ಸ್ಯಾನ್ ಫ್ರಾನ್ಸಿಸ್ಕೋ (ಅಮೆರಿಕ) : ಕನೆಕ್ಟೆಡ್ ಟಿವಿಗಳಲ್ಲಿ (ಸಿಟಿವಿ) 30 ಸೆಕೆಂಡುಗಳ ನಾನ್ ಸ್ಕಿಪ್ ಜಾಹೀರಾತುಗಳನ್ನು ಪರಿಚಯಿಸುವುದಾಗಿ ಗೂಗಲ್ ಮಾಲೀಕತ್ವದ ಯೂಟ್ಯೂಬ್ ಘೋಷಿಸಿದೆ. 15 ಸೆಕೆಂಡುಗಳ ಸತತ ಎರಡು ಜಾಹೀರಾತುಗಳ ಬದಲಿಗೆ ಈ ಸ್ಕಿಪ್ ಮಾಡಲಾಗದ 30 ಸೆಕೆಂಡುಗಳ ಜಾಹೀರಾತು ಬರಲಿದೆ. "ನಾವು ಕನೆಕ್ಟೆಡ್ ಟಿವಿಯಲ್ಲಿ ಯೂಟ್ಯೂಬ್ ಸೆಲೆಕ್ಟ್‌ಗೆ 30 ಸೆಕೆಂಡ್ ನಾನ್ ಸ್ಕಿಪ್ ವಿಡಿಯೋಗಳನ್ನು ಜಾರಿಗೊಳಿಸುತ್ತಿದ್ದೇವೆ" ಎಂದು ಯೂಟ್ಯೂಬ್ ಗುರುವಾರ ಬ್ಲಾಗ್‌ಪೋಸ್ಟ್‌ನಲ್ಲಿ ತಿಳಿಸಿದೆ.
ದೊಡ್ಡ ಪರದೆಯಲ್ಲಿ ದೀರ್ಘ ಅವಧಿಯ ಸೃಜನಶೀಲ ವಿಡಿಯೋಗಳ ಚಾಲನೆಯು ಜಾಹೀರಾತುದಾರರ ಉದ್ದೇಶಗಳೊಂದಿಗೆ ಹೊಂದಿಕೆಯಾಗುತ್ತದೆ ಮತ್ತು ಅದನ್ನು ಉತ್ಕೃಷ್ಟವಾಗಿ ತೋರಿಸಲು ಸಾಧ್ಯವಾಗುತ್ತದೆ ಎಂದು ಕಂಪನಿ ಹೇಳಿದೆ. ಯೂಟ್ಯೂಬ್ ಸೆಲೆಕ್ಟ್ ಈಗ ಟಿವಿ ಪರದೆಯ ಮೇಲೆ ಶೇಕಡಾ 70 ರಷ್ಟು ಇಂಪ್ರೆಶನ್‌ಗಳನ್ನು ಪಡೆಯುತ್ತಿರುವುದರಿಂದ, ಕಂಪನಿಯು ಹೆಚ್ಚು ಸ್ಟ್ರೀಮ್ ಮಾಡಲಾದ ಕಂಟೆಂಟ್ ಮೇಲೆ ಅಸ್ತಿತ್ವದಲ್ಲಿರುವ ಅವಕಾಶಗಳನ್ನು ಬಳಸಲು ಜಾಹೀರಾತುದಾರರಿಗೆ ಸುಲಭಗೊಳಿಸುತ್ತಿದೆ.
ಇದಲ್ಲದೇ ಕಂಪನಿಯು CTV ಗೆ ಹೊಸ ವಿರಾಮ ಅನುಭವಗಳನ್ನು (Pause experiences) ಪರಿಚಯಿಸುತ್ತಿದೆ. ಜನರು ವಿಡಿಯೋವನ್ನು ಯಾವಾಗ ಪಾಸ್ ಮಾಡುತ್ತಾರೆ ಎಂಬುದನ್ನು ಆಧರಿಸಿ ಜಾಹೀರಾತುದಾರರು ಆ ಅನನ್ಯ ಸಂವಾದಾತ್ಮಕ ಕ್ಷಣವನ್ನು ಹೊಂದುವ ಮೂಲಕ ಜಾಹೀರಾತು ತೋರಿಸಬಹುದು ಅಥವಾ ಕ್ರಿಯೆಯನ್ನು ನಡೆಸಬಹುದು. ಅಂದರೆ ವಿಡಿಯೋವನ್ನು ಪಾಸ್ ಮಾಡಿದಾಗ ಜಾಹೀರಾತುದಾರರು ತಮ್ಮ ಬ್ರ್ಯಾಂಡ್ ಅನ್ನು ಪ್ರದರ್ಶಿಸಲು ಇದು ಅವಕಾಶ ನೀಡುತ್ತದೆ.
ಹೆಚ್ಚುವರಿಯಾಗಿ, ಜಾಹೀರಾತುದಾರರು ಶೀಘ್ರದಲ್ಲೇ NFL ಕಂಟೆಂಟ್ನ ಸಂಪೂರ್ಣ ಪೋರ್ಟ್‌ಫೋಲಿಯೊದಲ್ಲಿ ಫುಟ್‌ಬಾಲ್ ಅಭಿಮಾನಿಗಳನ್ನು ತಲುಪಲು ಸಾಧ್ಯವಾಗುತ್ತದೆ ಎಂದು ಯೂಟ್ಯೂಬ್ ಹೇಳಿದೆ. ಏತನ್ಮಧ್ಯೆ, ಯೂಟ್ಯೂಬ್ ತನ್ನ ಸ್ಟ್ರೀಮಿಂಗ್ ಟೆಲಿವಿಷನ್ ಸೇವೆಯ ಹೊಸ "ಮಲ್ಟಿವ್ಯೂ" ವೈಶಿಷ್ಟ್ಯವನ್ನು ಎಲ್ಲಾ ಬಳಕೆದಾರರಿಗೆ ನೀಡುತ್ತಿದೆ ಎಂದು ಹೇಳಿದೆ. ಇದು ಚಂದಾದಾರರಿಗೆ ಒಂದೇ ಸಮಯದಲ್ಲಿ ನಾಲ್ಕು ವಿಭಿನ್ನ ಕಾರ್ಯಕ್ರಮಗಳನ್ನು ವೀಕ್ಷಿಸಲು ಅನುವು ಮಾಡಿಕೊಡುತ್ತದೆ.
ಸಂಪರ್ಕಿತ ಟಿವಿ ಅಥವಾ ಕನೆಕ್ಟೆಡ್ ಟಿವಿ (CTV) ಎಂಬುದು ಗ್ರಾಹಕರು ಆನ್‌ಲೈನ್‌ನಲ್ಲಿ ವೀಡಿಯೊ ಕಂಟೆಂಟ್ ವೀಕ್ಷಿಸಲು ಮತ್ತು ಸ್ಟ್ರೀಮ್ ಮಾಡಲು ಬಳಸುವ ಭೌತಿಕ ಸಾಧನವಾಗಿದೆ. CTV ಯಲ್ಲಿ ಮೂರು ಮಾದರಿಗಳಿವೆ: ಇದು ಸ್ಮಾರ್ಟ್ ಟಿವಿ, ಗೇಮಿಂಗ್ ಕನ್ಸೋಲ್ ಅಥವಾ Amazon Fire Stick ಅಥವಾ Chromecast ನಂತಹ ಸ್ಟ್ರೀಮಿಂಗ್ ಸ್ಟಿಕ್ ಆಗಿರಬಹುದು.
ಯೂಟ್ಯೂಬ್ ಎಂಬುದು ವೀಡಿಯೊಗಳನ್ನು ಶೇರ್ ಮಾಡಲು ವಿನ್ಯಾಸಗೊಳಿಸಲಾದ ವೆಬ್‌ಸೈಟ್ ಆಗಿದೆ. ಪ್ರಪಂಚದಾದ್ಯಂತದ ಲಕ್ಷಾಂತರ ಬಳಕೆದಾರರು ಸೈಟ್‌ನಲ್ಲಿ ಖಾತೆಗಳನ್ನು ರಚಿಸಿದ್ದಾರೆ. ಇದರ ಮೂಲಕ ಯಾರಾದರೂ ವೀಕ್ಷಿಸಬಹುದಾದ ವಿಡಿಯೋಗಳನ್ನು ಅಪ್ಲೋಡ್ ಮಾಡಬಹುದು. ಪ್ರತಿ ದಿನದ ಪ್ರತಿ ನಿಮಿಷ, 35 ಗಂಟೆಗಳಿಗೂ ಹೆಚ್ಚು ವಿಡಿಯೋವನ್ನು ಯೂಟ್ಯೂಬ್ಗೆ ಅಪ್ಲೋಡ್ ಮಾಡಲಾಗುತ್ತದೆ.
ಕಂಪ್ಯೂಟರ್ ಅಥವಾ ಮೊಬೈಲ್ ಸಾಧನ ಮತ್ತು ಇಂಟರ್ನೆಟ್ ಸಂಪರ್ಕವನ್ನು ಹೊಂದಿರುವ ಯಾರಾದರೂ ಯೂಟ್ಯೂಬ್ ಕಂಟೆಂಟ್ ಅನ್ನು ವೀಕ್ಷಿಸಬಹುದು ಮತ್ತು ತಮ್ಮದೇ ವೀಡಿಯೊಗಳನ್ನು ಹಂಚಿಕೊಳ್ಳಬಹುದು. ಸಾಂಪ್ರದಾಯಿಕ ಟೆಲಿವಿಷನ್‌ಗಿಂತ ವಿಭಿನ್ನವಾಗಿ ವಿವಿಧ ವಿಷಯಗಳನ್ನು ತೋರಿಸುವ ಕಾರಣಕ್ಕಾಗಿ ಯೂಟ್ಯೂಬ್ ಯುವಜನರಲ್ಲಿ ಸಾಕಷ್ಟು ಜನಪ್ರಿಯವಾಗಿದೆ.
ಇದನ್ನೂ ಓದಿ : ಕ್ರೆಡಿಟ್ ಕಾರ್ಡ್ ಲೋನ್: ಬಡ್ಡಿ ಎಷ್ಟು, ಹೇಗೆ ಸಿಗುತ್ತೆ? ಇಲ್ಲಿದೆ ಮಾಹಿತಿ