ಚೆನ್ನೈ( ತಮಿಳುನಾಡು) : ಭಾರತೀಯ ಬಾಹ್ಯಾಕಾಶ ಕ್ಷೇತ್ರದ ಸ್ಟಾರ್ಟ್‌ಅಪ್ ಅಜಿಸ್ಟಾ ಬಿಎಸ್ಟಿ ಏರೋಸ್ಪೇಸ್ ಪ್ರೈವೇಟ್ ಲಿಮಿಟೆಡ್‌ನ (Azista BST Aerospace Pvt Ltd) ಮೊದಲ ರಿಮೋಟ್ ಸೆನ್ಸಿಂಗ್ ಉಪಗ್ರಹ ಎಬಿಎ ಫಸ್ಟ್ ರನ್ನರ್ (ABA First Runner -AFR) ಅನ್ನು ಸ್ಪೇಸ್‌ಎಕ್ಸ್‌ನ ಫಾಲ್ಕನ್ 9 ರಾಕೆಟ್ ಯಶಸ್ವಿಯಾಗಿ ಕಕ್ಷೆಗೆ ಸೇರಿಸಿದೆ. ಸ್ಪೇಸ್‌ಎಕ್ಸ್ ಪ್ರಕಾರ, ರೈಡ್‌ಶೇರ್ 72 ಬಾಹ್ಯಾಕಾಶ ನೌಕೆಯನ್ನು ಹೊತ್ತೊಯ್ದ ರಾಕೆಟ್ CubeSats, MicroSats ಮತ್ತು ಇತರವುಗಳನ್ನು ಒಳಗೊಂಡಿದೆ ಮತ್ತು ಅವುಗಳಲ್ಲಿ ಒಂದು ಅಹಮದಾಬಾದ್ ಮೂಲದ ಅಜಿಸ್ಟಾ ಬಿಎಸ್‌ಟಿ ಏರೋಸ್ಪೇಸ್‌ನ 80 ಕೆಜಿ ಉಪಗ್ರಹ ಎಎಫ್ಆರ್ ಆಗಿದೆ.
ಅಜಿಸ್ಟಾ ಬಿಎಸ್ಟಿ ಏರೋಸ್ಪೇಸ್ ಇಂಡೋ-ಜರ್ಮನ್ ಉಪಗ್ರಹ ಉತ್ಪಾದನೆಯ ಜಂಟಿ ಉದ್ಯಮವಾಗಿದೆ. ಭಾರತದ ಅಜಿಸ್ಟಾ ಇಂಡಸ್ಟ್ರೀಸ್ ಪ್ರೈ. ಲಿಮಿಟೆಡ್ (70 ಪ್ರತಿಶತ ಪಾಲು) ಮತ್ತು ಬರ್ಲಿನ್ ಸ್ಪೇಸ್ ಟೆಕ್ನಾಲಜೀಸ್ GmbH (30 ಪ್ರತಿಶತ ಪಾಲು) ಕಂಪನಿಗಳ ಜಂಟಿ ಸಹಭಾಗಿತ್ವದಲ್ಲಿ ಇದನ್ನು ಸ್ಥಾಪಿಸಲಾಗಿದೆ. "ಪ್ರಸ್ತುತ ಕಂಪನಿಯು ಅಜಿಸ್ಟಾ ಇಂಡಸ್ಟ್ರೀಸ್‌ನಿಂದ ಬಂಡವಾಳ ಪಡೆಯುತ್ತಿದೆ. ನಾವು ವೆಂಚರ್ ಕ್ಯಾಪಿಟಲ್ ಫಂಡಿಂಗ್‌ಗಾಗಿ ಪ್ರಯತ್ನಿಸುತ್ತಿಲ್ಲ. ನಾವು ವ್ಯವಹಾರದಲ್ಲಿ ದೀರ್ಘಾವಧಿಯ ದೃಷ್ಟಿಕೋನವನ್ನು ಹೊಂದಿದ್ದೇವೆ" ಎಂದು ನಿರ್ದೇಶಕ ಸುನಿಲ್ ಇಂದೂರ್ತಿ ಮಾಧ್ಯಮಕ್ಕೆ ತಿಳಿಸಿದ್ದಾರೆ.
ಎಎಫ್ಆರ್ ಇದು ಐದು ಮೀಟರ್ ರೆಸಲ್ಯೂಶನ್ ಹೊಂದಿರುವ ಪ್ಯಾಂಕ್ರೊಮ್ಯಾಟಿಕ್ ಚಿತ್ರವನ್ನು 70 ಕಿಮೀ ಸ್ವಾತ್ (Swath) ನೊಂದಿಗೆ ಒದಗಿಸುತ್ತದೆ. ಕಂಪನಿಯು ಮೊದಲ ಉಪಗ್ರಹ ಮತ್ತು ವಿಶ್ಲೇಷಣೆಯಿಂದ ಪಡೆದುಕೊಳ್ಳಬೇಕಾದ ಡೇಟಾಕ್ಕಾಗಿ ಕಾರ್ಯತಂತ್ರ ಮತ್ತು ಕೃಷಿ ಕ್ಷೇತ್ರಗಳಲ್ಲಿ ಸಂಭಾವ್ಯ ಗ್ರಾಹಕರನ್ನು ಹೊಂದಿದೆ. ಹೆಚ್ಚಿನ ಗ್ರಾಹಕರು ಆಗ್ನೇಯ ಏಷ್ಯಾ ಮತ್ತು ಭಾರತ ಸೇರಿದಂತೆ ಇತರ ಭಾಗಗಳಲ್ಲಿ ನೆಲೆಸಿದ್ದಾರೆ ಎಂದು ಬಿಸಿನೆಸ್ ಡೆವಲಪ್‌ಮೆಂಟ್ ಮ್ಯಾನೇಜರ್ ಭರತ್ ಸಿಂಹ ರೆಡ್ಡಿ ಪಿ. ಹೇಳಿದ್ದಾರೆ.
"ಮುಂದಿನ ಎರಡರಿಂದ ಮೂರು ವರ್ಷಗಳಲ್ಲಿ ನಮ್ಮ ಉಪಗ್ರಹ ಪೇಲೋಡ್‌ಗಳನ್ನು ಪ್ರದರ್ಶಿಸಲು ಮೂರ್ನಾಲ್ಕು ಕಾರ್ಯಾಚರಣೆಗಳು ನಡೆಯಲಿವೆ" ಎಂದು ಭರತ್ ಸಿಂಹ ರೆಡ್ಡಿ ಇತ್ತೀಚೆಗೆ ಹೈದರಾಬಾದ್‌ನಲ್ಲಿ ಹೇಳಿದ್ದರು. ಕಾಲೇಜು ದಿನಗಳಲ್ಲಿ ರಾಷ್ಟ್ರೀಯ ಬ್ರಾಂಡ್ ಅನ್ನು ನಿರ್ಮಿಸುವುದು ನನ್ನ ಮಹತ್ವಾಕಾಂಕ್ಷೆಯಾಗಿತ್ತು ಎಂದು ಅವರು ಹೇಳಿರುವುದು ಗಮನಾರ್ಹ. ಚೆನ್ನೈ ಗಿಂಡಿಯ ಪ್ರಖ್ಯಾತ ಎಂಜಿನಿಯರಿಂಗ್ ಕಾಲೇಜಿನ ಪದವೀಧರರಾದ ಇಂದೂರ್ತಿ ಹೈದರಾಬಾದ್‌ನಲ್ಲಿ ಐಸ್ ಕ್ರೀಮ್ ಪಾರ್ಲರ್ ಮಳಿಗೆಗಳ ಸರಪಳಿಯನ್ನು ಸ್ಥಾಪಿಸಿದ್ದರು. ಅದಾದ ನಂತರ ಬಾಹ್ಯಾಕಾಶ ಕ್ಷೇತ್ರಕ್ಕೆ ಅವರು ಕಾಲಿಟ್ಟಿದ್ದರು.
"ನಾವು ಆರಂಭದಲ್ಲಿ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO) ಗಾಗಿ ಮಾರಾಟ ಕಂಪನಿಯಾಗಿ ವಹಿವಾಟು ಪ್ರಾರಂಭಿಸಿದ್ದೇವೆ ಮತ್ತು ಗುಜರಾತ್‌ನ ಅಹಮದಾಬಾದ್‌ನಲ್ಲಿ ನಮ್ಮ ಕಾರ್ಖಾನೆಯನ್ನು ಸ್ಥಾಪಿಸಿದ್ದೇವೆ. ಡಿಆರ್ಡಿಒ ಮತ್ತು ಇತರ ಕಡೆಗಳಲ್ಲಿ ಹವಾಮಾನ ಕೇಂದ್ರಗಳನ್ನು ಸಹ ಸ್ಥಾಪಿಸಿದ್ದೇವೆ" ಎಂದು ಇಂದುರ್ತಿ ಹೇಳಿದರು. ವರ್ಷಕ್ಕೆ 50-200 ಕೆಜಿ ತೂಕದ ಸುಮಾರು 100 ಉಪಗ್ರಹಗಳನ್ನು ತಯಾರಿಸುವುದು ಕಂಪನಿಯ ಗುರಿಯಾಗಿದೆ.
ಇದನ್ನೂ ಓದಿ : Cryptocurrency in India: ಕಾಯ್ದೆ ಜಾರಿಯ ನಂತರವೇ ಕ್ರಿಪ್ಟೊಕರೆನ್ಸಿಯಲ್ಲಿ ಹೂಡಿಕೆ ಮಾಡಿ