ಮುಂಬೈ: 23ನೇ ಅಂತಾರಾಷ್ಟ್ರೀಯ ಬುಚಿಯಾನ್ ಚಲನಚಿತ್ರೋತ್ಸವ ಇತ್ತೀಚೆಗೆ ದಕ್ಷಿಣ ಕೊರಿಯಾದಲ್ಲಿ ನಡೆದಿದ್ದು, ಬಾಲಿವುಡ್ನ 'ಗಲ್ಲಿ ಬಾಯ್' ಚಿತ್ರವು ಏಷ್ಯನ್ ಸಿನೆಮಾ ಪ್ರಚಾರ ನೆಟ್ವರ್ಕ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದೆ.
ಸಿನಿಮಾ ಕ್ಷೇತ್ರದ ವೃತ್ತಿಪರರನ್ನು ಒಳಗೊಂಡಿರುವ ಆಯ್ಕೆ ಸಮಿತಿಯು ವಿಶೇಷ ಕಥಾ ಪ್ರಕಾರ ಹೊಂದಿರುವ ಕಾಮಿಡಿ, ಫ್ಯಾಂಟಸಿ ಹಾಗೂ ಡ್ರಾಮಾ ವಿಭಾಗದ ಹೊಸ ಅಲೆಯ ಚಿತ್ರಗಳ ಪೈಕಿ 'ಗಲ್ಲಿ ಬಾಯ್' ಚಿತ್ರವನ್ನು ಪ್ರಶಸ್ತಿಗಾಗಿ ಆಯ್ಕೆ ಮಾಡಿದ್ದಾರೆ.
ಜೋಯಾ ಅಕ್ತರ್ ನಿರ್ದೇಶನದಲ್ಲಿ ಮೂಡಿಬಂದಿರುವ ಚಿತ್ರದಲ್ಲಿ ರಣ್ವೀರ್ ಸಿಂಗ್ ಹಾಗೂ ಆಲಿಯಾ ಭಟ್ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರವನ್ನು ರ್ಯಾಪರ್ಗಳ ಜೀವನ ಆಧರಿಸಿ ಚಿತ್ರ ನಿರ್ಮಿಸಲಾಗಿದೆ. ಇದು ಭಾರತ ಹಾಗೂ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಉತ್ತಮ ಪ್ರದರ್ಶನ ಕಂಡಿದೆ.
ಮೆಲ್ಬೋರ್ನ್ನಲ್ಲಿ ನಡೆಯಲಿರುವ ಭಾರತೀಯ ಚಲನಚಿತ್ರೋತ್ಸವದಲ್ಲೂ 'ಗಲ್ಲಿ ಬಾಯ್' ಪ್ರದರ್ಶನಗೊಳ್ಳಲಿದೆ.
ಜೋಯಾ ಅಕ್ತರ್ ಬುಚಿಯಾನ್ ಚಲನಚಿತ್ರೋತ್ಸವದಲ್ಲಿ ಪ್ರಶಸ್ತಿ ಗೆಲ್ಲುವುದು ಮಾತ್ರವಲ್ಲದೇ, ಆಸ್ಕರ್ ಅವಾರ್ಡ್ಸ್ ಅನ್ನು ಆಯೋಜಿಸುವ ಮೋಷನ್ ಪಿಕ್ಚರ್ಸ್ ಆರ್ಟ್ಸ್ ಮತ್ತು ಸೈನ್ಸ್ ಅಕಾಡೆಮಿಯ ಸದಸ್ಯರ ಪಟ್ಟಿಯಲ್ಲಿಯೂ ಸೇರುವ ಮೂಲಕ ಭಾರತೀಯ ಚಲನಚಿತ್ರೋದ್ಯಮಕ್ಕೆ ಹೆಮ್ಮೆ ತಂದಿದ್ದಾರೆ.