ನವದೆಹಲಿ : ಭಾರತೀಯ ವಿಜ್ಞಾನಿಗಳು ಮೊಟ್ಟಮೊದಲ ಬಾರಿಗೆ ಅಧಿಕ ಶಕ್ತಿಯ ಸ್ಫೋಟಕಗಳಲ್ಲಿ ಬಳಸಲಾಗುವ ನೈಟ್ರೊ-ಆರೊಮ್ಯಾಟಿಕ್ ರಾಸಾಯನಿಕಗಳನ್ನು ಶೀಘ್ರ ಪತ್ತೆ ಹಚ್ಚಲು ಥರ್ಮಲ್ ಸ್ಟೇಬಲ್ ಮತ್ತು ಕಡಿಮೆ ವೆಚ್ಚದ ಎಲೆಕ್ಟ್ರಾನಿಕ್ ಪಾಲಿಮರ್ ಆಧಾರಿತ ಸೆನ್ಸರ್ ಅನ್ನು ಅಭಿವೃದ್ಧಿಪಡಿಸಿದ್ದಾರೆ ಎಂದು ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ (ಡಿಎಸ್‌ಟಿ) ಶುಕ್ರವಾರ ತಿಳಿಸಿದೆ.
ಸ್ಫೋಟಕಗಳನ್ನು ನಾಶಪಡಿಸದೆ ಅವುಗಳನ್ನು ಪತ್ತೆ ಹಚ್ಚುವುದು ಅತ್ಯಗತ್ಯ ಮತ್ತು ಕ್ರಿಮಿನಲ್ ತನಿಖೆಗಳು, ಮೈನ್‌ಫೀಲ್ಡ್ ಪರಿಹಾರ, ಮಿಲಿಟರಿ ಅಪ್ಲಿಕೇಶನ್‌ಗಳು, ಭದ್ರತಾ ಅಪ್ಲಿಕೇಶನ್‌ಗಳು ಮತ್ತು ರಾಸಾಯನಿಕ ಸಂವೇದಕಗಳು ಅಂತಹ ಸಂದರ್ಭಗಳಲ್ಲಿ ಪ್ರಮುಖ ಪಾತ್ರವಹಿಸುತ್ತವೆ ಎಂದು ತಿಳಿಸಿದೆ.
ಸ್ಫೋಟಕ ಪಾಲಿ-ನೈಟ್ರೊರೊಮ್ಯಾಟಿಕ್ ರಾಸಾಯನಿಕಗಳನ್ನು ಸಾಮಾನ್ಯವಾಗಿ ಅತ್ಯಾಧುನಿಕ ತಂತ್ರಗಳಿಂದ ವಿಶ್ಲೇಷಿಸಬಹುದು. ಆದರೆ, ಕ್ರಿಮಿನಾಲಜಿ ಪ್ರಯೋಗಾಲಯಗಳು ಅಥವಾ ಮರುಪಡೆಯಲಾದ ಸೇನಾ ತಾಣಗಳಲ್ಲಿ ತ್ವರಿತ ನಿರ್ಧಾರ ತೆಗೆದುಕೊಳ್ಳಲು ಅಥವಾ ಉಗ್ರರ ಬಳಿ ಇರುವ ಸ್ಫೋಟಕಗಳನ್ನು ಪತ್ತೆಹಚ್ಚಲು ಸಾಮಾನ್ಯವಾಗಿ ಸರಳ, ಅಗ್ಗದ ಮತ್ತು ಆಯ್ದ ತಂತ್ರಗಳು ಬೇಕಾಗುತ್ತವೆ. ಇದು ಸುರಕ್ಷತೆಯ ದೃಷ್ಟಿಯಿಂದ ವಿನಾಶಕಾರಿ ಸ್ವಭಾವದ್ದಾಗಿರಬಾರದು ಎಂದು ತಿಳಿಸಲಾಗಿದೆ.
ಹಿಂದಿನ ಅಧ್ಯಯನಗಳು ಹೆಚ್ಚಾಗಿ ಫೋಟೋ-ಲ್ಯುಮಿನಿಸೆಂಟ್ ವಸ್ತುವಿನಿಂದ ಆಧರಿಸಿವೆ. ಇದಕ್ಕೂ ಮೊದಲು ಕೈಬಳಕೆಯ ಎಲ್ಇಡಿ ಲೈಟ್ ಆಧಾರಿತ ಯಂತ್ರದಿಂದ ಈ ವಸ್ತುಗಳ ಪತ್ತೆ ಕಾರ್ಯ ಮಾಡಲಾಗುತ್ತಿತ್ತು ಎಂದು ಡಿಎಸ್‌ಟಿ ತಿಳಿಸಿದೆ.
ಇಂತಹ ಅನಾನುಕೂಲಗಳನ್ನು ಹೋಗಲಾಡಿಸಲು, ಡಿಎಸ್‌ಟಿಯ ಸ್ವಾಯತ್ತ ಸಂಸ್ಥೆಯಾದ ಗುವಾಹಟಿಯ ಇನ್ಸ್‌ಟಿಟ್ಯೂಟ್ ಆಫ್ ಅಡ್ವಾನ್ಸ್ಟ್ ಸ್ಟಡಿ ಇನ್ ಸೈನ್ಸ್ ಅಂಡ್ ಟೆಕ್ನಾಲಜಿಯ ನೀಲೋತ್ಪಲ್ ಸೇನ್ ಶರ್ಮ ನೇತೃತ್ವದ ವಿಜ್ಞಾನಿಗಳ ತಂಡವು ಲೇಯರ್-ಬೈ-ಲೇಯರ್ (ಎಲ್‌ಬಿಎಲ್) ಪಾಲಿಮರ್ ಡಿಟೆಕ್ಟರ್ ಅನ್ನು ಅಭಿವೃದ್ಧಿಪಡಿಸಿದೆ. ಈ ಸೆನ್ಸಾರ್ ಸೂಚಕವು ಮೂರು ಪದರಗಳನ್ನ ಒಳಗೊಂಡಿರಲಿದೆ.
ಸೆನ್ಸಾರ್ ಸಾಧನವು ಸಾಕಷ್ಟು ಸರಳವಾಗಿದೆ ಮತ್ತು ಪರಿಸರ ಸ್ನೇಹಿ ಸಹ ಆಗಿದೆ. ಅದರ ಪ್ರತಿಕ್ರಿಯೆಯು ಇತರ ಸಾಮಾನ್ಯ ರಾಸಾಯನಿಕಗಳು ಮತ್ತು ತೇವಾಂಶದ ಉಪಸ್ಥಿತಿಯಲ್ಲಿ ವಿಭಿನ್ನ ಕಾರ್ಯಾಚರಣಾ ತಾಪಮಾನದೊಂದಿಗೆ ಬದಲಾಗುವುದಿಲ್ಲ.
ಸಾಧನವನ್ನು ಕೋಣೆಯ ಉಷ್ಣಾಂಶದಲ್ಲಿ ನಿರ್ವಹಿಸಬಹುದು. ಇತರ ರಾಸಾಯನಿಕಗಳೊಂದಿಗೆ ಬೆರೆತು ವ್ಯತಿರಿಕ್ತ ಪರಿಣಾಮ ಬೀರುವ ಸಾಧ್ಯತೆಗಳು ಬಹಳ ಕಡಿಮೆ. ಇದರ ಜೊತೆ ಈ ಸೆನ್ಸಾರ್ ತಯಾರಿಕೆಯು ತುಂಬಾ ಸರಳವಾಗಿದೆ, ಅಲ್ಲದೆ ಪರಿಸರ ಪ್ರೇಮಿಯಾಗಿದ್ದು, ಜೈವಿಕ ವಿಘಟಕಗಳಾಗಿವೆ ಎಂದು ಡಿಎಸ್‌ಟಿ ಮಾಹಿತಿ ನೀಡಿದೆ.
ಓದಿ: ಸೆಪ್ಟೆಂಬರ್ ಅಂತ್ಯಕ್ಕೆ Ford ಅಧ್ಯಕ್ಷ, ವ್ಯವಸ್ಥಾಪಕ ನಿರ್ದೇಶಕ ಹುದ್ದೆ ತೊರೆಯಲಿರುವ ಅನುರಾಗ್