ಲಾಸ್ ಏಂಜಲೀಸ್: ಹಾಲಿವುಡ್ ಸ್ಟಾರ್ ಏಂಜೆಲಿನಾ ಜೋಲಿ ತಮ್ಮ 'ಎ ಮೈಟಿ ಹಾರ್ಟ್' ಚಿತ್ರದ ಸಹನಟರಾಗಿದ್ದ ಇರ್ಫಾನ್ ಖಾನ್ರನ್ನು ಸ್ಮರಿಸಿಕೊಂಡಿದ್ದಾರೆ.
ಇರ್ಫಾನ್ ಖಾನ್ ಅವರ ಔದಾರ್ಯ ಸ್ವಭಾವದಿಂದಾಗಿ ಎಂದಿಗೂ ಎದ್ದು ಕಾಣುತ್ತಾರೆ ಎಂದು ಹಾಲಿವುಡ್ ನಟಿ ಹಿರಿಯ ನಟನೊಂದಿಗಿನ ತಮ್ಮ ಒಡನಾಟ ಬಿಚ್ಚಿಟ್ಟಿದ್ದಾರೆ. 54 ವರ್ಷದ ನಟ ಖಾನ್, ಸತತ ಎರಡು ವರ್ಷ ಕ್ಯಾನ್ಸರ್ ವಿರುದ್ಧ ಹೋರಾಡಿ ಮುಂಬೈ ಆಸ್ಪತ್ರೆಯಲ್ಲಿ ಕಳೆದ ಬುಧವಾರ ನಿಧನರಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಹಾಲವುಡ್ ನಟಿ ಇರ್ಫಾನ್ ಅವರೊಂದಿಗಿನ ತಮ್ಮ ಕಿರು ಸಿನಿ ಜರ್ನಿ ಬಗೆಗೆ ಹೇಳಿಕೊಂಡಿದ್ದಾರೆ.
2002ರಲ್ಲಿ ಪಾಕಿಸ್ತಾನದಲ್ಲಿ ಕೊಲ್ಲಲ್ಪಟ್ಟ ಯುಎಸ್ ಪತ್ರಕರ್ತ ಡೇನಿಯಲ್ ಪರ್ಲ್ ಬಗ್ಗೆ ಮೈಕೆಲ್ ವಿಂಟರ್‌ಬಾಟಮ್ ನಿರ್ದೇಶಿಸಿರುವ 'ಎ ಮೈಟಿ ಹಾರ್ಟ್' ಚಿತ್ರದಲ್ಲಿ ಜೋಲಿ ಮತ್ತು ಇರ್ಫಾನ್ ಜೊತೆಯಾಗಿ ನಟಿಸಿದ್ದರು. ಚಿತ್ರದಲ್ಲಿ ಜೋಲಿ ವಿಧವೆಯ ಪಾತ್ರ ನಿರ್ವಹಿಸಿದರೆ, ಇರ್ಫಾನ್ ಕರಾಚಿ ಪೊಲೀಸ್ ಮುಖ್ಯಸ್ಥ ಝೀಶನ್ ಕಜ್ಮಿ ಪಾತ್ರದಲ್ಲಿ ಕಾಣಿಸಿದ್ದರು.
ಇರ್ಫಾನ್ ಅವರೊಂದಿಗೆ ಕೆಲಸ ಮಾಡುವುದು ಒಂದು ಉತ್ತಮ ಅವಕಾಶ ಎಂದ ನಟಿ ಖಾನ್ ಅವರ ವೃತ್ತಿ ಬದ್ಧತೆಯನ್ನು ಕೊಂಡಾಡಿದ್ದಾರೆ. "ಅವರ ಬದ್ಧತೆ ಮತ್ತು ಅವರ ಮಂದಹಾಸವನ್ನು ನಾನು ಎಂದಿಗೂ ನೆನಪಿಸಿಕೊಳ್ಳುತ್ತೇನೆ. ಅವರ ಕುಟುಂಬ, ಸ್ನೇಹಿತರು ಮತ್ತು ಭಾರತ ಸೇರಿ ಪ್ರಪಂಚದಾದ್ಯಂತ ಇರುವ ಅವರ ಎಲ್ಲಾ ಅಭಿಮಾನಿಗಳಿಗೆ ಈ ದುಃಖ ಭರಿಸುವ ಶಕ್ತಿ ಬರಲಿ ಎಂದು ಜೋಲಿ ಸಂತಾಪ ಸೂಚಿಸಿದರು.
ಹಾಲಿವುಡ್ ಚಿತ್ರಗಳಾದ 'ದಿ ಅಮೇಜಿಂಗ್ ಸ್ಪೈಡರ್ ಮ್ಯಾನ್', 'ಲೈಫ್ ಆಫ್ ಪೈ', 'ಜುರಾಸಿಕ್ ವರ್ಲ್ಡ್' ಮತ್ತು 'ಇನ್ಫರ್ನೊ' ಚಿತ್ರಗಳಲ್ಲಿ ಖಾನ್ ನಟಿಸಿದ್ದಾರೆ.