ನವದೆಹಲಿ: ಸದ್ಯ ಕೃತಕ ಬುದ್ಧಿಮತ್ತೆ ಜಗತ್ತನ್ನು ಆಳಲು ಹೊರಟಿದೆ. ತಂತ್ರಜ್ಞಾನದಿಂದ ಪ್ರತಿಯೊಂದು ಕ್ಷೇತ್ರದಲ್ಲೂ ಎಐ ಛಾಪು ಮೂಡಿಸುತ್ತಿರುವುದು ಸುಳ್ಳಲ್ಲ. ಇದು ಎಐ ಯುಗವಾಗಿ ಮಾರ್ಪಡುತ್ತಿದೆ. ಇದನ್ನು ಅರಿತಿರುವ ಟ್ವಿಟರ್ ಸಿಇಒ ಎಲೋನ್ ಮಸ್ಕ್ ಹೊಸ ಕಂಪನಿಯೊಂದನ್ನು ಹುಟ್ಟು ಹಾಕಿದ್ದಾರೆ. X.AI ಎಂಬ ಕಂಪನಿ ಮೂಲಕ ಈ ಕೃತಕ ಬುದ್ದಿಮತ್ತೆ (artificial intelligence- AI) ಉತ್ತೇಜನಕ್ಕೆ ಮುಂದಾಗಿದ್ದಾರೆ. ಟೆಕ್ಸಾಸ್ನ ನೆವಾಡಾದಲ್ಲಿ ಈ ಸಂಸ್ಥೆ ದಾಖಲಾಗಿದೆ. ಮಸ್ಕ್ ಕುಟುಂಬ ಕಚೇರಿಯ ನಿರ್ದೇಶಕರಾಗಿರುವ ಜೆರೆಡ್ ಬಿರ್ಚಲ್ ಈ ಸಂಸ್ಥೆಯ ಕಾರ್ಯದರ್ಶಿಯಾಗಿ ನೇಮಕಗೊಂಡಿದ್ದಾರೆ ಎಂದು ತಿಳಿದು ಬಂದಿದೆ.
ಕಂಪನಿ ಸ್ಥಾಪನೆ ಉದ್ದೇಶ: X.AI ಸಂಸ್ಥೆಯ ಸದ್ಯ 100 ಮಿಲಿಯನ್ ಶೇರ್ಗಳ ಮಾರಾಟ ಅಧಿಕೃತಗೊಳಿಸಿದೆ ಎಂದು ವಾಲ್ ಸ್ಟ್ರೀಟ್ ಜರ್ನಲ್ ತಿಳಿಸಿದೆ. ಮೈಕ್ರೋಸಾಫ್ಟ್ನ ಓಪನ್ಎಐ ಚಾಟ್ಜಿಪಿಟಿ ಯಶಸ್ವಿಯಾಗಿದ್ದು, ಅದನ್ನು ಕೊಳ್ಳುವ ಉದ್ದೇಶದಿಂದಾಗಿ ಮಸ್ಕ್ ಈ ಎಐ ಸಂಸ್ಥೆ ಹುಟ್ಟು ಹಾಕಿದ್ದಾನೆ ಎನ್ನಲಾಗಿದೆ. ಇನ್ನು ವಿಚಿತ್ರ ಎಂದರೆ, ಈ ಹಿಂದೆ ಇದೇ ಓಪನ್ಎಐಗೆ ಆರಂಭಿಕವಾಗಿ 100 ಮಿಲಿಯನ್ ಡಾಲರ್ ಹೂಡಿದ್ದು, ಇದೆ ಎಲೋನ್ ಮಾಸ್ಕ್. ಆದರೆ, ಬಳಿಕ ಅವರು ಈ ಸಂಸ್ಥೆಯಿಂದ ಹೊರ ಬಂದರು.
ಇತ್ತೀಚಿನ ಕೆಲವು ತಿಂಗಳಲ್ಲಿ ಚಾಟ್ಜಿಪಿಟಿ ಮತ್ತು ಜಿಪಿಟಿ-4 ಜಗತ್ತಿನಾದ್ಯಂತ ಹಲವರ ಕೋಪಕ್ಕೆ ಗುರಿಯಾಗಿದೆ. ಈ ಸಂಬಂಧ ಅನೇಕ ಉದ್ಯಮಿಗಳು, ಮಸ್ಕ್, ಆ್ಯಪಲ್ ಸಹ ಸಂಸ್ಥಾಪಕ ಸ್ಟೀವ್ ವೊಜ್ನಿಕ್ ಸೇರಿದಂತೆ ಹಲವು ಎಐ ಸಂಶೋಧಕರು ಪತ್ರವನ್ನು ಬರೆದಿದ್ದರು. ಈ ಎಐ ವ್ಯವಸ್ಥೆಯನ್ನು 6 ತಿಂಗಳ ಕಾಲ ವಿರಾಮಗೊಳಿಸುವಂತೆ ಅವರು ಪತ್ರದಲ್ಲಿ ತಿಳಿಸಿದ್ದರು.
ಓಪನ್ಎಐನಿಂದ ಹೊರ ನಡೆದಿದ್ದ ಮಸ್ಕ್: 2018ರಲ್ಲೇ ಮಾಸ್ಕ್ ಈ ಓಪನ್ ಎಐ ಅನ್ನು ವಶ ಪಡೆಯಲು ಮುಂದಾಗಿದ್ದರು. ಆದರೆ, ಸ್ಯಾಮ್ ಅಲ್ಟಮಾನ್ ಮತ್ತು ಓಪನ್ಎಐನ ಇನ್ನಿತರ ಸಂಸ್ಥಾಪಕರು ಈ ಮನವಿಯನ್ನು ತಿರಸ್ಕರಿಸಿದ್ದರು. ಇದೇ ಹಿನ್ನೆಲೆ ಆರಂಭಿಕ ಹೂಡಿಕೆ ಮಾಡಿದ್ದ ಮಸ್ಕ್ ಅವರು ಸಂಸ್ಥೆಯಿಂದ ಹೊರ ನಡೆದರು ಎಂದು ಸೆಮಫೋರ್ ವರದಿ ಮಾಡಿದೆ. ಮಸ್ಕ್ 1 ಬಿಲಿಯನ್ ಡಾಲರ್ ಪೂರೈಸುವ ಭರವಸೆ ತಿರಸ್ಕರಿಸಿದರು. ಆದರೆ, ಅವರು 100 ಮಿಲಿಯನ್ ಕೊಡುಗೆಯನ್ನು ನೀಡಿ, ಹೊರ ನಡೆದರು ಎಂದು ವರದಿ ತಿಳಿಸಿದೆ.
ಲಾಭದ ಕಂಪನಿ ಓಪನ್ಎಐ: 2019ರಲ್ಲಿ ಓಪನ್ಎಐ ತನ್ನ ಕಂಪ್ಯೂಟ್ ಪವರ್ ಪಾವತಿಗೆ ಅದು ಲಾಭವನ್ನು ಸಂಗ್ರಹಿಸುವುದಾಗಿ ತಿಳಿಸಿತು. ಇದಾದ ಆರು ತಿಂಗಳೊಳಗೆ ಮೈಕ್ರೋಸಾಫ್ಟ್ ಓಪನ್ಎಐಗೆ 1 ಬಿಲಿಯನ್ ಪಾವತಿಗೆ ಮುಂದಾಯಿತು. ಇದಾದ ಬಳಿಕ ಓಪನ್ಎಐ ತಂತ್ರಜ್ಞಾನ ಯುಗದಲ್ಲಿ ಹೊಸ ಇತಿಹಾಸವನ್ನೇ ಸೃಸ್ಟಿಸಿತು. ಓಪನ್ಎಐ ಕಡೆಯ ಮೌಲ್ಯಮಾಪನ 20 ಬಿಲಿಯನ್ ಡಾಲರ್ ಆಗಿದೆ. ಜಗತ್ತಿನಲ್ಲಿರುವ ಎಐ ಸಂಸ್ಥೆಗಳಲ್ಲೇ ಈ ಓಪನ್ಎಐ ಹೆಚ್ಚು ಮೌಲ್ಯ ಹೊಂದಿದೆ. ಇನ್ನು ಈ ಓಪನ್ಎಐ ಕುರಿತು ಹಲವು ಬಾರಿ ಮಸ್ಕ್ ಟೀಕೆ ಕೂಡಾ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಚಂದಾದಾರಿಕೆ ಆಧಾರಿತ ಹಣಗಳಿಸುವ ಯೋಜನೆ ಅನಾವರಣ: ಟ್ವಿಟರ್ ಸಿಇಒ