ನ್ಯೂ ಸೈಂಟಿಸ್ಟ್ (ಯುಕೆ) : ವಿಜ್ಞಾನಿ ಸೆಂಟೆನ್ಸ್ಕ ಮತ್ತು ಆಕೆಯ ಸಹೋದ್ಯೋಗಿಗಳು ಕೆಲವು ಜೇಡಗಳನ್ನು ಹಿಡಿದು, ನಿಧಾನಗತಿಯಲ್ಲಿ ಅವುಗಳ ನಡವಳಿಕೆಯನ್ನು ಚಿತ್ರೀಕರಿಸಲು ಪ್ರಯೋಗಾಲಯಕ್ಕೆ ತಂದರು.
ಹೀಗೆ ಜೇಡಗಳನ್ನು ತಂದು ಅವುಗಳ ಮೇಲೆ ನಿಗಾ ಇಟ್ಟಿದ್ದ ಸೆಂಟೆನ್ಸ್ಕ, ಅವುಗಳ ನಡವಳಿಕೆಗಳ ಬಗ್ಗೆ ಮಾಹಿತಿ ಕಲೆ ಹಾಕಿದ್ದು, ಸಂತಾನೋತ್ಪತಿ ಕ್ರಿಯೆಯ ಬಳಿಕ ತನ್ನ ಜೀವ ಉಳಿಸಿಕೊಳ್ಳಲು ಗಂಡು ಜೇಡ, ಹೆಣ್ಣು ಜೇಡವನ್ನು ಹೇಗೆ ಒಲಿಸಿಕೊಳ್ಳುತ್ತದೆ ಎಂಬುವುದನ್ನು ಹಂಚಿಕೊಂಡಿದ್ದಾರೆ.
ಸೆಂಟೆನ್ಸ್ಕ ಹೇಳುವಂತೆ, ಅವರು ತಂದ ಗಂಡು ಜೇಡವೊಂದು ಹೆಣ್ಣು ಜೇಡದ ಕಡೆಗೆ ಧಾವಿಸಿ ಬರುತ್ತದೆ. ಬಳಿಕ ಹೆಣ್ಣು ಜೇಡವನ್ನು ಕಚ್ಚುತ್ತದೆ, ಅದರ ಕಾಲುಗಳನ್ನು ಹಿಡಿದು ಎಳೆಯುತ್ತದೆ ಮತ್ತು ಸತ್ತಂತೆ ನಟಿಸುತ್ತದೆ.
ಅಲ್ಲದೆ, ಹೆಣ್ಣು ಜೇಡದ ಮೇಲೆ ಸ್ವಲ್ಪ ಬಲೆ ಹೆಣೆಯುತ್ತದೆ, ಅದರ ಕಾಲುಗಳನ್ನು ಗಟ್ಟಿಯಾಗಿ ಹಿಡಿದುಕೊಳ್ಳುತ್ತದೆ. ಈ ರೀತಿ ಮಾಡಿ ಹೆಣ್ಣು ಜೇಡವನ್ನು ಓಲೈಸಿ, ಸುಮಾರು 19 ನಿಮಿಷಗಳ ಕಾಲ ಸಂತಾನೋತ್ಪತಿ ಕ್ರಿಯೆ ನಡೆಸಿ, ಅಲ್ಲಿಂದ ಗಂಡು ಜೇಡ ಓಡಿ ಹೋಗುತ್ತದೆ.
ಈ ಪ್ರಕ್ರಿಯೆ ನೋಡಲು ಒಂದು ರೀತಿ ಘೋರವಾಗಿ ಕಾಣುತ್ತದೆ. ಆದರೆ, ಪರಸ್ಪರ ಸೇರಿದ ಬಳಿಕ ತನ್ನ ಜೀವ ಉಳಿಸಿಕೊಳ್ಳಲು ಗಂಡು ಜೇಡಕ್ಕೆ ಇದು ಅನಿವಾರ್ಯ. ಸಂತಾನೋತ್ಪತ್ತಿ ಕ್ರಿಯೆಯ ಬಳಿಕ, ಕೆಲ ದೊಡ್ಡ ಹೆಣ್ಣು ಜೇಡಗಳು, ಗಂಡು ಜೇಡವನ್ನು ಕೊಂದು ತಿನ್ನುತ್ತವೆ.
ಆದ್ದರಿಂದ ಪರಸ್ಪರ ಸೇರಿದ ಬಳಿಕ ತನ್ನನ್ನು ತಾನು ರಕ್ಷಿಸಿಕೊಳ್ಳಲು ಗಂಡು ಜೇಡ ಹೆಣ್ಣನ್ನು ಈ ರೀತಿ ಓಲೈಸುವ ಅನಿವಾರ್ಯತೆ ಇದೆ. ಹೆಣ್ಣು ಗಂಡನ್ನು ಯಾಕೆ ತಿನ್ನುತ್ತದೆ ಎಂಬುವುದಕ್ಕೆ ಉತ್ತರ ಹೇಳಲು ಸಾಧ್ಯವಿಲ್ಲ. ಯಾಕೆಂದರೆ, ಇದು ಪ್ರಕೃತಿಯಲ್ಲಿ ನಡೆಯುವ ಕ್ರಿಯೆಯಾಗಿದೆ.
ಗಂಡು ಜೇಡ, ಹೆಣ್ಣಿನ ಬಳಿಗೆ ಹೋದಾಗ ಅದರ ಕಾಲುಗಳನ್ನು ಬಿಗಿಯುತ್ತದೆ. ಆದರೆ, ಇದರಿಂದ ತಪ್ಪಿಸಿಕೊಳ್ಳಲು ಹೆಣ್ಣಿಗೆ ಹೆಚ್ಚು ಸಮಯ ಬೇಕಾಗಿಲ್ಲ. ಆದ್ದರಿಂದಲೇ ಗಂಡು ಜೇಡ ಅದರ ಮೇಲೆ ಸ್ವಲ್ಪ ಬಲೆ ಹೆಣೆಯುವ ಮೂಲಕ, ಒಂದು ರಾಸಾಯನಿಕ ಸಂದೇಶದ ಮೂಲಕ ಅದನ್ನು ಓಲೈಸುವ ಪ್ರಯತ್ನ ಮಾಡುತ್ತದೆ.
ಇದರಿಂದ ಹೆಣ್ಣು ಜೇಡ ಹತೋಟಿಗೆ ಬಂದರೆ, ಗಂಡಿಗೆ ಸಂತಾನೋತ್ಪತಿ ಕ್ರಿಯೆ ಮುಂದುವರೆಸಲು ಬಿಡಬಹುದು ಎಂದು ಸೆಂಟೆನ್ಸ್ಕಾ ಅಭಿಪ್ರಾಯಪಟ್ಟಿದ್ದಾರೆ. ಪ್ರಕೃತಿಯಲ್ಲಿ ನಡೆಯುವ ಈ ಜೇಡಗಳ ನಡುವಿನ ಓಲೈಕೆ ಪ್ರಕ್ರಿಯೆ ಒಂದು ರೀತಿ ಘರ್ಷಣೆಯಂತೆ ಕಂಡರೂ, ಗಂಡು ತನ್ನನ್ನು ರಕ್ಷಿಸಿಕೊಳ್ಳಲು ಮಾಡುವ ಪ್ರಯತ್ನ ರೋಚಕವಾಗಿದೆ.