ಮುಂಬೈ: ಕಳೆದ ಒಂದು ವಾರದಿಂದ ಬಾಲಿವುಡ್ನಲ್ಲಿ ಕೆಲವೊಂದು ಬಾಕಿ ಉಳಿದಿರುವ ಸಿನಿಮಾ ಹಾಗೂ ಜಾಹೀರಾತು ಚಿತ್ರೀಕರಣ ಆರಂಭವಾಗಿದೆ. ತಾಪ್ಸಿ ಪನ್ನು, ವಿದ್ಯಾ ಬಾಲನ್ ತಾವು ಶೂಟಿಂಗ್ ಸೆಟ್ಗೆ ಹಾಜರಾಗಿರುವ ಫೋಟೋಗಳನ್ನು ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು.
ಇದೀಗ ನಟ ಆಯುಷ್ಮಾನ್ ಖುರಾನ ಕೂಡಾ 3 ತಿಂಗಳ ಬಳಿಕ ಜಾಹೀರಾತೊಂದರ ಚಿತ್ರೀಕರಣಕ್ಕೆ ಚಂಡೀಗಡ್ಗೆ ಬಂದಿದ್ದಾರೆ. 'ಬಹಳ ದಿನಗಳ ನಂತರ ಶೂಟಿಂಗ್ ಹಾಜರಾಗಿದ್ದು ಎಲ್ಲರೂ ಬಹಳ ಎಕ್ಸೈಟ್ ಆಗಿದ್ದೇವೆ. ಯಾವಾಗ ಮತ್ತೆ ಚಿತ್ರೀಕರಣ ಆರಂಭವಾಗುವುದೋ ಎಂದು ಎಲ್ಲರೂ ಕಾಯುತ್ತಿದ್ದೆವು. ಚಿತ್ರೀಕರಣದ ವೇಳೆ ಎಲ್ಲರೂ ಅಗತ್ಯವಿರುವ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಂಡಿದ್ದೇವೆ' ಎಂದು ಆಯುಷ್ಮಾನ್ ಖುರಾನ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಹೇಳಿಕೊಂಡಿದ್ದಾರೆ.
ಆಯುಷ್ಮಾನ್ ಖುರಾನ ಪಂಜಾಬಿನವರೇ ಆಗಿದ್ದು ಚಂಡೀಗಡದಲ್ಲಿ ಹುಟ್ಟಿ ಬೆಳೆದವರು. 'ನಾನು ಹುಟ್ಟಿ ಬೆಳೆದ ಊರಿನಲ್ಲಿ ಶೂಟಿಂಗ್ ಜರುಗುತ್ತಿದೆ. ಇದಕ್ಕೆ ನಾನು ಬಹಳ ಖುಷಿಯಾಗಿದ್ಧೇನೆ. ಎಷ್ಟೋ ದಿನಗಳ ನಂತರ ನಾನು ಶೂಟಿಂಗ್ ಸೆಟ್ಗೆ ಕಾಲಿಟ್ಟಿದ್ದೇನೆ. ಆದಷ್ಟು ಬೇಗ ಎಲ್ಲಾ ಸಾಮಾನ್ಯ ಸ್ಥಿತಿಗೆ ಬರುವುದಾಗಿ ನಂಬಿಕೆ ಇದೆ' ಎಂದು ಹೇಳಿದ್ದಾರೆ.
ಚಂಡೀಗಡದಲ್ಲಿ ಆಯುಷ್ಮಾನ್ ಖುರಾನ ಕುಟುಂಬ ನೆಲೆಸಿದೆ. ಪತ್ನಿ ಹಾಗೂ ಮಕ್ಕಳೊಂದಿಗೆ ಆಯುಷ್ಮಾನ್ ಚಂಡೀಗಡ್ಗೆ ಬಂದಿದ್ದು ಕೆಲವು ದಿನಗಳವರೆಗೂ ನನ್ನ ಸ್ವಂತ ಊರಿನಲ್ಲಿ ಸಮಯ ಕಳೆಯುವುದಾಗಿ ಹೇಳಿಕೊಂಡಿದ್ದಾರೆ. ಶೂಜಿತ್ ಸಿರ್ಕಾರ್ ನಿರ್ದೇಶನದಲ್ಲಿ ಆಯುಷ್ಮಾನ್ ಖುರಾನ ನಟಿಸಿದ್ದ 'ಗುಲಾಬೋ ಸಿತಾಬೋ' ಇತ್ತೀಚೆಗೆ ಒಟಿಟಿಯಲ್ಲಿ ಬಿಡುಗಡೆಯಾಗಿತ್ತು. ಚಿತ್ರದಲ್ಲಿ ಅಮಿತಾಬ್ ಬಚ್ಚನ್ ಹಾಗೂ ಜೂಹಿ ಚತುರ್ವೇದಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.
ಇದರೊಂದಿಗೆ 'ಡ್ರೀಮ್ ಗರ್ಲ್' ಚಿತ್ರದ ಬರಹಗಾರ-ನಿರ್ದೇಶ ರಾಜ್ ಶಾಂಡಿಲ್ಯ ಜೊತೆ ಆಯುಷ್ಮಾನ್ ಖುರಾನ ಮತ್ತೆ ಕೆಲಸ ಮಾಡಲು ಸಜ್ಜಾಗಿದ್ಧಾರೆ.