ಲಾಸ್ ಎಂಜೆಲೀಸ್: ಅಕ್ಟೋಬರ್ 2025 ರ ವೇಳೆಗೆ ವಿಂಡೋಸ್ 10 ಆಪರೇಟಿಂಗ್ ಸಿಸ್ಟಮ್ಗೆ ಮೈಕ್ರೋಸಾಫ್ಟ್ ತನ್ನ ಬೆಂಬಲವನ್ನು ಕೊನೆಗೊಳಿಸಲಿದೆ. ಆದರೆ, ಮೈಕ್ರೊಸಾಫ್ಟ್ ಕಾರ್ಪೊರೇಷನ್ನ ಈ ನಿರ್ಧಾರದಿಂದ ಗಮನಾರ್ಹ ಪ್ರಮಾಣದ ಎಲೆಕ್ಟ್ರಾನಿಕ್ ತ್ಯಾಜ್ಯ ಹೆಚ್ಚಳಕ್ಕೆ ಕಾರಣವಾಗಬಹುದು ಎಂದು ಕ್ಯಾನಲಿಸ್ ರಿಸರ್ಚ್ ತಿಳಿಸಿದೆ. ವಿಂಡೋಸ್ 10 ಔಟ್ಡೇಟೆಡ್ ಆಗುವುದರಿಂದ ಸರಿಸುಮಾರು 240 ಮಿಲಿಯನ್ ಪರ್ಸನಲ್ ಕಂಪ್ಯೂಟರ್ ಗಳು ನಿರುಪಯುಕ್ತವಾಗಬಹುದು ಮತ್ತು ಈ ತ್ಯಾಜ್ಯವು ಭೂಮಿಯನ್ನು ಸೇರಬಹುದು. ಇನ್ನು ಈ 240 ಮಿಲಿಯನ್ ಪಿಸಿಗಳಿಂದ ಅಂದಾಜು ಸುಮಾರು 480 ಮಿಲಿಯನ್ ಕಿಲೋಗ್ರಾಂಗಳಷ್ಟು ಎಲೆಕ್ಟ್ರಾನಿಕ್ ತ್ಯಾಜ್ಯ ಸೃಷ್ಟಿಯಾಗಬಹುದು. ಈ ತ್ಯಾಜ್ಯ 3,20,000 ಕಾರುಗಳ ತೂಕಕ್ಕೆ ಸಮನಾಗಿರುತ್ತದೆ.
ಮೈಕ್ರೊಸಾಫ್ಟ್ ಸಪೋರ್ಟ್ ನಿಲ್ಲಿಸಿದ ನಂತರವೂ ಈ ಪಿಸಿಗಳು ಇನ್ನೂ ಕೆಲ ವರ್ಷಗಳವರೆಗೆ ಕಾರ್ಯಾಚರಣೆಯಲ್ಲಿರಬಹುದು ಎಂದು ನಿರೀಕ್ಷಿಸಲಾಗಿದೆ. ಆದರೂ ಸಾಫ್ಟ್ವೇರ್ ಅಪ್ಡೇಟ್ ಸಪೋರ್ಟ್ ಇಲ್ಲದ ಪಿಸಿಗಳನ್ನು ಬಳಸುವವರು ಕಡಿಮೆ. ಮೈಕ್ರೋಸಾಫ್ಟ್ ಅಕ್ಟೋಬರ್ 2028 ರವರೆಗೆ ವಿಂಡೋಸ್ 10 ಸಾಧನಗಳಿಗೆ ಸೆಕ್ಯೂರಿಟಿ ಅಪ್ಡೇಟ್ ನೀಡುವ ಯೋಜನೆಯನ್ನು ಹೊಂದಿದೆ. ಆದರೆ ಇದಕ್ಕಾಗಿ ಗ್ರಾಹಕರು ಹೆಚ್ಚುವರಿ ಹಣ ಪಾವತಿ ಮಾಡಬೇಕಾಗುತ್ತದೆ. ಈ ಮೊತ್ತ ಎಷ್ಟೆಂಬುದನ್ನು ಮೈಕ್ರೊಸಾಫ್ಟ್ ಇನ್ನೂ ಬಹಿರಂಗಪಡಿಸಿಲ್ಲ. ಪಾವತಿಸಿ ಸಪೋರ್ಟ್ ಪಡೆಯುವುದು ತೀರಾ ದುಬಾರಿ ಎನಿಸಿದರೆ ಅದರ ಬದಲು ಗ್ರಾಹಕರು ಹೊಸ ಪಿಸಿ ಕೊಳ್ಳಲು ಮುಂದಾಗಬಹುದು. ಇದರಿಂದ ಹಳೆಯ ಪಿಸಿಗಳು ತ್ಯಾಜ್ಯ ಸೇರಬಹುದು.
ಏತನ್ಮಧ್ಯೆ ಮರುಬಳಕೆ ತಂತ್ರಜ್ಞಾನದಲ್ಲಿನ ಪ್ರಗತಿಯು ಪರಿಸರದ ಮೇಲಿನ ಪರಿಣಾಮವನ್ನು ಸ್ವಲ್ಪ ಮಟ್ಟಿಗೆ ತಗ್ಗಿಸಲು ಸಹಾಯಕವಾಗಬಹುದು ಎಂದು ಆಶಾಭಾವನೆ ವ್ಯಕ್ತಪಡಿಸಲಾಗಿದೆ. ಪರ್ಸನಲ್ ಕಂಪ್ಯೂಟರ್ಗಳು ಮತ್ತು ಸರ್ವರ್ಗಳಲ್ಲಿನ ಹಾರ್ಡ್ ಡ್ರೈವ್ಗಳನ್ನು ರಿಸೈಕಲ್ ಮಾಡಿ ಅದರಿಂದ ಸಿಗುವ ವಸ್ತುವನ್ನು ಎಲೆಕ್ಟ್ರಿಕ್ ಮೋಟರ್ಗಳು ಮತ್ತು ಪವನಶಕ್ತಿ ಟರ್ಬೈನ್ಗಳಂಥ ಸಲಕರಣೆಗಳ ತಯಾರಿಕೆಯಲ್ಲಿ ಬಳಸಬಹುದಾಗಿದೆ.
ಮೈಕ್ರೋಸಾಫ್ಟ್ ಇತ್ತೀಚೆಗೆ ತನ್ನ ಅಧಿಕೃತ ವೆಬ್ಸೈಟ್ನಲ್ಲಿ ವಿಂಡೋಸ್ 10 ಗೆ ಸಪೋರ್ಟ್ ನೀಡುವುದನ್ನು ಕೊನೆಗೊಳಿಸುವುದಾಗಿ ಘೋಷಿಸಿದೆ. ಈ ಕ್ರಮವು ವಿಂಡೋಸ್ 11 ನಂಥ ವಿಂಡೋಸ್ ನ ಹೊಸ ಆವೃತ್ತಿಗಳಿಗೆ ಪರಿವರ್ತನೆಗೊಳ್ಳಲು ಬಳಕೆದಾರರನ್ನು ಪ್ರೋತ್ಸಾಹಿಸುವ ಗುರಿಯನ್ನು ಹೊಂದಿದೆ. ಸ್ಟ್ಯಾಟ್ ಕೌಂಟರ್ನ ಮಾಹಿತಿಯ ಪ್ರಕಾರ, ವಿಂಡೋಸ್ 10 ಪ್ರಸ್ತುತ ಆಪರೇಟಿಂಗ್ ಸಿಸ್ಟಮ್ಗಳ ಪೈಕಿ ಒಟ್ಟಾರೆ ಶೇಕಡಾ 71.64 ರಷ್ಟು ಮಾರುಕಟ್ಟೆ ಪಾಲನ್ನು ಹೊಂದಿದೆ. ಈ ಮಾರುಕಟ್ಟೆ ಪಾಲು ಕಳೆದ ಒಂದು ವರ್ಷದಲ್ಲಿ ಬದಲಾಗದೆ ಉಳಿದಿದೆ.
ಇದನ್ನೂ ಓದಿ : 8GB ರ್ಯಾಮ್ನ ಹೊಸ ಲಾವಾ 5G ಸ್ಮಾರ್ಟ್ಫೋನ್ ಬಿಡುಗಡೆ: ಬೆಲೆ ರೂ.11,999 ರಿಂದ ಆರಂಭ