ವಾಷಿಂಗ್ಟನ್ : ಗುರುತ್ವಾಕರ್ಷಣೆಯ ಕೊರತೆಯಿಂದಾಗಿ 8 ತಿಂಗಳ ಹಿಂದೆ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ (ಐಎಸ್ಎಸ್) ಕಳೆದುಹೋಗಿದ್ದ ಎರಡು ಟೊಮೆಟೊಗಳು ಮತ್ತೆ ಸಿಕ್ಕಿವೆ ಎಂದು ನಾಸಾ ಹೇಳಿದೆ. ಗಗನಯಾತ್ರಿ ಫ್ರಾಂಕ್ ರುಬಿಯೊ ಅವರ ಬಳಿಯಿದ್ದ ಈ ಎರಡು ಟೊಮೆಟೊಗಳು ಎಂಟು ತಿಂಗಳ ಹಿಂದೆ ಕಾಣೆಯಾಗಿದ್ದವು.
2022 ರಲ್ಲಿ ಬಾಹ್ಯಾಕಾಶ ನಿಲ್ದಾಣದಲ್ಲಿ ನಡೆಸಿದ ಇಎಕ್ಸ್ಪೋಸ್ಡ್ ರೂಟ್ ಆನ್-ಆರ್ಬಿಟ್ ಟೆಸ್ಟ್ ಸಿಸ್ಟಮ್ (eXposed Root On-Orbit Test System -XROOTS) ಪ್ರಯೋಗದ ಭಾಗವಾಗಿ ಟೊಮೆಟೊಗಳನ್ನು ಕೊಯ್ಲು ಮಾಡುವಾಗ ಈ ಎರಡು ಟೊಮೆಟೊಗಳು ಆಕಸ್ಮಿಕವಾಗಿ ಕಳೆದು ಹೋಗಿದ್ದವು ಎಂದು ನಾಸಾ ಎಕ್ಸ್ನಲ್ಲಿ ತಿಳಿಸಿದೆ.
ನಿರ್ಜಲೀಕರಣಗೊಂಡ ಮತ್ತು ಸ್ವಲ್ಪ ಮೆತ್ತಗಾದ ಈ ಹಣ್ಣುಗಳು ಒಂದು ಪ್ಲಾಸ್ಟಿಕ್ ಚೀಲದಲ್ಲಿ ಪತ್ತೆಯಾಗಿವೆ. ಈ ಟೊಮೆಟೊಗಳು ಒಂದಿಷ್ಟು ಬಣ್ಣ ಕಳೆದುಕೊಂಡಿರುವುದನ್ನು ಬಿಟ್ಟರೆ ಇವಕ್ಕೆ ಯಾವುದೇ ಸೂಕ್ಷ್ಮಜೀವಿ ಅಥವಾ ಶಿಲೀಂಧ್ರಗಳ ಸೋಂಕು ತಗುಲಿಲ್ಲ. ಅಂದರೆ ಬಾಹ್ಯಾಕಾಶದಲ್ಲಿರುವಾಗ ಇವು ಕೊಳೆತು ಹೋಗದಿರುವುದು ವಿಶೇಷವಾಗಿದೆ.
ಚಂದ್ರ ಮತ್ತು ಮಂಗಳ ಗ್ರಹಕ್ಕೆ ದೀರ್ಘಾವಧಿಯ ಬಾಹ್ಯಾಕಾಶ ಯಾನ ಕಾರ್ಯಾಚರಣೆಗಳಿಗಾಗಿ ಆಹಾರ ಬೆಳೆಯುವುದು ಕೂಡ ಅನೇಕ ಸಂಶೋಧನೆಗಳಲ್ಲಿ ಒಂದಾಗಿದೆ. ಮಣ್ಣು ಅಥವಾ ಇತರ ಬೆಳವಣಿಗೆಯ ಮಾಧ್ಯಮ ಇಲ್ಲದೇ ಹೈಡ್ರೋಪೋನಿಕ್ ಮತ್ತು ಏರೋಪೋನಿಕ್ ತಂತ್ರಗಳ ಮೂಲಕ ಸಸ್ಯಗಳನ್ನು ಬೆಳೆಸುವುದು ಎಕ್ಸ್ ರೂಟ್ಸ್ ಪ್ರಯೋಗದ ಉದ್ದೇಶವಾಗಿದೆ.
ಎಕ್ಸ್ರೂಟ್ಸ್ ಪ್ರಯೋಗದಲ್ಲಿ ಕಾಣೆಯಾಗಿ ಮತ್ತೆ ಪತ್ತೆಯಾದ ಟೊಮೆಟೊಗಳು ವಿಶ್ಲೇಷಣೆಗಾಗಿ ಭೂಮಿಗೆ ಮರಳುವುದಿಲ್ಲವಾದರೂ, ಬಾಹ್ಯಾಕಾಶ ನಿಲ್ದಾಣದ ಸಸ್ಯ ಸಂಶೋಧನೆ ಕೇಂದ್ರವಾದ Plant Habitat-03 ನಲ್ಲಿ ಇರಲಿವೆ. ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ ದಾಖಲೆಯ 371 ದಿನಗಳನ್ನು ಕಳೆದಿರುವ ರುಬಿಯೊ ವಿಇಜಿ - 05 ಅಧ್ಯಯನಕ್ಕಾಗಿ ಸಿಪ್ಪೆ ಸುಲಿಯುವ ಪ್ರಯೋಗ ನಡೆಸಿದ್ದರು.
ಇದು ಬಾಹ್ಯಾಕಾಶದಲ್ಲಿ ನಿರಂತರ ತಾಜಾ - ಆಹಾರ ಉತ್ಪಾದನಾ ವ್ಯವಸ್ಥೆಯ ಬೆಳವಣಿಗೆಗೆ ಸಹಾಯ ಮಾಡುತ್ತದೆ. ತೋಟಗಾರಿಕೆಯಲ್ಲಿ ಸಮಯ ಕಳೆಯುವುದರಿಂದ ಬಾಹ್ಯಾಕಾಶದಲ್ಲಿ ತಮ್ಮ ಜೀವನದ ಗುಣಮಟ್ಟ ಉತ್ತಮವಾಗುತ್ತದೆ ಮತ್ತು ತಮ್ಮ ನೈತಿಕ ಸ್ಥೈರ್ಯ ಹೆಚ್ಚಾಗುತ್ತದೆ ಎಂದು ಗಗನಯಾತ್ರಿಗಳು ಹೇಳಿದ್ದಾರೆ.
ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ (ಐಎಸ್ಎಸ್) ಬಹುರಾಷ್ಟ್ರೀಯ ಯೋಜನೆಯಾಗಿದ್ದು ಇದು ಮಾನವರು ಬಾಹ್ಯಾಕಾಶದಲ್ಲಿ ನಿರ್ಮಾಣ ಮಾಡಿದ ಅತಿದೊಡ್ಡ ಏಕ ರಚನೆಯಾಗಿದೆ. ಇದರ ನಿರ್ಮಾಣವು 1998 ಮತ್ತು 2011 ರ ನಡುವೆ ಪೂರ್ಣಗೊಂಡಿತು. ಆದಾಗ್ಯೂ ನಿಲ್ದಾಣದಲ್ಲಿ ಹೊಸ ಪ್ರಯೋಗಗಳನ್ನು ಮಾಡಲು ಇದರ ರಚನೆಯಲ್ಲಿ ನಿರಂತರವಾಗಿ ಬದಲಾವಣೆ ಮಾಡಲಾಗುತ್ತಿರುತ್ತದೆ.
ಇದನ್ನೂ ಓದಿ : ಚಂದ್ರ, ಮಂಗಳನ ಮೇಲೆ ವಾಸಿಸುವ ಸಮಯವಿದು; ಎಲೋನ್ ಮಸ್ಕ್