ಬೆಂಗಳೂರು: ಮಾರ್ಕ್ ಜುಕರ್ ಬರ್ಗ್ ಒಡೆತನದ ಮೆಟಾ ತನ್ನ ಎರಡು ಜನಪ್ರಿಯ ಸಾಮಾಜಿಕ ಮಾಧ್ಯಮ ಪ್ಲಾಟ್ಫಾರ್ಮ್ಗಳಾದ ವಾಟ್ಸ್ಆ್ಯಪ್ ಮತ್ತು ಇನ್ಸ್ಟಾಗ್ರಾಮ್ಗಳನ್ನು ಹೊಸ ವೈಶಿಷ್ಟ್ಯವೊಂದರ ಮೂಲಕ ಸಂಯೋಜಿಸಲಿದೆ ಎಂದು ವರದಿಯಾಗಿದೆ. ಅಂದರೆ ಹೊಸ ಫೀಚರ್ ಮೂಲಕ ಬಳಕೆದಾರರು ಶೀಘ್ರದಲ್ಲೇ ತಮ್ಮ ವಾಟ್ಸ್ಆ್ಯಪ್ ಸ್ಟೇಟಸ್ ಅಪ್ಡೇಟ್ಗಳನ್ನು ನೇರವಾಗಿ ತಮ್ಮ ಇನ್ಸ್ಟಾಗ್ರಾಮ್ ಸ್ಟೋರಿಗಳಿಗೆ ಶೇರ್ ಮಾಡಲು ಸಾಧ್ಯವಾಗಲಿದೆ.
ಹೊಸ ವೈಶಿಷ್ಟ್ಯವು ಇನ್ನೂ ಅಭಿವೃದ್ಧಿ ಹಂತದಲ್ಲಿದ್ದು, ಸದ್ಯ ಇದು ವಾಟ್ಸ್ಆ್ಯಪ್ನ ಇತ್ತೀಚಿನ ಬೀಟಾ ಆವೃತ್ತಿಯಲ್ಲಿ ಕಾಣಿಸಿಕೊಂಡಿದೆ. ವಾಬೀಟಾ ಇನ್ಫೋ ವೆಬ್ಸೈಟ್ ಪ್ರಕಾರ, ಬಳಕೆದಾರರು ತಾವಾಗಿ ಬಯಸಿದರೆ ಮಾತ್ರ ತಮ್ಮ ಸ್ಟೇಟಸ್ ಅಪ್ಡೇಟ್ಗಳನ್ನು ಇನ್ಸ್ಟಾನಲ್ಲಿ ಶೇರ್ ಮಾಡಬಹುದು. ಅಲ್ಲದೆ ನಿರ್ದಿಷ್ಟವಾಗಿ ಯಾವ ಸ್ಟೇಟಸ್ ಶೇರ್ ಮಾಡಬೇಕು ಎಂಬುದನ್ನು ಕೂಡ ಬಳಕೆದಾರರು ನಿರ್ಧರಿಸಬಹುದು.
"ಗೂಗಲ್ ಪ್ಲೇ ಸ್ಟೋರ್ನಲ್ಲಿ ಲಭ್ಯವಿರುವ ವಾಟ್ಸ್ಆ್ಯಪ್ನ ಆಂಡ್ರಾಯ್ಡ್ 2.23.25.20 ಬೀಟಾ ಅಪ್ಡೇಟ್ ಬಿಡುಗಡೆಯಾಗಿದೆ. ವಾಟ್ಸ್ಆ್ಯಪ್ ಸ್ಟೇಟಸ್ಗಳನ್ನು ನೇರವಾಗಿ ಇನ್ಸ್ಟಾಗ್ರಾಮ್ಗೆ ಶೇರ್ ಮಾಡುವ ವೈಶಿಷ್ಟ್ಯ ಇದರಲ್ಲಿರುವುದನ್ನು ನಾವು ಕಂಡುಕೊಂಡಿದ್ದೇವೆ." ಎಂದು ವಾಬೀಟಾ ಇನ್ಫೋ ಹೇಳಿದೆ.
ನಂಬರ್ ಬಚ್ಚಿಟ್ಟು ಚಾಟಿಂಗ್-ವಾಟ್ಸ್ಆ್ಯಪ್ ಹೊಸ ಅಪ್ಡೇಟ್ ಶೀಘ್ರ ಬಿಡುಗಡೆ: ಬಳಕೆದಾರರ ಗೌಪ್ಯತೆ ಮತ್ತು ಸಂಪರ್ಕವನ್ನು ಹೆಚ್ಚಿಸುವ ಪ್ರಯತ್ನವಾಗಿ ವಾಟ್ಸ್ಆ್ಯಪ್ ಶೀಘ್ರದಲ್ಲೇ ಹೊಸ ಸರ್ಚ್ ಬಾರ್ ವೈಶಿಷ್ಟ್ಯವನ್ನು ಪರಿಚಯಿಸುವ ಸಾಧ್ಯತೆಯಿದೆ. ಇದರ ಮೂಲಕ ಬಳಕೆದಾರರು ತಮ್ಮ ಹೆಸರನ್ನು ಮಾತ್ರ ಬಳಸಿ ಇತರ ಬಳಕೆದಾರರನ್ನು ಸರ್ಚ್ ಮಾಡಬಹುದಾಗಿದೆ. ಇನ್ನು ಮುಂದೆ ನಿಮ್ಮ ವಿಶಿಷ್ಟ ಹೆಸರನ್ನು ಮಾತ್ರ ಇತರರಿಗೆ ಪ್ರದರ್ಶಿಸುವ ಮೂಲಕ ನೀವು ಅವರೊಂದಿಗೆ ಸಂವಹನ ನಡೆಸಬಹುದು.
ಅಂದರೆ ಬೇರೆಯವರಿಗೆ ನಿಮ್ಮ ಫೋನ್ ನಂಬರ್ ಬಹಿರಂಗಪಡಿಸದೆಯೇ ನೀವು ಅವರೊಂದಿಗೆ ಚಾಟ್ ಮಾಡಬಹುದು ಎಂದರ್ಥ. ವರದಿಯ ಪ್ರಕಾರ, ಬಳಕೆದಾರರು ಈ ವೈಶಿಷ್ಟ್ಯದ ಮೇಲೆ ಸಂಪೂರ್ಣ ನಿಯಂತ್ರಣವನ್ನು ಹೊಂದಿರುತ್ತಾರೆ. ಯಾವುದೇ ಸಮಯದಲ್ಲಿ ಬಳಕೆದಾರರು ತಮ್ಮ ಹೆಸರನ್ನು ಸೇರಿಸುವ, ಡಿಲೀಟ್ ಮಾಡುವ ಅಥವಾ ಬದಲಾಯಿಸುವ ಆಯ್ಕೆಯನ್ನು ಹೊಂದಿರುತ್ತಾರೆ. ಆದರೆ ಇದನ್ನು ಬಳಸುವುದು ಅಥವಾ ಬಿಡುವುದು ಬಳಕೆದಾರರಿಗೆ ಬಿಟ್ಟ ವಿಷಯವಾಗಿದೆ.
ಹೆಸರಿನ ಮೂಲಕ ಹುಡುಕುವ ಸರ್ಚ್ ಬಾರ್ ವೈಶಿಷ್ಟ್ಯವು ಸದ್ಯ ಅಭಿವೃದ್ಧಿಯ ಹಂತದಲ್ಲಿದೆ ಮತ್ತು ಮುಂದಿನ ದಿನಗಳಲ್ಲಿ ಇದು ಬಳಕೆದಾರರಿಗೆ ಲಭ್ಯವಾಗಬಹುದು. ಆಂಡ್ರಾಯ್ಡ್ ಮತ್ತು ಐಒಎಸ್ ಎರಡಕ್ಕೂ ಈ ವೈಶಿಷ್ಟ್ಯ ಬರಲಿದೆಯಾ? ಎಂಬುದು ಖಚಿತವಾಗಿಲ್ಲ.
ಇದನ್ನೂ ಓದಿ: ನಾಸಾದ ಮಾನವಸಹಿತ ಚಂದ್ರಯಾನ 2027ಕ್ಕೆ ಮುಂದೂಡಿಕೆ