ಸ್ಯಾನ್ ಫ್ರಾನ್ಸಿಸ್ಕೋ : ಕಾಲೇಜು ವಿದ್ಯಾರ್ಥಿಗಳ ಪೈಕಿ ಮೂರನೇ ಒಂದು ಭಾಗದಷ್ಟು ಅಂದರೆ ಶೇಕಡಾ 35ರಷ್ಟು ವಿದ್ಯಾರ್ಥಿಗಳು ತಮ್ಮ ವಿದ್ಯಾಭ್ಯಾಸದಲ್ಲಿ ಸಹಾಯ ಮಾಡಲು ಕಳೆದ ಒಂದು ವರ್ಷದಲ್ಲಿ ಚಾಟ್ ಜಿಪಿಟಿಯಂತಹ ಕೃತಕ ಬುದ್ಧಿಮತ್ತೆ ಚಾಟ್ ಬಾಟ್ ಗಳನ್ನು ಬಳಸಿದ್ದಾರೆ ಎಂದು ಹೊಸ ಸಮೀಕ್ಷೆಯೊಂದು ಬಹಿರಂಗಪಡಿಸಿದೆ. ಮಾರ್ನಿಂಗ್ ಕನ್ಸಲ್ಟ್ ನಡೆಸಿದ ಮೆಕ್ ಗ್ರಾ ಹಿಲ್ ಸಮೀಕ್ಷೆಯಲ್ಲಿ ವಿದ್ಯಾರ್ಥಿಗಳ ಅಭ್ಯಾಸ ಮತ್ತು ಮಾನಸಿಕ ಆರೋಗ್ಯದ ಬಗ್ಗೆ ಇತ್ತೀಚಿನ ಉನ್ನತ ಶಿಕ್ಷಣ ಪ್ರವೃತ್ತಿಗಳ ಬಗ್ಗೆ ತಿಳಿಯಲು 500 ಪದವಿಪೂರ್ವ ವಿದ್ಯಾರ್ಥಿಗಳು ಮತ್ತು 200 ಕಾಲೇಜು ಬೋಧಕರನ್ನು ಸಂದರ್ಶಿಸಲಾಗಿದೆ.
ದೀರ್ಘಾವಧಿಯಲ್ಲಿ ಎಐ ಕಲಿಕೆಯನ್ನು ಸುಧಾರಿಸುತ್ತದೆ ಎಂಬುದು ಬಹುತೇಕ ವಿದ್ಯಾರ್ಥಿಗಳು ಮತ್ತು ಬೋಧಕರ ಅಭಿಪ್ರಾಯವಾಗಿದೆ. ಎಐ ಕಲಿಕೆಯ ಮೇಲೆ ನಕಾರಾತ್ಮಕ ಪರಿಣಾಮಗಳನ್ನು ಬೀರುತ್ತದೆ ಎಂಬುದಕ್ಕಿಂತ ಎಐ ವಿದ್ಯಾರ್ಥಿಗಳ ಕಲಿಕೆಯನ್ನು ಸುಧಾರಿಸುತ್ತದೆ ಎಂದು ಸುಮಾರು ಶೇಕಡಾ 58 ರಷ್ಟು ಬೋಧಕರು ಮತ್ತು ಶೇಕಡಾ 62 ರಷ್ಟು ವಿದ್ಯಾರ್ಥಿಗಳು ಒಪ್ಪುತ್ತಾರೆ.
ವಿಶ್ವಾಸಾರ್ಹ ಶೈಕ್ಷಣಿಕ ಮೂಲಗಳಿಂದ ಅಭಿವೃದ್ಧಿಪಡಿಸಿದ ಮತ್ತು ಪರಿಶೀಲಿಸಿದ ಕಂಟೆಂಟ್ ಆಧರಿಸಿ ಕೆಲಸ ಮಾಡುವ ಮತ್ತು ನಿಯಂತ್ರಕಗಳನ್ನು ಹೊಂದಿದ ಎಐ ಸಾಧನಗಳನ್ನು ಬಳಸಲು ಬೋಧಕರು ಮತ್ತು ವಿದ್ಯಾರ್ಥಿಗಳು ಒಲವು ಹೊಂದಿದ್ದಾರೆ. ಚಾಟ್ಜಿಪಿಟಿ ಶೈಕ್ಷಣಿಕ ಕ್ಷೇತ್ರದಲ್ಲಿ ಹೇಗೆ ಸಹಕಾರಿಯಾಗಬಲ್ಲದು ಎಂಬುದನ್ನು ತಿಳಿಯಲು ಮತ್ತಷ್ಟು ಸಂಶೋಧನೆಗಳು ನಡೆಯಬೇಕಿವೆ.
"ಎಐ ತಂತ್ರಜ್ಞಾನವು ಕಲಿಕೆಯನ್ನು ಸುಧಾರಿಸುವ ಮತ್ತು ಬೋಧಕನಾಗಿ ನನ್ನ ಕೆಲಸವನ್ನು ಸುಲಭಗೊಳಿಸುವ ಸಾಮರ್ಥ್ಯವನ್ನು ಹೊಂದಿದೆ ಎಂದು ನಾನು ಭಾವಿಸುತ್ತೇನೆ. ಆದರೆ ಬೋಧಕರು ತಂತ್ರಜ್ಞಾನವನ್ನು ಕೋರ್ಸ್ ವರ್ಕ್ ನಲ್ಲಿ ಅಳವಡಿಸಲು ಪ್ರಯತ್ನಿಸುವ ಮೊದಲು ಅದರ ಸಾಮರ್ಥ್ಯಗಳು ಮತ್ತು ಮಿತಿಗಳ ಬಗ್ಗೆ ತಿಳಿದುಕೊಳ್ಳಬೇಕು ಎಂದು ನಾನು ಭಾವಿಸುತ್ತೇನೆ" ಎಂದು ವಿಸ್ಕಾನ್ಸಿನ್-ಮಿಲ್ವಾಕೀ ವಿಶ್ವವಿದ್ಯಾಲಯದ (ಯುಡಬ್ಲ್ಯೂಎಂ) ಜೈವಿಕ ವಿಜ್ಞಾನ ವಿಭಾಗದ ಹಿರಿಯ ಬೋಧನಾ ಸಿಬ್ಬಂದಿ ಸದಸ್ಯ ಆನ್ ರಾಡಂಟ್ ಹೇಳಿದರು.
ಸಮೀಕ್ಷೆಗೆ ಪ್ರತಿಕ್ರಿಯಿಸಿದ ವಿದ್ಯಾರ್ಥಿಗಳ ಪೈಕಿ ಶೇಕಡಾ 57ರಷ್ಟು ವಿದ್ಯಾರ್ಥಿಗಳು ಅಧ್ಯಯನದ ಕಾರಣದಿಂದ ಸುಸ್ತು ಮತ್ತು ಶೇ 56 ರಷ್ಟು ವಿದ್ಯಾರ್ಥಿಗಳು ಸ್ವಲ್ಪ ಮಟ್ಟಿಗಿನ ಒತ್ತಡ ಅನುಭವಿಸಿರುವುದಾಗಿ ಹೇಳಿಕೊಂಡಿದ್ದಾರೆ. ಮೆಕ್ ಗ್ರಾ ಹಿಲ್ ನಡೆಸಿದ ಮತ್ತೊಂದು ಇತ್ತೀಚಿನ ಸಮೀಕ್ಷೆಯ ಪ್ರಕಾರ, ಉನ್ನತ ಶಿಕ್ಷಣ ಕೋರ್ಸ್ ತಯಾರಿಸುವವರು ಮಾನಸಿಕ ಆರೋಗ್ಯ ಜಾಗೃತಿಯ ವಿಷಯವನ್ನು ಕೂಡ ಅಧ್ಯಯನದಲ್ಲಿ ಅಳವಡಿಸಲಿ ಎಂದು ವಿದ್ಯಾರ್ಥಿಗಳು ಹೇಳಿರುವುದು ಗಮನಾರ್ಹ.
ಇದನ್ನೂ ಓದಿ: ಗೂಗಲ್ ಆಡ್ಸೆನ್ಸ್ ನಿಯಮ ಬದಲು; 'ಪೇ ಪರ್ ಕ್ಲಿಕ್' ಬದಲಿಗೆ 'ಪೇ ಪರ್ ಇಂಪ್ರೆಷನ್'