ವಾಷಿಂಗ್ಟನ್, ಅಮೆರಿಕ : ಅತಿವೃಷ್ಟಿ ಅಥವಾ ಅನಾವೃಷ್ಟಿಗಳು ಸಾಮಾನ್ಯವಾಗಿ ಕೆಲ ನೈಸರ್ಗಿಕ ವಿಕೋಪಗಳಿಗೆ ಕಾರಣವಾಗುತ್ತವೆ. ಅತಿವೃಷ್ಟಿಯಿಂದ ಪ್ರವಾಹಗಳು ಉಂಟಾದರೆ, ಅನಾವೃಷ್ಟಿಯಿಂದ ಬರಗಾಲದಂತಹ ಸಮಸ್ಯೆಗಳು ಉಂಟಾಗುತ್ತವೆ. ಆದರೆ, ಇಲ್ಲೊಂದು ಸಂಶೋಧನೆ ಬೇರೊಂದು ವಿಚಾರವನ್ನು ಬಹಿರಂಗಪಡಿಸಿದೆ.
ಮಾನವ ಚಟುವಟಿಕೆಗಳೂ ಪ್ರವಾಹ ಅಥವಾ ಬರಗಾಲಕ್ಕೆ ಕಾರಣವಾಗುತ್ತಿವೆ ಎಂದು ಹೊಸ ಅಧ್ಯಯನವೊಂದು ಕಂಡು ಹಿಡಿದಿದೆ. ಈ ಸಂಶೋಧನಾ ವರದಿಯನ್ನು ನೇಚರ್ ಸಸ್ಟೈನಬಿಲಿಟಿ (Nature Sustainability) ಜರ್ನಲ್ನಲ್ಲಿ ಪ್ರಕಟಿಸಲಾಗಿದೆ.
ಕೆನಡಾದ ವಾಟರ್ ಲೂ ವಿಶ್ವವಿದ್ಯಾಲಯ ಕೆನಡಾ ಮತ್ತು ಅಮೆರಿಕದಲ್ಲಿನ 2,272 ಪ್ರವಾಹಗಳನ್ನು ಅಧ್ಯಯನ ಮಾಡಿದ್ದು, ಈ ಪ್ರವಾಹಗಳು ಮಾನವನಿರ್ಮಿತ ಅಣೆಕಟ್ಟುಗಳು, ಕಾಲುವೆಗಳು ಮತ್ತು ನಗರೀಕರಣದಂತಹ ಬೆಳವಣಿಗೆಗಳಿಂದ ಪ್ರಭಾವಿತವಾಗಿವೆ ಎಂದು ತಿಳಿದು ಬಂದಿದೆ. ಅದರಲ್ಲೂ ನೈಸರ್ಗಿಕವಾಗಿ ನೀರಿರುವ ಪ್ರದೇಶಗಳಿಗಿಂತ ಮಾನವನಿರ್ಮಿತ ರಚನೆಗಳು ಅತಿ ಹೆಚ್ಚು ಪ್ರಭಾವ ಬೀರುತ್ತವೆ ಎಂದು ಅಧ್ಯಯನ ವರದಿ ಹೇಳಿದೆ.
ಇದನ್ನೂ ಓದಿ: ಮಾನವನಿಗೆ ಪ್ರಾಣಿಗಳ ಅಂಗಗಳ ಕಸಿ ಮಾಡುವ ತಂತ್ರಜ್ಞಾನ ಸಂಪೂರ್ಣ ಯಶಸ್ವಿಯಾಗುವುದು ಸಾಧ್ಯವೇ?
ಜಲಾನಯನ ಪ್ರದೇಶಗಳಿಗೆ ಹೆಚ್ಚು ನೀರು ಹರಿಸುವ ಕಾರಣದಿಂದ ಆ ಭಾಗದಲ್ಲಿ ಪ್ರವಾಹವಾಗುವ ಸಾಧ್ಯತೆ ಹೆಚ್ಚಾಗಿರುತ್ತದೆ. ಜಲಾನಯನ ಪ್ರದೇಶಗಳಿಗೆ ಹೆಚ್ಚಿನ ನೀರನ್ನು ಹರಿಸುವ ಮುಖಾಂತರ ಮತ್ತೊಂದು ಭಾಗದಲ್ಲಿ ನೀರಿನ ಕೊರತೆ ಹೆಚ್ಚಾಗಬಹುದಾಗಿದೆ. ಇದರಿಂದ ಬರಗಾಲ ಉಂಟಾಗಬಹುದು. ಇಂತಹ ಎರಡೂ ಪರಿಸ್ಥಿತಿಗಳಲ್ಲಿ ಜೀವವೈವಿಧ್ಯಕ್ಕೆ ತೊಂದರೆ ಉಂಟಾಗಬಹುದು.
ನೈಸರ್ಗಿಕವಾಗಿ ನೀರಿರುವ ಪ್ರದೇಶಗಳಿಗೆ ಹೋಲಿಕೆ ಮಾಡಿದರೆ, ಮಾನವ ನಿರ್ಮಿತ ನೀರಿನ ಪ್ರದೇಶಗಳಲ್ಲಿ ಮಳೆಗಾಲದಲ್ಲಿ ಪ್ರವಾಹ ಮತ್ತು ಬೇಸಿಗೆಕಾಲದಲ್ಲಿ ಬರಗಾಲದಂತಹ ಸನ್ನಿವೇಶಗಳು ಹೆಚ್ಚಾಗಿ ಉದ್ಭವಿಸುತ್ತವೆ ಎಂದು ವಾಟರ್ಲೂ ವಿವಿಯ ತಜ್ಞರು ಹೇಳಿದ್ದಾರೆ.