ನವದೆಹಲಿ : ವಾಟ್ಸ್ಆ್ಯಪ್ ಪಿಂಕ್ ವಂಚನೆಯ ಜಾಲ ದಿನದಿಂದ ದಿನಕ್ಕೆ ದೊಡ್ಡದಾಗುತ್ತಿದೆ. ಸದ್ಯ ವಾಟ್ಸ್ಆ್ಯಪ್ ಪಿಂಕ್ ಡೌನ್‌ಲೋಡ್ ಮಾಡಿದ ಬಳಕೆದಾರರಿಗೆ ಮುಂಬೈ ಪೊಲೀಸರು ರೆಡ್ ಅಲರ್ಟ್ ನೀಡಿದ್ದಾರೆ. ಈ ಕುರಿತು ಟ್ವಿಟರ್ ಪೋಸ್ಟ್ ಮಾಡಿರುವ ಮುಂಬೈ ಪೊಲೀಸರು, "ವಾಟ್ಸ್ ಆ್ಯಪ್ ಪಿಂಕ್ - ಆಂಡ್ರಾಯ್ಡ್ ಬಳಕೆದಾರರಿಗೆ ರೆಡ್ ಅಲರ್ಟ್" ಎಂದು ಬರೆದಿದ್ದಾರೆ. ಜೊತೆಗೆ ಅದರ ಪರಿಣಾಮಗಳನ್ನು ವಿವರಿಸುವ ಚಿತ್ರ ಪೋಸ್ಟ್ ಮಾಡಿದ್ದು, ವಂಚನೆಯಿಂದ ರಕ್ಷಿಸಿಕೊಳ್ಳುವ ಕ್ರಮಗಳನ್ನು ಕೂಡ ತಿಳಿಸಲಾಗಿದೆ.
"ಹೆಚ್ಚುವರಿ ವೈಶಿಷ್ಟ್ಯಗಳೊಂದಿಗೆ ಹೊಸ ಪಿಂಕ್ ಲುಕ್ ವಾಟ್ಸ್ ಆ್ಯಪ್" ಬಗ್ಗೆ ಇತ್ತೀಚೆಗೆ ವಾಟ್ಸ್ ಆ್ಯಪ್ ನಲ್ಲಿ ಹರಿದಾಡುತ್ತಿರುವ ಸುದ್ದಿ ಸುಳ್ಳು, ಇದು ದುರುದ್ದೇಶಪೂರಿತ ಸಾಫ್ಟ್‌ವೇರ್ ಮೂಲಕ ನಿಮ್ಮ ಮೊಬೈಲ್ ಅನ್ನು ಹ್ಯಾಕ್ ಮಾಡಲು ಕಾರಣವಾಗಬಹುದು" ಎಂದು ಚಿತ್ರದ ಮೂಲಕ ಸಂದೇಶ ನೀಡಲಾಗಿದೆ.
ಬಳಕೆದಾರರನ್ನು ತಮ್ಮ ಸೈಬರ್ ವಂಚನೆಯ ಜಾಲಕ್ಕೆ ಬೀಳಿಸಲು ವಂಚಕರು ಹಲವಾರು ಹೊಸ ತಂತ್ರಗಳನ್ನು ಹೆಣೆಯುವುದು ಹಾಗೂ ಬಳಕೆದಾರರಿಗೆ ಆಮಿಷ ಒಡ್ಡುವುದು ಹೊಸ ವಿಷಯವೇನಲ್ಲ. ಆದರೆ ಬಳಕೆದಾರರು ಈ ರೀತಿಯ ವಂಚನೆಗಳ ಬಗ್ಗೆ ಜಾಗೃತರಾಗಿ, ಜಾಗರೂಕರಾಗಿರಬೇಕು ಮತ್ತು ಡಿಜಿಟಲ್ ಜಗತ್ತಿನಲ್ಲಿ ಸುರಕ್ಷಿತವಾಗಿರುವಂತೆ ನೋಡಿಕೊಳ್ಳುವುದು ಅವರದೇ ಜವಾಬ್ದಾರಿಯಾಗಿರುತ್ತದೆ ಎಂದು ಟ್ವಿಟರ್ ಪೋಸ್ಟ್ನಲ್ಲಿ ತಿಳಿಸಲಾಗಿದೆ.
ವಾಟ್ಸ್ ಆ್ಯಪ್ ಪಿಂಕ್ ಅನ್ನು ಡೌನ್‌ಲೋಡ್ ಮಾಡುವುದರಿಂದ ಮೊಬೈಲ್ ಫೋನ್‌ಗಳಲ್ಲಿ ಸೇವ್ ಮಾಡಲಾದ ಸಂಪರ್ಕ ಸಂಖ್ಯೆಗಳು ಮತ್ತು ಚಿತ್ರಗಳ ದುರುಪಯೋಗ, ಹಣಕಾಸಿನ ನಷ್ಟ, ನಿಮ್ಮ ಐಡೆಂಟಿಟಿ ದುರುಪಯೋಗ, ಸ್ಪ್ಯಾಮ್ ಸಂದೇಶಗಳು ಇತ್ಯಾದಿಗಳಿಗೆ ಕಾರಣವಾಗಬಹುದು. ಪಿಂಕ್ ವಾಟ್ಸ್ ಆ್ಯಪ್ ಇನ್ಸ್ಟಾಲ್ ಮಾಡಿಕೊಂಡಿರುವವರು ತಕ್ಷಣವೇ ಅದನ್ನು ಅನ್ ಇನ್ಸ್ಟಾಲ್ ಮಾಡಿಕೊಳ್ಳುವಂತೆ ಸೂಚಿಸಲಾಗಿದೆ. ಅನ್ ಇನ್ಸ್ಟಾಲ್ ಮಾಡಲು ಹೀಗೆ ಮಾಡಿ : settings> apps> WhatsApp (pink logo) and uninstall it.
ಅಪರಿಚಿತ ಲಿಂಕ್ ಮೇಲೆ ಕ್ಲಿಕ್ ಮಾಡಬೇಡಿ: ಸರಿಯಾದ ಪರಿಶೀಲನೆ ಅಥವಾ ದೃಢೀಕರಣವಿಲ್ಲದೇ ಅಪರಿಚಿತ ಮೂಲಗಳಿಂದ ಸ್ವೀಕರಿಸಿದ ಲಿಂಕ್‌ಗಳನ್ನು ಎಂದಿಗೂ ಕ್ಲಿಕ್ ಮಾಡಕೂಡದು. ಅಲ್ಲದೇ, ನೀವು ಯಾವಾಗಲೂ ಗೂಗಲ್ ಅಥವಾ iOS ನ ಅಧಿಕೃತ ಅಪ್ಲಿಕೇಶನ್ ಸ್ಟೋರ್ ಅಥವಾ ಕಾನೂನುಬದ್ಧ ವೆಬ್‌ಸೈಟ್ ಮೂಲಕವೇ ಅಪ್ಲಿಕೇಶನ್‌ಗಳನ್ನು ಡನ್ಲೋಡ್ ಮಾಡಿಕೊಳ್ಳಬೇಕು. ನಿಮ್ಮ ವೈಯಕ್ತಿಕ ವಿವರಗಳು ಅಥವಾ ಲಾಗಿನ್ ವಿವರಗಳು, ಪಾಸ್‌ವರ್ಡ್‌ಗಳು, ಕ್ರೆಡಿಟ್ ಅಥವಾ ಡೆಬಿಟ್ ಕಾರ್ಡ್ ವಿವರಗಳು ಮತ್ತು ಇತರ ಅಂತಹ ಮಾಹಿತಿಯನ್ನು ಆನ್‌ಲೈನ್‌ನಲ್ಲಿ ಯಾರೊಂದಿಗೂ ಎಂದಿಗೂ ಹಂಚಿಕೊಳ್ಳಬೇಡಿ ಎಂದು ಮುಂಬೈ ಪೊಲೀಸರು ವಾರ್ನ್ ಮಾಡಿದ್ದಾರೆ.
ಸೈಬರ್ ಕ್ರೈಮ್ ಎನ್ನುವುದು ಕ್ರಿಮಿನಲ್ ಚಟುವಟಿಕೆಯಾಗಿದ್ದು ಅದು ಕಂಪ್ಯೂಟರ್, ಕಂಪ್ಯೂಟರ್ ನೆಟ್‌ವರ್ಕ್ ಅಥವಾ ನೆಟ್‌ವರ್ಕ್ ಹೊಂದಿದ ಸಾಧನಗಳನ್ನು ಗುರಿಯಾಗಿಸಿ ವಂಚನೆ ಎಸಗುತ್ತದೆ. ಹೆಚ್ಚಿನ ಸೈಬರ್ ಕ್ರೈಮ್ ಅನ್ನು ಸೈಬರ್ ಅಪರಾಧಿಗಳು ಅಥವಾ ಹಣ ಸಂಪಾದಿಸಲು ಬಯಸುವ ಹ್ಯಾಕರ್‌ಗಳು ಮಾಡುತ್ತಾರೆ. ಆದಾಗ್ಯೂ ಕೆಲವೊಮ್ಮೆ ಲಾಭವಲ್ಲದ ಕಾರಣಗಳಿಗಾಗಿ ಅಂದರೆ ಕಂಪ್ಯೂಟರ್‌ಗಳು ಅಥವಾ ನೆಟ್‌ವರ್ಕ್‌ಗಳನ್ನು ಹಾನಿ ಮಾಡುವ ಸಲುವಾಗಿ ಸೈಬರ್ ಕ್ರೈಮ್ ಕೃತ್ಯ ಎಸಗಲಾಗುತ್ತದೆ.
ಇದನ್ನೂ ಓದಿ : Social Media: ಇನ್ಫ್ಲುಯೆನ್ಸರ್ಗಳಿಗೆ ಭಾರಿ ಬೇಡಿಕೆ; 2028ರ ವೇಳೆಗೆ 3.5 ಬಿಲಿಯನ್ ಡಾಲರ್ ವಹಿವಾಟು ನಿರೀಕ್ಷೆ