ನವದೆಹಲಿ: ಇತ್ತೀಚಿನ ಐಒಎಸ್ 17.2.1 ಅಪ್ಡೇಟ್ ನಂತರ ಜಾಗತಿಕವಾಗಿ ಐಫೋನ್ಗಳಲ್ಲಿ ನೆಟ್ವರ್ಕ್ ಕನೆಕ್ಷನ್ ಸಮಸ್ಯೆ ಕಾಣಿಸಿಕೊಳ್ಳುತ್ತಿದೆ ಎಂದು ವರದಿಯಾಗಿದೆ. ಆ್ಯಪಲ್ ಇತ್ತೀಚೆಗೆ ಐಒಎಸ್ 17.2.1 ಅಪ್ಡೇಟ್ ಬಿಡುಗಡೆ ಮಾಡಿತ್ತು. ಇದರಲ್ಲಿ ಹೊಸ ವೈಶಿಷ್ಟ್ಯವೇನೂ ಇರಲಿಲ್ಲ, ಆದರೆ ಕೆಲ ಸಮಯದಿಂದ ಕಾಡುತ್ತಿದ್ದ ಬ್ಯಾಟರಿ ಡ್ರೈನ್ ಸಮಸ್ಯೆಯನ್ನು ಇದು ಪರಿಹರಿಸಿತ್ತು.
ಆ್ಯಪಲ್ನ ಸಪೋರ್ಟ್ ಕಮ್ಯುನಿಟಿ ಚರ್ಚೆಯ ವೆಬ್ಸೈಟ್ನಲ್ಲಿ ಐಫೋನ್ ಬಳಕೆದಾರರು ಐಒಎಸ್ 17.1.2 ಅನ್ನು ಇನ್ಸ್ಟಾಲ್ ಮಾಡಿದ ನಂತರ ತಮ್ಮ ಐಫೊನ್ನಲ್ಲಿ ಕಾಣಿಸಿಕೊಂಡಿರುವ ಸಮಸ್ಯೆಗಳ ಬರೆದಿದ್ದಾರೆ ಎಂದು ಫೋನ್ಅರೆನಾ ವರದಿ ಮಾಡಿದೆ.
"ಕಳೆದ ರಾತ್ರಿ ನನ್ನ ಐಫೋನ್ ನಲ್ಲಿ 17.2.1 ಅಪ್ಡೇಟ್ ಇನ್ಸ್ಟಾಲ್ ಮಾಡಿದ ನಂತರ ನನ್ನ ಫೋನ್ ನೆಟ್ವರ್ಕ್ಗೆ ಕನೆಕ್ಟ್ ಆಗುತ್ತಿಲ್ಲ. ರಿಸೆಟ್ ಮಾಡಿ ಪ್ರಯತ್ನಿಸಿದರೂ ನನ್ನ ಪೋನ್ ಕೆಲಸ ಮಾಡುತ್ತಿಲ್ಲ. ಇದು ತುಂಬಾ ನಿರಾಶಾದಾಯಕ. ಹಲವು ವರ್ಷಗಳಿಂದ ಆ್ಯಪಲ್ ಮೇಲೆ ಭರವಸೆ ಇತ್ತು, ಆದರೆ ಈಗ ಅದು ಕಡಿಮೆಯಾಗುತ್ತಿದೆ" ಎಂದು ಬಳಕೆದಾರರೊಬ್ಬರು ಬರೆದಿದ್ದಾರೆ.
"ಈ ನೆಟ್ವರ್ಕ್ ಸಮಸ್ಯೆಯನ್ನು ಹೇಗೆ ಪರಿಹರಿಸುವುದು ಎಂಬುದರ ಬಗ್ಗೆ ಯಾವುದೇ ಮಾಹಿತಿ ಇದ್ದರೆ ತಿಳಿಸಿ. ಕಳೆದ ರಾತ್ರಿ ಹೊಸ ಅಪ್ಡೇಟ್ ಇನ್ಸ್ಟಾಲ್ ಮಾಡಿಕೊಂಡ ನಂತರ ಯಾವುದೇ ನೆಟ್ವರ್ಕ್ ಕನೆಕ್ಟ್ ಆಗುತ್ತಿಲ್ಲ" ಎಂದು ಮತ್ತೊಬ್ಬ ಬಳಕೆದಾರರು ಹೇಳಿದ್ದಾರೆ.
ವರದಿಯ ಪ್ರಕಾರ ಆ್ಯಪಲ್ ಶೀಘ್ರದಲ್ಲೇ 17.2.2 ಅಥವಾ 17.3 ಅಪ್ಡೇಟ್ ಬಿಡುಗಡೆ ಮಾಡುವ ಮೂಲಕ ಸಮಸ್ಯೆಯನ್ನು ಪರಿಹರಿಸುವ ನಿರೀಕ್ಷೆಯಿದೆ. ಪ್ರಸ್ತುತ ಸೆಲ್ಯುಲರ್ ಸಂಪರ್ಕ ಸಮಸ್ಯೆ ಎದುರಿಸುತ್ತಿರುವ ಬಳಕೆದಾರರು ಐಒಎಸ್ 17.3 ಪಬ್ಲಿಕ್ ಬೀಟಾ ಪ್ರೋಗ್ರಾಂನಲ್ಲಿ ನೋಂದಾಯಿಸಿಕೊಳ್ಳುವ ಮೂಲಕ ತಾತ್ಕಾಲಿಕ ಪರಿಹಾರ ಕಂಡುಕೊಳ್ಳಬಹುದು.
ಐಒಎಸ್ಗೂ ಬಂತು ಮೈಕ್ರೋಸಾಫ್ಟ್ ಕೋಪೈಲಟ್: ಮೈಕ್ರೋಸಾಫ್ಟ್ ಕೆಲ ದಿನಗಳ ಹಿಂದೆ ಮೈಕ್ರೋಸಾಫ್ಟ್ ಕೋಪೈಲಟ್ಗಾಗಿ ಪ್ರತ್ಯೇಕ ಆಂಡ್ರಾಯ್ಡ್ ಅಪ್ಲಿಕೇಶನ್ ಅನ್ನು ಪ್ರಾರಂಭಿಸಿತ್ತು. ಈಗ ಆ್ಯಪಲ್ ಸ್ಟೋರ್ನಲ್ಲಿ ಐಒಎಸ್ ಮತ್ತು ಐಪ್ಯಾಡ್ ಆವೃತ್ತಿಗಳನ್ನು ಕೂಡ ಮೈಕ್ರೋಸಾಫ್ಟ್ ಬಿಡುಗಡೆ ಮಾಡಿದೆ. ಇದರ ಮೂಲಕ ಬಳಕೆದಾರರು ತ್ವರಿತವಾಗಿ ಕೋಪೈಲಟ್ ಬಳಸಲು ಅನುಕೂಲವಾಗಲಿದೆ.
ಇದರಲ್ಲಿ ಬಳಕೆದಾರರು ತಮ್ಮ ಪ್ರಶ್ನೆಗಳನ್ನು ಟೈಪ್ ಮಾಡಬಹುದು ಮತ್ತು ಇತ್ತೀಚಿನ ದೊಡ್ಡ ಭಾಷಾ ಮಾದರಿಯಾದ ಓಪನ್ಎಐನ ಜಿಪಿಟಿ -4 ನಿಂದ ಉತ್ಪತ್ತಿಯಾದ ಉತ್ತರಗಳನ್ನು ಪಡೆಯಬಹುದು. ಹೆಚ್ಚುವರಿಯಾಗಿ, ಐಒಎಸ್ನಲ್ಲಿ ಕೋಪೈಲಟ್ ಓಪನ್ಎಐನ ಡಾಲ್-ಇ3 ಮೂಲಕ ಟೆಕ್ಸ್ಟ್-ಟು-ಇಮೇಜ್ ಎಐ ವ್ಯವಸ್ಥೆಯ ಮೂಲಕ ಪಠ್ಯವನ್ನು ಚಿತ್ರಗಳಾಗಿ ಪರಿವರ್ತಿಸುವ ಸಾಮರ್ಥ್ಯವನ್ನು ಹೊಂದಿದೆ.
ಇದನ್ನೂ ಓದಿ : 2023ರಲ್ಲಿ ಗೇಮಿಂಗ್ ಕಂಪನಿಗಳಿಂದ 9 ಸಾವಿರ ಉದ್ಯೋಗಿಗಳ ವಜಾ