ಬಾಲಿವುಡ್ ಚಿತ್ರರಂಗದಲ್ಲಿ ಸ್ವಜನಪಕ್ಷಪಾತದ ಬಗ್ಗೆ ಪರ-ವಿರೋಧ ಚರ್ಚೆಗಳು ನಡೆಯುತ್ತಲೇ ಇದೆ. ಕೆಲವರು ತಮಗೂ ಕೂಡಾ ಕಹಿ ಅನುಭವ ಉಂಟಾಗಿದೆ ಎಂದು ಹೇಳಿಕೊಂಡರೆ ಮತ್ತೆ ಕೆಲವರು ನಮಗೆ ಇದುವರೆಗೂ ಅಂತ ಸಮಸ್ಯೆ ಆಗಿಲ್ಲ ಎಂದು ಹೇಳಿದ್ದಾರೆ.
ನಟ ಚುಂಕಿ ಪಾಂಡೆ ಕೂಡಾ ಈಗ ನೆಪೋಟಿಸಂ ಬಗ್ಗೆ ಮಾತನಾಡಿದ್ದಾರೆ. ಯಾವುದೇ ಚಿತ್ರರಂಗ ಆಗಲಿ ನಟನ ಪ್ರತಿಭೆಯನ್ನು ನೋಡುತ್ತದೆ. ನಾನು ಕೂಡಾ ಹೊರಗಿನಿಂದ ಬಂದವನೇ. ನನಗೆ ಯಾವುದೇ ಸಿನಿಮಾ ಹಿನ್ನೆಲೆ ಇಲ್ಲ, ಆದರೆ ಇದುವರೆಗೂ ನಾನು ಸ್ವಜನಪಕ್ಷಪಾತದಂತ ಯಾವುದೇ ಸಮಸ್ಯೆಯನ್ನು ಎದುರಿಸಿಲ್ಲ ಎಂದು ಹೇಳಿದ್ದಾರೆ.
ನಾನು 33 ವರ್ಷಗಳಿಂದಲೂ ಚಿತ್ರರಂಗದಲ್ಲಿ ಸಕ್ರಿಯನಾಗಿದ್ದೇನೆ. ನನ್ನ ಕುಟುಂಬದಲ್ಲಿ ನನ್ನನ್ನು ಹೊರತುಪಡಿಸಿ ಬೇರೆ ಯಾರಿಗೂ ಸಿನಿಮಾ ಗೊತ್ತಿಲ್ಲ. ಚಿತ್ರರಂಗವು ನಟ-ನಟಿಯ ಪ್ರತಿಭೆ ಹಾಗೂ ಅವರ ಡೆಡಿಕೇಷನ್ ಮೇಲೆ ಕಾರ್ಯ ನಿರ್ವಹಿಸುತ್ತಿದೆ. ಯಾರು ಬೇಡಿಕೆಯಲ್ಲಿರುತ್ತಾರೋ ಅವರು ಹೆಚ್ಚು ಹಣ ಸಂಪಾದಿಸುತ್ತಾರೆ. ಅದು ಹೊರಗಿನಿಂದ ಬಂದವರಾದರೂ ಆಗಿರಬಹುದು ಅಥವಾ ಸ್ಟಾರ್ ಮಕ್ಕಳಾದರೂ ಆಗಿರಬಹುದು.
ಈ ಚಿತ್ರರಂಗದಲ್ಲಿ ಎಲ್ಲರಿಗೂ ಸೋಲು, ಗೆಲುವು ಇದ್ದದ್ದೇ. ಇಂದು ನಿಮ್ಮ ಗೆಲುವು ನಾಳೆ ಬೇರೆಯವರ ಪಾಲಾಗಬಹುದು. ಅದೇ ರೀತಿ ಇಂದು ನೀವು ಸೋತರೆ ನಾಳೆ ಗೆಲುವು ಸಾಧಿಸಬಹುದು. ನಟ ಗೋವಿಂದ 1986 ರಲ್ಲಿ ನಾನು 1987 ರಲ್ಲಿ ಚಿತ್ರರಂಗಕ್ಕೆ ಕಾಲಿಟ್ಟೆವು. ಅದೇ ರೀತಿ ಅಮೀರ್ ಖಾನ್ 1988, ಸಲ್ಮಾನ್ ಖಾನ್ 1989, ಶಾರುಖ್ ಖಾನ್ 1990 ಹಾಗೂ ಮುಂದಿನ ಎರಡು ವರ್ಷಗಳ ನಂತರ ಅಜಯ್ ದೇವ್ಗನ್ ಹಾಗೂ ಅಕ್ಷಯ್ ಕುಮಾರ್ ಚಿತ್ರರಂಗಕ್ಕೆ ಬಂದರು. ಇದು ಇಲ್ಲಿಗೆ ನಿಲ್ಲಲಿಲ್ಲ, ನಂತರ ಕೂಡಾ ಅನೇಕ ಹೀರೋಗಳು ಬಾಲಿವುಡ್ಗೆ ಬಂದರು. ಏಕೆಂದರೆ ಜನರು ಯಾವಾಗಲೂ ಹೊಸದನ್ನು ಬಯಸುತ್ತಾರೆ ಎಂದು ಚುಂಕಿ ಪಾಂಡೆ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಸುಮಾರು 80 ಸಿನಿಮಾಗಳಲ್ಲಿ ನಟಿಸಿರುವ ಚುಂಕಿ ಪಾಂಡೆ, ನಾನು ಬಾಂಗ್ಲಾದೇಶಕ್ಕೂ ಹೋಗಿ ಕೆಲಸ ಮಾಡಿ ಬಂದಿದ್ದೇನೆ. ಯಾವಾಗಲೂ ನೀವು ಯಶಸ್ಸನ್ನು ಹಿಡಿದಿಟ್ಟುಕೊಳ್ಳಲು ಸಾಧ್ಯವಿಲ್ಲ. ಅದೇ ರೀತಿ ಯಶಸ್ಸು ಎಲ್ಲರಿಗೂ ದೊರೆಯುವುದಿಲ್ಲ. ಚಿತ್ರರಂಗಕ್ಕೆ ಬಂದ ಕೂಡಲೇ ಜನರು ನನ್ನನ್ನು ಗುರುತಿಸಲಿಲ್ಲ. ಅದಕ್ಕೆ ಬಹಳ ವರ್ಷಗಳೇ ಬೇಕಾಯ್ತು. ನೀವು ಗುರಿ ಸಾಧಿಸಲು ಯಾವಾಗಲೂ ಕೆಲಸ ಮಾಡುತ್ತಿರಬೇಕು. ನಿಮ್ಮ ಯಶಸ್ಸು ನಿಮ್ಮ ಕೈಯ್ಯಲ್ಲಿದೆ ಎಂಬುದು ನನ್ನ ಅಭಿಪ್ರಾಯ ಎಂದು ಚುಂಕಿ ಪಾಂಡೆ ಹೇಳಿದ್ದಾರೆ. ಹೌಸ್ಫುಲ್ ಸೀರೀಸ್ನಲ್ಲಿ ಚುಂಕಿ ಪಾಂಡೆ ಆಖ್ರಿ ಪಾಸ್ತಾ ಪಾತ್ರದ ಮೂಲಕ ಹೆಸರಾಗಿದ್ದಾರೆ.