ಜಿನೀವಾ, ಸ್ವಿಟ್ಜರ್ಲೆಂಡ್ : ಮಾನವನ ನರಮಂಡಲಕ್ಕೆ ಸಂಬಂಧಿಸಿದಂತೆ ಹಲವಾರು ರೋಗಗಳಿಗೆ ಪರಿಹಾರವನ್ನು ಕಂಡುಕೊಳ್ಳಲು ಸಂಶೋಧನೆಗಳು ನಡೆಯುತ್ತಿವೆ. ಕೆಲ ರೋಗಗಳಿಗೆ ಇನ್ನೂ ಯಾವುದೇ ಚಿಕಿತ್ಸೆ ಕೂಡ ಇಲ್ಲ. ಅಂತಹ ರೋಗಗಳಲ್ಲಿ ಪಾರ್ಕಿನ್ಸನ್ ರೋಗವೂ ಒಂದು. ಈಗ ಪಾರ್ಕಿನ್ಸನ್ ರೋಗಕ್ಕೆ ಚಿಕಿತ್ಸೆ ವಿಚಾರದಲ್ಲಿ ಹೊಸ ಸಂಶೋಧನೆಯೊಂದು ನಡೆದಿದ್ದು, ಪಾರ್ಕಿನ್ಸನ್ ರೋಗಿಗಳಲ್ಲಿ ಆಶಾಭಾವನೆ ಮೂಡಿಸಿದೆ.
ಜಿನೀವಾ ವಿಶ್ವವಿದ್ಯಾಲಯದ ವಿಜ್ಞಾನಿಗಳು ನೊಣಗಳಲ್ಲಿ ಮತ್ತು ಇಲಿಗಳಲ್ಲಿ ಪ್ರಮುಖ ಪ್ರೋಟೀನ್ ಅನ್ನು ಗುರುತಿಸಿದ್ದು, ಈ ಪ್ರೋಟೀನ್ ಪಾರ್ಕಿನ್ಸನ್ ಕಾಯಿಲೆಯ ವಿರುದ್ಧ ಹೋರಾಡುವ ಗುಣ ಹೊಂದಿದೆ ಎಂದು ಸಂಶೋಧನೆಯೊಂದರಲ್ಲಿ ಖಚಿತಪಡಿಸಿಕೊಂಡಿದ್ದಾರೆ. ಈ ಸಂಶೋಧನೆ 'ನೇಚರ್ ಕಮ್ಯುನಿಕೇಷನ್' ಎಂಬ ಜರ್ನಲ್‌ನಲ್ಲಿ ಪ್ರಕಟವಾಗಿದೆ.
ಮೊದಲಿಗೆ ಪಾರ್ಕಿನ್ಸನ್ ರೋಗ ಎಂದರೆ ಏನು ಎಂಬುದನ್ನು ನೋಡೋಣ. ನಾವು ಯಾವುದಾದರೂ ಒಂದು ವಸ್ತುವನ್ನು ನಮ್ಮ ಕೈಯಿಂದ ಮುಟ್ಟಿದಾಗ ಅದರ ಸ್ಪರ್ಶದ ಅನುಭವ ನಮಗೆ ಆಗಬೇಕಾದರೆ, ನಮ್ಮ ಕೈಯಲ್ಲಿರುವ ಜೀವಕೋಶಗಳು, ಆ ಸ್ಪರ್ಶಿಸಿರುವ 'ವಿಚಾರ'ವನ್ನು ಮೆದುಳಿಗೆ ಮುಟ್ಟಿಸಬೇಕಾಗುತ್ತದೆ.
ಕೋಟ್ಯಂತರ ಜೀವಕೋಶಗಳು ಒಂದಕ್ಕೊಂದು ಬೆಸೆದುಕೊಂಡಿದ್ದು, ಆ ಜೀವಕೋಶಗಳು ಮೆದುಳಿಗೆ ಸ್ಪರ್ಶಿಸಿದ ಮಾಹಿತಿ ನೀಡಿದಾಗಲೇ ನಮಗೆ ಸ್ಪರ್ಶದ ಅನುಭವವಾಗುತ್ತದೆ. ಈ ಜೀವಕೋಶಗಳು ನ್ಯೂರಾನ್ಗಳು ಅಥವಾ ನರಕೋಶಗಳು ಎಂದು ಕರೆಯುತ್ತೇವೆ.
ಒಮ್ಮೊಮ್ಮೆ ನರಕೋಶಗಳಿಗೆ ಹಾನಿಯಾಗುವ ಮೂಲಕ ಅಥವಾ ನರಕೋಶಗಳು ಸಾವನ್ನಪ್ಪುವ ಮೂಲಕ ಮನುಷ್ಯದಲ್ಲಿ ದೇಹದಲ್ಲಿ ಗುಣಪಡಿಸಲಾಗದ ಬದಲಾವಣೆಗಳಾಗುತ್ತದೆ ಅಥವಾ ಮನುಷ್ಯನ ದೇಹ ದುರ್ಬಲಗೊಳ್ಳುತ್ತದೆ. ಇದು ನ್ಯೂರೋಡಿಜೆನೆರೆಟಿವ್ ಡಿಸಾರ್ಡರ್ (Neurodegenerative Disorder) ಆಗಿದೆ. ನ್ಯೂರೋಡಿಜೆನೆರೆಟಿವ್ ಡಿಸಾರ್ಡರ್ಗಳಲ್ಲಿ ಅತ್ಯಂತ ಮುಖ್ಯವಾಗಿರುವುದೇ ಪಾರ್ಕಿನ್ಸನ್ ರೋಗ.
ಡೋಪಮಿನರ್ಜಿಕ್ ಎಂಬ ಹೆಸರಿನ ನರಕೋಶಗಳು ಸಾವನ್ನಪ್ಪುವ ಮೂಲಕ ಅಥವಾ ಹಾನಿಗೆ ಒಳಗಾಗುವ ಮೂಲಕ ಪಾರ್ಕಿನ್ಸನ್ ರೋಗ ಬಾಧಿಸುತ್ತೆ. ಸಾಮಾನ್ಯವಾಗಿ ಮನುಷ್ಯರಿಗೆ ವಯಸ್ಸಾದಂತೆ ನರಕೋಶಗಳು ಹಾನಿಗೆ ಒಳಗಾಗುತ್ತವೆ. ಆದ್ದರಿಂದ ವಯಸ್ಸಾದವರಲ್ಲಿ ಪಾರ್ಕಿನ್ಸನ್ ಕಾಯಿಲೆ ಕಾಣಿಸಿಕೊಳ್ಳುವ ಸಾಧ್ಯತೆ ದಟ್ಟವಾಗಿರುತ್ತದೆ.
ಎಲ್ಲಾ ಜೀವಕೋಶಗಳಲ್ಲಿ ನಾವು ತಿಳಿದುಕೊಂಡಿರುವಂತೆ ಮೈಟೋಕಾಂಡ್ರಿಯಾ ಇರುತ್ತದೆ. ಜೀವಕೋಶದ ಶಕ್ತಿ ಉತ್ಪಾದನಾ ಕಾರ್ಖಾನೆಗಳೆಂದು ಮೈಟೋಕಾಂಡ್ರಿಯಾಗಳನ್ನು ಕರೆಯಲಾಗುತ್ತದೆ. ಶಕ್ತಿ ಉತ್ಪಾದನಾ ಕೇಂದ್ರವಾಗಿ ಮಾತ್ರವಲ್ಲದೇ ಒಂದು ವೇಳೆ ಜೀವಕೋಶಕ್ಕೆ ಹಾನಿಯಾದರೆ ಆ ಜೀವಕೋಶವನ್ನು ನಾಶಪಡಿಸಿಕೊಳ್ಳಲೂ ಈ ಮೈಟೋಕಾಂಡ್ರಿಯಾ ಸಹಕರಿಸುತ್ತದೆ. ಹೀಗೆ ಜೀವಕೋಶಗಳ ಹಾನಿಯಿಂದಾಗಿ ಪಾರ್ಕಿನ್ಸನ್ ಕಾಯಿಲೆ ಕಂಡು ಬರುತ್ತದೆ.
ಜಿನೀವಾ ವಿಶ್ವವಿದ್ಯಾಲಯದ ವಿಜ್ಞಾನಿಗಳು ಡೋಪಮಿನರ್ಜಿಕ್ ನ್ಯೂರಾನ್‌ಗಳ ಕುರಿತು ಅಧ್ಯಯನ ಮಾಡಿದ್ದು, ಡ್ರೊಸೊಫಿಲಾ ಎಂಬ ನೊಣವನ್ನು ಮಾದರಿಯಾಗಿ ಬಳಸಿಕೊಂಡಿದ್ದರು. ಡ್ರೊಸೊಫಿಲಾ ನೊಣದ ಡೋಪಮಿನರ್ಜಿಕ್ ನ್ಯೂರಾನ್ ಜೀವಕೋಶದಲ್ಲಿನ ಫೇರ್2 ಜೀನ್ (Fer2 Gene) ಕೆಲವು ಅಸ್ಪಷ್ಟ ಕಾರಣಗಳಿಂದಾಗಿ ನೊಣದಲ್ಲಿಯೂ ಪಾರ್ಕಿನ್ಸನ್ ಕಾಯಿಲೆಯಂತಹ ಸಮಸ್ಯೆಗಳನ್ನು ಉಂಟುಮಾಡುತ್ತದೆ ಎಂದು ತಿಳಿದುಕೊಂಡರು.
ಇದನ್ನೂ ಓದಿ: ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಹಾರಿದ ರಷ್ಯಾದ ಮೂವರು ಗಗನಯಾತ್ರಿಗಳು
ಇನ್ನಷ್ಟು ಅಧ್ಯಯನದ ಮೂಲಕ ನೊಣದ ಡೋಪಮಿನರ್ಜಿಕ್ ನ್ಯೂರಾನ್‌ಗಳಲ್ಲಿರುವ ಮೈಟೊಕಾಂಡ್ರಿಯಾದ ಆಕಾರದಲ್ಲಿ ಹಲವಾರು ದೋಷಗಳನ್ನು ಸಹಾ ಸಂಶೋಧಕರು ಪತ್ತೆ ಹಚ್ಚಿದ್ದರು. ಇದು ಮನುಷ್ಯರಲ್ಲಿ ಪಾರ್ಕಿನ್ಸನ್ ಕಾಯಿಲೆ ಬಂದರೆ, ಮೈಟೋಕಾಂಡ್ರಿಯಾ ಹೇಗಿರುತ್ತದೆಯೋ? ಅದೇ ರೀತಿಯ ಆಕಾರದಲ್ಲಿ ನೊಣದ ಡೋಪಮಿನರ್ಜಿಕ್ ನ್ಯೂರಾನ್ ಇರುತ್ತದೆ ಎಂದು ತಿಳಿದು ಬಂದಿತು.
ಒಂದು ವೇಳೆ ಫೇರ್2 ಜೀನ್ಗಳನ್ನು ಹೆಚ್ಚಾಗಿ ಉತ್ಪಾದಿಸುವಂತೆ ಮಾಡಿದರೆ, ಮೈಟೊಕಾಂಡ್ರಿಯಾದ ದೋಷಗಳನ್ನು ರಚನೆಯನ್ನು ನಿಯಂತ್ರಿಸಬಹುದು ಎಂದು ತಿಳಿದು ಬಂದಿದೆ. ಈ ಜೀನ್ನಲ್ಲಿನ ಹೆಚ್ಚಳ ಡೋಪಮಿನರ್ಜಿಕ್ ನ್ಯೂರಾನ್‌ಗಳ ಅವನತಿಗೆ ವಿರುದ್ಧವಾಗಿ ಮಾಡುತ್ತವೆ ಎಂದು ಈ ಸಂಶೋಧನೆಯಿಂದ ತಿಳಿದು ಬಂತು. ಸಸ್ತನಿಗಳಾದ ಇಲಿಗಳಲ್ಲೂ ಫೇರ್2 ಜೀನ್ಗಳ ಹೆಚ್ಚಳ ಮೈಟೋಕಾಂಡ್ರಿಯಾದ ಅನವತಿಗೆ ವಿರುದ್ಧ ಹೋರಾಡಿ, ಪಾರ್ಕಿನ್ಸನ್ ರೋಗದಿಂದ ರಕ್ಷಿಸಬಲ್ಲದು ಎಂದು ಸಂಶೋಧಕರು ಕಂಡುಕೊಂಡಿದ್ದಾರೆ.