ನವದೆಹಲಿ: ಇನ್ನೂ ನಾಲ್ಕು ಭಾರತೀಯ ಭಾಷೆಗಳನ್ನು ಮೈಕ್ರೊಸಾಫ್ಟ್ ತನ್ನ ಟ್ರಾನ್ಸ್ಲೇಟರ್ಗೆ ಸೇರಿಸಿದೆ. ಭೋಜಪುರಿ, ಬೋಡೋ, ಡೋಗ್ರಿ ಮತ್ತು ಕಾಶ್ಮೀರಿ ಈ ಹೊಸ ನಾಲ್ಕು ಹೊಸ ಭಾಷೆಗಳನ್ನು ಅನುವಾದಕಕ್ಕೆ ಸೇರಿಸುವುದಾಗಿ ಮೈಕ್ರೊಸಾಫ್ಟ್ ಇಂಡಿಯಾ ಘೋಷಿಸಿದೆ. ಮೈಕ್ರೋಸಾಫ್ಟ್ ಟ್ರಾನ್ಸ್ಲೇಟರ್ ಈಗ ಅಸ್ಸಾಮಿ, ಬಂಗಾಳಿ, ಗುಜರಾತಿ, ಹಿಂದಿ, ಕನ್ನಡ, ಕೊಂಕಣಿ, ಮೈಥಿಲಿ, ಮಲಯಾಳಂ, ಮರಾಠಿ, ನೇಪಾಳಿ, ಒಡಿಯಾ, ಪಂಜಾಬಿ, ಸಿಂಧಿ, ತಮಿಳು, ತೆಲುಗು, ಉರ್ದು, ಭೋಜಪುರಿ, ಬೋಡೋ, ಡೋಗ್ರಿ ಮತ್ತು ಕಾಶ್ಮೀರಿ ಹೀಗೆ 20 ಭಾರತೀಯ ಭಾಷೆಗಳನ್ನು ಬೆಂಬಲಿಸುತ್ತಿದೆ.
ಅಲ್ಲಿಗೆ ಮೈಕ್ರೊಸಾಫ್ಟ್ ತನ್ನ ಟ್ರಾನ್ಸ್ಲೇಟರ್ನಲ್ಲಿ 22 ಭಾರತೀಯ ಭಾಷೆಗಳನ್ನು ಅಳವಡಿಸುವ ಗುರಿಗೆ ಹತ್ತಿರವಾಗಿದೆ. ಈಗ ದೇಶದ ಜನಸಂಖ್ಯೆಯ ಸುಮಾರು 95 ಪ್ರತಿಶತದಷ್ಟು ಜನರು ಮಾತನಾಡುವ ಭಾಷೆಗಳನ್ನು ಟ್ರಾನ್ಸ್ಲೇಟರ್ ಒಳಗೊಂಡಿದೆ ಎಂದು ಕಂಪನಿ ತಿಳಿಸಿದೆ.
"ದೇಶದ ಬೆಳವಣಿಗೆಯನ್ನು ಹೆಚ್ಚಿಸಲು ಮತ್ತು ತಂತ್ರಜ್ಞಾನವನ್ನು ಹೆಚ್ಚು ಅಂತರ್ಗತಗೊಳಿಸಲು ಅತ್ಯಾಧುನಿಕ ಎಐ ತಂತ್ರಜ್ಞಾನವನ್ನು ಬಳಸಿಕೊಳ್ಳುವ ಮೂಲಕ ಭಾರತದ ವೈವಿಧ್ಯಮಯ ಭಾಷೆಗಳು ಮತ್ತು ಸಂಸ್ಕೃತಿಯನ್ನು ಬೆಂಬಲಿಸಲು ನಾವು ಬದ್ಧರಾಗಿದ್ದೇವೆ" ಎಂದು ಮೈಕ್ರೋಸಾಫ್ಟ್ ಇಂಡಿಯಾದ ಇಂಡಿಯಾ ಡೆವಲಪ್ಮೆಂಟ್ ಸೆಂಟರ್ನ ವ್ಯವಸ್ಥಾಪಕ ನಿರ್ದೇಶಕ ರಾಜೀವ್ ಕುಮಾರ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಟ್ರಾನ್ಸ್ಲೇಟರ್ ವೈಶಿಷ್ಟ್ಯವನ್ನು ಮೈಕ್ರೋಸಾಫ್ಟ್ ಟ್ರಾನ್ಸ್ಲೇಟರ್ ಅಪ್ಲಿಕೇಶನ್, ಎಡ್ಜ್ ಬ್ರೌಸರ್, ಆಫೀಸ್ 365, ಬಿಂಗ್ ಟ್ರಾನ್ಸ್ಲೇಟರ್ ಮತ್ತು ಅಜುರೆ ಎಐ ಟ್ರಾನ್ಸ್ಲೇಟರ್ ಮೂಲಕ ಬಳಸಬಹುದು. ಜಿಯೋ ಹ್ಯಾಪ್ಟಿಕ್ ಮತ್ತು ಕೂನಂತಹ ಕಂಪನಿಗಳು ಈಗಾಗಲೇ ಮೈಕ್ರೊಸಾಫ್ಟ್ ಟ್ರಾನ್ಸ್ಲೇಟರ್ ಅನ್ನು ಬಳಸುತ್ತಿವೆ.
ಮೈಕ್ರೊಸಾಫ್ಟ್ ಟ್ರಾನ್ಸ್ಲೇಟರ್ ಇದೊಂದು ಪಠ್ಯ, ಧ್ವನಿ, ಸಂಭಾಷಣೆಗಳು, ಕ್ಯಾಮೆರಾ ಫೋಟೋಗಳು ಮತ್ತು ಸ್ಕ್ರೀನ್ ಶಾಟ್ ಗಳನ್ನು ಭಾಷಾಂತರಿಸುವ ಅಪ್ಲಿಕೇಶನ್ ಆಗಿದೆ. ಸದ್ಯ ಇದು 100 ಕ್ಕೂ ಹೆಚ್ಚು ಭಾಷೆಗಳನ್ನು ಬೆಂಬಲಿಸುತ್ತಿದ್ದು, ಬಳಸಲು ಉಚಿತವಾಗಿದೆ. ಆಫ್ಲೈನ್ ಮೂಲಕವೂ ಇದನ್ನು ಬಳಸಬಹುದು. ಗೂಗಲ್ ಪ್ಲೇಸ್ಟೋರ್ನಲ್ಲಿ ಮೈಕ್ರೊಸಾಫ್ಟ್ ಟ್ರಾನ್ಸ್ಲೇಟರ್ ಆ್ಯಪ್ ಅನ್ನು ಈಗಾಗಲೇ 50 ಮಿಲಿಯನ್ಗೂ ಅಧಿಕ ಬಾರಿ ಡೌನ್ಲೋಡ್ ಮಾಡಲಾಗಿದೆ.
ಗ್ರಾಹಕರು ಹೇಳುವಂತೆ ಮೈಕ್ರೊಸಾಫ್ಟ್ ಟ್ರಾನ್ಸ್ಲೇಟರ್ನ ಕಾರ್ಯಕ್ಷಮತೆ ಉತ್ತಮವಾಗಿದೆ. ಇದು ಇಂಟರ್ನೆಟ್ನಲ್ಲಿ ಲಭ್ಯವಿರುವ ಅತ್ಯಂತ ಅಧಿಕೃತ ಅನುವಾದ ವೇದಿಕೆಗಳಲ್ಲಿ ಒಂದಾಗಿದೆ ಮತ್ತು ಇದು ಉಚಿತವಾಗಿದೆ. ಸರಳ ಹಾಗೂ ಸುಲಭವಾಗಿ ಬಳಸಬಹುದಾದ ಇಂಟರ್ಫೇಸ್ ಹೊಂದಿರುವುದು ಇದರ ಮತ್ತೊಂದು ವೈಶಿಷ್ಟ್ಯವಾಗಿದೆ.
ಇದನ್ನೂ ಓದಿ : iPhone 15 ಬಿಸಿಯಾಗುವಿಕೆ ತಡೆಗೆ iOS 17 ಅಪ್ಡೇಟ್ ಬಿಡುಗಡೆ ಮಾಡಿದ ಆ್ಯಪಲ್