ಮಕ್ಕಳ ದೌರ್ಜನ್ಯ ತಡೆಗೆ ಸಂಬಂಧಿಸಿದಂತೆ ಬಾಲಿವುಡ್ ನಟ ಆಯುಷ್ಮಾನ ಖುರಾನ ಯುನಿಸೆಫ್ಗೆ ಬೆಂಬಲ ನೀಡಿದ್ದಾರೆ. ಭಾರತದಲ್ಲಿ ಈ ಅಭಿಯಾನದೊಂದಿಗೆ ಸಕ್ರಿಯರಾಗಿರುವ ಡೇವಿಡ್ ಬೆಕ್ಹಾಮ್ ಅವರೊಂದಿಗೆ ಆಯುಷ್ಮಾನ್ ಖುರಾನ ಕೈ ಜೋಡಿಸಿದ್ದಾರೆ.
ಈ ಬಗ್ಗೆ ಮಾತನಾಡಿರುವ ಯುನಿಸೆಫ್ ಪ್ರತಿನಿಧಿ ಡಾ. ಯಾಸ್ಮಿನ್ ಅಲಿ ಹಕ್, 'ಆಯುಷ್ಮಾನ್ ಖುರಾನ ಅವರನ್ನು ಯುನಿಸೆಫ್ ಸೆಲಬ್ರಿಟಿ ರಾಯಭಾರಿಯಾಗಿ ಸ್ವಾಗತಿಸಲು ನನಗೆ ಸಂತೋಷವಾಗುತ್ತದೆ. ಅವರಿಗೆ ನೀಡಲಾಗುವ ಎಲ್ಲಾ ಜವಾಬ್ದಾರಿಗಳನ್ನು ಯಶಸ್ವಿಯಾಗಿ ನಿಭಾಯಿಸುತ್ತಾರೆ ಎಂಬ ನಂಬಿಕೆ ಇದೆ. ಮಕ್ಕಳ ಮೇಲಿನ ದೌರ್ಜನ್ಯವನ್ನು ತಡೆಯಲು ಆಯುಷ್ಮಾನ್ ಖುರಾನ ನಮ್ಮೊಂದಿಗೆ ಕೈ ಜೋಡಿಸಿದ್ದಾರೆ. ಅವರ ಬೆಂಬಲ ನಮಗೆ ಕೂಡಾ ಬಹಳ ಮುಖ್ಯ' ಎಂದು ಹೇಳಿದರು.
ನಂತರ ಮಾತನಾಡಿದ ನಟ ಆಯುಷ್ಮಾನ್ ಖುರಾನ, 'ಮಕ್ಕಳ ಹಕ್ಕುಗಳು ಹಾಗೂ ಅವರ ಮೇಲಿನ ದೌರ್ಜನ್ಯವನ್ನು ತಡೆಗಟ್ಟುವ ವಿಚಾರದಲ್ಲಿ ಯೂನಿಸೆಫ್ ಜೊತೆ ಕೈ ಜೋಡಿಸಿರುವುದು ನನಗೂ ಸಂತೋಷದ ವಿಚಾರ. ನನ್ನ ಮಕ್ಕಳು ಮನೆಯಲ್ಲಿ ಸುರಕ್ಷಿತ, ಸಂತೋಷದಿಂದ ಇರುವುದನ್ನು ನೋಡಿದಾಗ ನಾನು ನನ್ನ ಬಾಲ್ಯ, ಹಾಗೂ ಹೊರಗೆ ಹಿಂಸೆಗೊಳಗಾದ ಮಕ್ಕಳ ಬಗ್ಗೆ ಯೋಚಿಸುತ್ತೇನೆ. ಯೂನಿಸೆಫ್ ಮೂಲಕ ನಾನು ಮಕ್ಕಳ ಹಕ್ಕುಗಳಿಗಾಗಿ ಹೋರಾಡುತ್ತೇನೆ' ಎಂದು ನಟ ಆಯುಷ್ಮಾನ್ ಖುರಾನ ಹೇಳಿದ್ದಾರೆ.