ಹೈದರಾಬಾದ್: ಬಹುಮುಖ ನಟ ಇರ್ಫಾನ್ ಖಾನ್ ಸಿನಿಮಾ ಜಗತ್ತಿನಲ್ಲಿ ಉನ್ನತ ಮಟ್ಟಕ್ಕೆ ತಲುಪಲು ಸಾಕಷ್ಟು ಕಷ್ಟಪಟ್ಟಿದ್ದಾರೆ ಎಂದು ಅವರ ಬಾಲ್ಯದ ಗೆಳೆಯ ಭರತ್‌ಪುರದ ಎಸ್‌ಪಿ ಹೈದರ್ ಅಲಿ ಜೈದಿ ಹೇಳಿದ್ದಾರೆ.
"ಅವರು ಇನ್ನು ನೆನಪು ಮಾತ್ರ ಅನ್ನುವುದನ್ನು ನನಗೆ ಇನ್ನೂ ನಂಬಲಾಗುತ್ತಿಲ್ಲ. ಅವರು ಜೀವನವನ್ನು ಇಷ್ಟಪಟ್ಟು ಬದುಕಿದವರು. ಇರ್ಫಾನ್ ಕೇವಲ ನಟಿಸಲಿಲ್ಲ, ಬದಲಾಗಿ ಪ್ರತಿಯೊಂದು ಪಾತ್ರಗಳಲ್ಲೂ ತಾವಾಗಿ ಜೀವಿಸಿದ್ದರು" ಎಂದು ಹೈದರ್ ಅಲಿ ಜೈದಿ ಹೇಳಿದರು.
"ಇರ್ಫಾನ್ ತನ್ನ ಸ್ವಂತ ಪ್ರಯತ್ನದಿಂದ ಉನ್ನತ ಮಟ್ಟಕ್ಕೇರಿದವರು. ಅವರ ತಾಯಿ ಜೈಪುರಕ್ಕೆ ಹಿಂತಿರುಗಿ ಬಂದು ಅಲ್ಲಿ ಶಿಕ್ಷಕನಾಗಿ ಕಾರ್ಯನಿರ್ವಹಿಸುವಂತೆ ಆಗಾಗ ಹೇಳುತ್ತಿದ್ದರು. ಇರ್ಫಾನ್ ರೈಲಿನಲ್ಲೇ ಪ್ರಯಾಣಿಸುತ್ತಿದ್ದರು, ಕೆಲವೊಮ್ಮೆ ತಿನ್ನಲು ಏನೂ ಸಿಗುತ್ತಿರಲಿಲ್ಲ. ಆರ್ಥಿಕವಾಗಿ ಬಹಳ ಸಮಸ್ಯೆಗಳನ್ನ ಅವರು ಎದುರಿಸಿದ್ದರು" ಎಂದು ಹೈದರ್ ಅಲಿ ಹೇಳಿದರು.
"ಇರ್ಫಾನ್ ಇಲ್ಲದಿದ್ದರೆ ನನ್ನ ಬಾಲ್ಯವೇ ಅಪೂರ್ಣವಾಗುತ್ತಿತ್ತು. ನಾವಿಬ್ಬರೂ ಉತ್ತಮ ಸ್ನೇಹಿತರಾಗಿದ್ದೆವು ಮತ್ತು ನಮ್ಮ ಕುಟುಂಬದವರು ಕೂಡಾ ಆಪ್ತರಾಗಿದ್ದರು. ಒಂದು ಸಂದರ್ಭದಲ್ಲಿ ನನ್ನ ಎಲ್ಲಾ ಸ್ನೇಹಿತರು ಬಿಟ್ಟುಹೋದಾಗಲೂ ನನ್ನ ಸಹಾಯಕ್ಕೆ ಇರ್ಫಾನ್ ಇದ್ದರು" ಎಂದು ಹೈದರ್ ಅಲಿ ಜೈದಿ ತಮ್ಮ ಗೆಳೆತನದ ಕುರಿತು ಹೇಳಿದರು.