು ನನ್ನ ತಾಯಿ ಅಥವಾ ಸಹೋದರಿಯ ಅನಾರೋಗ್ಯದ ಕುರಿತು ಬಳಸಿದರೆ ನಾನು ಅವರಿಗೆ ವಿಲ್ ಸ್ಮಿತ್ ರೀತಿ ಕಪಾಳಮೋಕ್ಷ ಮಾಡುತ್ತೇನೆ. ಅವರು ನನ್ನ ‘ಲಾಕ್ ಅಪ್’ ಶೋಗೆ ಬರಬೇಕು ಎಂದು ಆಫರ್ ನೀಡಿದ್ದಾರೆ.
ಸಮಾರಂಭದಲ್ಲಿ ಕ್ರಿಸ್ ರಾಕ್ ಅವರು ವಿಲ್ ಸ್ಮಿತ್ ಅವರ ಪತ್ನಿ ಜಡಾ ಪಿಂಕೆಟ್ ಸ್ಮಿತ್ ಅವರ ಬಗ್ಗೆ ಹಾಸ್ಯ ಮಾಡಿದ್ದರು. ಈ ಹಿನ್ನೆಲೆ ಕೋಪಕೊಂಡ ವಿಲ್ ಸ್ಮಿತ್ ವೇದಿಕೆಯಲ್ಲೇ ಕ್ರಿಸ್‍ರಾಕ್ ಅವರ ಕಪಾಳಕ್ಕೆ ಹೊಡೆದಿದ್ದರು. ಈ ಘಟನೆ ಎಲ್ಲೆಡೆ ಸುದ್ದಿಯಾಗಿದೆ. ತಮ್ಮ ವೈಯಕ್ತಿಕ ಜೀವನಕ್ಕೆ ಯಾರೇ ಮೂಗು ತೂರಿಸಿದರು ಈ ಪರಿಸ್ಥಿತಿ ಎದುರಿಸಬೆಕಾಗುತ್ತೆ ಎಂದು ಕಾಮೆಂಟ್ ಮಾಡುತ್ತಿದ್ದಾರೆ.
ಕಾರ್ಡಿ ಬಿ. ಮರಿಯಾ ಶ್ರೀವರ್, ಟ್ರೆವರ್ ನೋಹ್ ಸೇರಿದಂತೆ ಇತರೆ ಹಾಲಿವುಡ್ ತಾರೆಯರು ಸಾಮಾಜಿಕ ಜಾಲತಾಣದ ಮೂಲಕ ಈ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ. ಈ ಘಟನೆಯಿಂದ ಅಂದು ಸಮಾರಂಭದಲ್ಲಿದ್ದ ತಾರಾ ಬಳಗ ದಿಗ್ಭ್ರಮೆಗೊಂಡಿದ್ದರು. ಆದರೆ, ಘಟನೆ ಬಗ್ಗೆ ಹಲವು ಬೇಸರ ವ್ಯಕ್ತಪಡಿಸುತ್ತಿದ್ದಂತೆ ವಿಲ್ ಸ್ಮಿತ್ ತಮ್ಮ ವರ್ತನೆಗೆ ಕ್ಷಮೆಯಾಚಿಸಿದ್ದಾರೆ.