ಬಹಳ ದಿನಗಳ ನಂತರ ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಚಿತ್ರೀಕರಣದಲ್ಲಿ ಭಾಗಿಯಾಗಿದ್ದಾರೆ. ಶಕುನ್ ಬಾತ್ರಾ ನಿರ್ದೇಶನದ ಇನ್ನೂ ಹೆಸರಿಡದ ಚಿತ್ರದಲ್ಲಿ ದೀಪಿಕಾ ನಟಿಸುತ್ತಿದ್ದು ಮೂರು ದಿನಗಳ ನಂತರ ಚಿತ್ರಕ್ಕೆ ಸಂಬಂಧಿಸಿದಂತೆ ಸರ್ಪ್ರೈಸ್ ನೀಡುವುದಾಗಿ ದೀಪಿಕಾ ಹೇಳಿದ್ದಾರೆ.
ಈ ತಿಂಗಳ ಆರಂಭದಲ್ಲಿ ಚಿತ್ರೀಕರಣ ಆರಂಭವಾಗಿದ್ದು ಸುಮಾರು 25 ದಿನಗಳ ಕಾಲ ಚಿತ್ರೀಕರಣ ನಡೆಯಲಿದೆ. ತಾರಾಗಣ ಹೊರತುಪಡಿಸಿ ಚಿತ್ರಕ್ಕೆ ಸಂಬಂಧಿಸಿದ ಯಾವುದೇ ವಿಚಾರವನ್ನು ಚಿತ್ರತಂಡ ರಿವೀಲ್ ಮಾಡಿಲ್ಲ. ಇನ್ನು ಮೂರು ದಿನಗಳಲ್ಲಿ ಚಿತ್ರಕ್ಕೆ ಸಂಬಂಧಿಸಿದ ವಿಚಾರವನ್ನು ತಿಳಿಸುವುದಾಗಿ ದೀಪಿಕಾ ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಮಾಹಿತಿ ನೀಡಿದ್ದಾರೆ. ಅಭಿಮಾನಿಗಳು ಕೂಡಾ ಚಿತ್ರದ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದುಕೊಳ್ಳಲು ಕಾತರದಿಂದ ಕಾಯುತ್ತಿದ್ದಾರೆ.
ಸಂಜೆಯ ಮಬ್ಬಿನಲ್ಲಿ ತೆಂಗಿನ ಮರಗಳು ತೂರಾಡುತ್ತಿರುವ ಬೂಮರಿಂಗ್ ವಿಡಿಯೋ ಜೊತೆಗೆ ಇನ್ನೂ ಕೇವಲ 3 ದಿನಗಳು ಮಾತ್ರ ಎಂದು ಇನ್ಸ್ಟಾಗ್ರಾಮ್ ಸ್ಟೇಟಸ್ನಲ್ಲಿ ದೀಪಿಕಾ ಬರೆದುಕೊಂಡಿದ್ದಾರೆ. ಇದನ್ನು ಚಿತ್ರದ ನಿರ್ದೇಶಕ, ನಿರ್ಮಾಪಕ, ಸಹನಟರಾದ ಸಿದ್ದಾರ್ಥ್ ಚತುರ್ವೇದಿ, ಅನನ್ಯ ಪಾಂಡೆ ಹಾಗೂ ಧೈರಿಯ ಕಾರ್ವಾಗೆ ಟ್ಯಾಗ್ ಮಾಡಿದ್ದಾರೆ.
ಮೇಘನಾ ಗುಲ್ಜಾರ್ ನಿರ್ದೇಶನದ 'ಚಪಕ್' ಚಿತ್ರದಲ್ಲಿ ದೀಪಿಕಾ ಕಡೆಯ ಬಾರಿ ಕಾಣಿಸಿಕೊಂಡಿದ್ದರು. ಈ ಹೊಸ ಚಿತ್ರದ ಜೊತೆಗೆ ಕಬೀರ್ ಖಾನ್ ನಿರ್ದೇಶನದ 83 ಚಿತ್ರದಲ್ಲಿ ಪತಿ ರಣ್ವೀರ್ ಜೊತೆ ದೀಪಿಕಾ ನಟಿಸುತ್ತಿದ್ದಾರೆ. ಅಷ್ಟೇ ಅಲ್ಲ ನಾಗ್ ಅಶ್ವಿನ್ ಸಾರಥ್ಯದಲ್ಲಿ ತಯಾರಾಗಲಿರುವ ಸೈನ್ಸ್ ಫಿಕ್ಷನ್ ಚಿತ್ರದಲ್ಲಿ ಪ್ರಭಾಸ್ ಜೊತೆ ಕೂಡಾ ದೀಪಿಕಾ ನಟಿಸುತ್ತಿದ್ದಾರೆ.
ಮತ್ತೊಂದು ಮೂಲಗಳ ಪ್ರಕಾರ ದೀಪಿಕಾ ಶಾರುಖ್ ಖಾನ್ ಜೊತೆ 4ನೇ ಸಿನಿಮಾದಲ್ಲಿ ನಟಿಸಲು ಸಜ್ಜಾಗುತ್ತಿದ್ದಾರೆ ಎನ್ನಲಾಗಿದೆ. ಈ ಚಿತ್ರವನ್ನು ಖ್ಯಾತ ತಮಿಳು ನಿರ್ದೇಶಕ ಅಟ್ಲಿ ನಿರ್ದೇಶಿಸಲಿದ್ದು ಚಿತ್ರಕ್ಕೆ 'ಸಂಕಿ' ಎಂದು ಹೆಸರಿಡಲಾಗಿದೆಯಂತೆ. ಈ ಮೂಲಕ ಅಟ್ಲಿ ಮೊದಲ ಬಾರಿಗೆ ಬಾಲಿವುಡ್ ಚಿತ್ರರಂಗಕ್ಕೆ ಎಂಟ್ರಿಯಾಗಲಿದ್ದಾರೆ.