ನವದೆಹಲಿ: ಇಲ್ಲಿನ ಪಿತಂಪುರ ನಿವಾಸಿ ಪುನೀತ್ ಅಗರ್ವಾಲ್ ಎಂಬ ವ್ಯಕ್ತಿಗೆ ನಿತ್ಯ ಸನ್ನಿ ಲಿಯೋನ್ಗೆ ಫೋನ್ ಕೊಡಿ ಎಂದು 500ಕ್ಕೂ ಹೆಚ್ಚು ಕರೆಗಳು ಬರುತ್ತಿದ್ದು, ದಿಕ್ಕು ತೋಚದೇ ಕಂಗಾಲಾಗಿದ್ದಾನೆ
ಕಳೆದ ಶುಕ್ರವಾರವಷ್ಟೆ ಸನ್ನಿ ಲಿಯೋನ್ ನಟಿಸಿರುವ ಅರ್ಜುನ್ ಪಟಿಯಾಲ ಎಂಬ ಪಂಜಾಬಿ ಚಿತ್ರ ತೆರೆಕಂಡಿತ್ತು. ಈ ಚಿತ್ರದಲ್ಲಿ ಸನ್ನಿ ಲಿಯೋನ್ ಫೋನ್ ನಂಬರ್ ಎಂದು ಒಂದು ದೂರವಾಣಿ ನಂಬರ್ ಅನ್ನ ಚಿತ್ರ ತಂಡ ಬಳಕೆ ಮಾಡಿತ್ತು. ಆದರೆ, ಆ ನಂಬರ್ ವಾಸ್ತವವಾಗಿ ಸನ್ನಿ ಲಿಯೋನ್ ನಂಬರ್ ಆಗಿರಲಿಲ್ಲ.
ಚಲನಚಿತ್ರ ನೋಡಿದ ಪ್ರೇಕ್ಷಕರು ಆ ನಂಬರ್ಗೆ ಕರೆ ಮಾಡುತ್ತಿದ್ದಾರೆ. ನಿತ್ಯ ನೂರಾರು ಜನ ಕರೆ ಮಾಡಿ ಸನ್ನಿ ಲಿಯೋನ್ಗೆ ಫೋನ್ ಕೊಡಿ ಎಂದು ಕೇಳುತ್ತಿದ್ದಾರೆ. ಸಾಕಷ್ಟು ಮೆಸೇಜ್ಗಳು ಕೂಡ ಬರುತ್ತಿವೆ ಎಂದು ಪುನೀತ್ ಅಗರ್ವಾಲ್ಗೆ ಹೇಳುತ್ತಿದ್ದಾರೆ. ನಾನು ಕಳೆದ 12 ವರ್ಷಗಳಿಂದ ಈ ನಂಬರ್ ಬಳಸುತ್ತಿದ್ದೇನೆ ನನ್ನ ವ್ಯಾಪಾರ, ವ್ಯವಹಾರಕ್ಕೂ ಇದೇ ನಂಬರ್ ಬಳಸುತ್ತಿದ್ದೇನೆ. ನಿತ್ಯ ಬರುತ್ತಿರುವ ಕರೆಗಳಿಂದ ನನಗೆ ತೊಂದರೆಯಾಗುತ್ತಿದೆ.
ಬರೀ ಭಾರತವಷ್ಟೇ ಅಲ್ಲದೆ ಇಂಡೋನೇಷ್ಯಾ, ನ್ಯೂಜಿಲ್ಯಾಂಡ್ನಿಂದಲೂ ದೂರವಾಣಿ ಕರೆಗಳು ಬರುತ್ತಿವೆ. ಕಳೆದ ಎರಡು ದಿನಗಳಿಂದ ಕೆಲಸ ಮಾಡಲು ಆಗುತ್ತಿಲ್ಲ. ಸರಿಯಾಗಿ ನಿದ್ದೆ ಕೂಡ ಮಾಡಿಲ್ಲ, ದಯವಿಟ್ಟು ಕ್ರಮ ಕೈಗೊಳ್ಳಿ ಎಂದು ತನ್ನ ಅಳಲು ತೋಡಿಕೊಂಡಿದ್ದಾನೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಅರ್ಜುನ್ ಪಟಿಯಾಲ ಚಿತ್ರದ ನಿರ್ದೇಶಕ ರೋಹಿತ್ ಜುಗ್ರಾಜ್ ನಾವು ಚಲನಚಿತ್ರದಲ್ಲಿ ಕೇವಲ ಒಂಬತ್ತು ನಂಬರ್ಗಳನ್ನು ಅಷ್ಟೆ ಬಳಕೆ ಮಾಡಿದ್ದೇವೆ ಎಂದಿದ್ದಾರೆ.