ಪಾಟ್ನಾ (ಬಿಹಾರ): ಬಾಲಿವುಡ್‌ನ ದಿವಂಗತ ನಟ ಸುಶಾಂತ್ ಸಿಂಗ್ ರಜಪೂತ್ ಖಾತೆಯಿಂದ ನಟಿ ರಿಯಾ ಚಕ್ರವರ್ತಿ ಅವರ ಖಾತೆಗೆ ಭಾರೀ ಮೊತ್ತದ ಹಣ ವರ್ಗಾಯಿಸಲಾಗಿದೆ ಎಂದು ಸುಶಾಂತ್ ಸಿಂಗ್ ಸೋದರ ಸಂಬಂಧಿಯೂ ಆಗಿರುವ ಬಿಜೆಪಿ ಶಾಸಕ ನೀರಜ್ ಕುಮಾರ್ ಸಿಂಗ್ ಬಬ್ಲು ಆರೋಪಿಸಿದ್ದಾರೆ.
ನಟಿ ರಿಯಾ ಚಕ್ರವರ್ತಿ ವಿರುದ್ಧ ಸುಶಾಂತ್ ಸಿಂಗ್ ತಂದೆ ದೂರು ನೀಡಿದ್ದಾರೆ. ಸುಶಾಂತ್ ಖಾತೆಯಿಂದ ಅವರ ಖಾತೆಗೆ ದೊಡ್ಡ ಮೊತ್ತದ ಹಣ ವರ್ಗಾಯಿಸಲಾಗಿದೆ ಮತ್ತು ಅವರಿಬ್ಬರೂ ಕೆಲ ಕಂಪನಿಗಳಿಗೆ ಜಂಟಿ ಖಾತೆಗಳನ್ನು ಹೊಂದಿದ್ದರು. ಅದರ ಮೂಲಕ ಸುಶಾಂತ್ಗೆ ಮೋಸ ಮಾಡಲಾಗಿದೆ. ಈ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದು, ಎಲ್ಲವೂ ಬಹಿರಂಗಗೊಳ್ಳಲಿದೆ ಎಂದು ಬಬ್ಲು ತಿಳಿಸಿದ್ದಾರೆ. ಅಲ್ಲದೆ, ಸುಶಾಂತ್ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಕರಣ್ ಜೋಹರ್ರನ್ನು ಮುಂಬೈ ಪೊಲೀಸರು ವಿಚಾರಣೆಗೆ ಒಳಪಡಿಸಬೇಕು ಎಂದು ಒತ್ತಾಯಿಸಿದ್ದಾರೆ.
ಸುಶಾಂತ್ ತಂದೆ ಕೃಷ್ಣ ಕಿಶೋರ್ ಸಿಂಗ್ ದೂರಿನ ಮೇರೆಗೆ ಜುಲೈ 28 ರಂದು ನಟಿ ರಿಯಾ ಚಕ್ರವರ್ತಿ ವಿರುದ್ಧ ಆತ್ಮಹತ್ಯೆಗೆ ಪ್ರಚೋದನೆ ಸೇರಿದಂತೆ ವಿವಿಧ ಪ್ರಕರಣಗಳಡಿ ಎಫ್ಐಆರ್ ದಾಖಲಿಸಲಾಗಿದೆ ಎಂದು ಪೊಲೀಸರು ಮಂಗಳವಾರ ತಿಳಿಸಿದ್ದಾರೆ. ಎಫ್‌ಐಆರ್ ದಾಖಲಾದ ಬಳಿಕ ನಾಲ್ಕು ಜನ ಪೊಲೀಸರ ತಂಡವನ್ನು ಮುಂಬೈಗೆ ಕಳುಹಿಸಲಾಗಿದೆ. ಈ ತಂಡವು ಮುಂಬೈ ಪೊಲೀಸರಿಂದ ಕೇಸ್ ಡೈರಿ ಮತ್ತು ಪ್ರಕರಣಕ್ಕೆ ಸಂಬಂಧಿಸಿದ ಇತರ ದಾಖಲೆಗಳನ್ನು ಪಡೆದುಕೊಳ್ಳಲಿದೆ ಎಂದು ಪಾಟ್ನಾ ಕೇಂದ್ರ ವಲಯದ ಇನ್ಸ್ಪೆಕ್ಟರ್ ಜನರಲ್ ಸಂಜಯ್ ಸಿಂಗ್ ಹೇಳಿದ್ದಾರೆ.
ನಟಿ ರಿಯಾ ಚಕ್ರವರ್ತಿ ಬಾಲಿವುಡ್ನಲ್ಲಿ ಸ್ಥಾನ ಪಡೆಯಲು ಸುಶಾಂತ್ ಜೊತೆ ಸಂಪರ್ಕ ಇಟ್ಟುಕೊಂಡಿದ್ದರು. ನಟಿ ಮತ್ತು ಆಕೆಯ ಸಂಬಂಧಿಕರು ಸುಶಾಂತ್ಗೆ ವಂಚನೆ ಮಾಡಿದ್ದಾರೆ ಎಂದು ಸುಶಾಂತ್ ಸಿಂಗ್ ತಂದೆ ರೀವ್ ನಗರ ಪೊಲೀಸ್ ಠಾಣೆಯ ಉಸ್ತುವಾರಿ ಕೆ ಕೆ ಸಿಂಗ್ಗೆ ನೀಡಿದ ದೂರಿನಲ್ಲಿ ಉಲ್ಲೇಖಿಸಿದ್ದಾರೆ.