ಹೈದರಾಬಾದ್ (ತೆಲಂಗಾಣ): ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು (ಎನ್‌ಎಚ್‌ಎಐ) ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ - ಹೈದರಾಬಾದ್ ಜೊತೆಗೆ (ಐಐಟಿ-ಎಚ್) ಪ್ರಮುಖ ಒಪ್ಪಂದಕ್ಕೆ ಸಹಿ ಹಾಕಿದೆ. ಹೀಗಾಗಿ ಐಐಟಿ ಹೈದರಾಬಾದ್‌ನಲ್ಲಿ ಸಾರಿಗೆ ಸಂಶೋಧನೆ ಮತ್ತು ನಾವೀನ್ಯತೆ ಹಬ್ ಸ್ಥಾಪಿಸಲಾಗುವುದು. ಇದರ ಹೊಸ ತಂತ್ರಜ್ಞಾನದ ಆಧಾರದ ಮೇಲೆ ರಸ್ತೆಗಳನ್ನು ಅಚ್ಚುಕಟ್ಟಾಗಿ ಮತ್ತು ದೀರ್ಘಕಾಲೀನವಾಗಿ ಅಭಿವೃದ್ಧಿಪಡಿಸಲಾಗುವುದು ಎಂದು ಸಂಸ್ಥೆ ಹೇಳಿದೆ.
ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ತಂತ್ರಜ್ಞಾನ ವಿಭಾಗದ ಜನರಲ್ ಮ್ಯಾನೇಜರ್ ಅಜಯ್ ಸಬರ್ವಾಲ್ ಮತ್ತು ಐಐಟಿ ಹೈದರಾಬಾದ್‌ನ ಸಂಶೋಧನೆ ಮತ್ತು ಅಭಿವೃದ್ಧಿಯ ಡೀನ್ ಕಿರಣ್ ಕುಚಿ ಒಪ್ಪಂದಕ್ಕೆ ಸಹಿ ಹಾಕಿದರು. ಐಐಟಿ ಹೈದರಾಬಾದ್ ಹತ್ತು ಬಗೆಯ ಯೋಜನೆಗಳ ಕುರಿತು ಸಂಶೋಧನೆ ನಡೆಸಲಿದೆ.
ಐಐಟಿ ಹೈದರಾಬಾದ್‌ನ ಸಂಶೋಧನೆಗಳಿಂದ ಸೇತುವೆಗಳು ಮತ್ತು ಪಾದಚಾರಿ ಮಾರ್ಗಗಳ ನಿರ್ಮಾಣದ ಗುಣಮಟ್ಟ ಹೆಚ್ಚುತ್ತದೆ ಹಾಗೂ ಅವುಗಳ ಜೀವಿತಾವಧಿ ಹೆಚ್ಚಾಗುತ್ತದೆ ಎಂದು ರಾಷ್ಟ್ರೀಯ ಹೆದ್ದಾರಿ ಏಜೆನ್ಸಿಯ ಪ್ರತಿನಿಧಿಗಳು ಭರವಸೆ ವ್ಯಕ್ತಪಡಿಸಿದರು. ಇಂತಹ ಒಪ್ಪಂದವಾಗಿರುವುದು ಐಐಟಿಯ ಇತಿಹಾಸದಲ್ಲಿಯೇ ಮೊದಲು ಎಂದು ನಿರ್ದೇಶಕ ಬಿ.ಎಸ್.ಮೂರ್ತಿ ತಿಳಿಸಿದ್ದಾರೆ. ಇತ್ತೀಚೆಗಷ್ಟೇ ಸ್ವಯಂಚಾಲಿತ ವಾಹನಗಳ ಪರೀಕ್ಷಾರ್ಥ ಪ್ರಯೋಗಕ್ಕೆ ಚಾಲನೆ ನೀಡಲಾಗಿದೆ ಎಂದರು. ಸಾರಿಗೆ ಕ್ಷೇತ್ರದಲ್ಲಿ ಇನ್ನಷ್ಟು ಹೊಸತನ ತರಲು ಈ ಒಪ್ಪಂದ ಉಪಯುಕ್ತವಾಗಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.
ಇದನ್ನೂ ಓದಿ: ನಿಮ್ಮ ಆರೋಗ್ಯ ನಿಮ್ಮ ಕೈಯಲ್ಲಿ; ಚಿಕ್ಕ ಬಜೆಟ್ನಲ್ಲಿ ಅತ್ಯುತ್ತಮ ಸ್ಮಾರ್ಟ್ ವಾಚ್ ಖರೀದಿಸಿ
ರಸ್ತೆ ತಂತ್ರಜ್ಞಾನದಲ್ಲಿ ಏನೆಲ್ಲಾ ಬಳಕೆ?: ಜಿಯೋಸಿಂಥೆಟಿಕ್ಸ್, ಸೇತುವೆಗಳು ಮತ್ತು ಕಾಲುದಾರಿಗಳಿಗೆ ಮರುಪಡೆಯಲಾದ ವಸ್ತುಗಳು ಹಾಗೂ ಗಾಜಿನ ಫೈಬರ್ ಬಲವರ್ಧಿತ ಪಾಲಿಮರ್ ನಂತಹ ವಸ್ತುಗಳೊಂದಿಗೆ ಹೊಸ ತಂತ್ರಜ್ಞಾನವನ್ನು ಬಳಸಲಾಗುವುದು ಮತ್ತು ಅಭಿವೃದ್ಧಿಪಡಿಸಲಾಗುವುದು. ಹಳೆಯ ಸೇತುವೆಗಳ ಜೀವಿತಾವಧಿಯನ್ನು ಹೆಚ್ಚಿಸಲು ರಿಟ್ರೊಫಿಟ್ಟಿಂಗ್ ನಂತಹ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಲಾಗುವುದು ಎಂದು ಸಾರಿಗೆ ಸಂಶೋಧನೆ ಮತ್ತು ಆವಿಷ್ಕಾರ ಕೇಂದ್ರದ ಅಧ್ಯಕ್ಷ ಶಿರೀಶ್ ಶಾರೀಡ್ ಹೇಳಿದರು.