ಸ್ಯಾನ್ ಫ್ರಾನ್ಸಿಸ್ಕೋ: ಆತ್ಮಹತ್ಯೆಗೆ ಪ್ರಚೋದನೆ, ಅನಾರೋಗ್ಯಕರ ತಿನಿಸು ಮತ್ತು ಮಾನಸಿಕ ಸ್ವಾಸ್ಥ್ಯದ ಮೇಲೆ ಋಣಾತ್ಮಕ ಪರಿಣಾಮ ಬೀರುವ ಪೋಸ್ಟ್ಗಳು ಇನ್ನು ಮುಂದೆ ಇನ್ಸ್ಟಾಗ್ರಾಮ್ ಮತ್ತು ಫೇಸ್ಬುಕ್ ಪುಟಗಳಲ್ಲಿ ಕಾಣ ಸಿಗುವುದಿಲ್ಲ. ಹದಿಹರೆಯದವರ ಖಾತೆಗಳಲ್ಲಿ ಇಂತಹ ಪೋಸ್ಟ್ಗಳಿಗೆ ನಿರ್ಬಂಧ ಬೀಳಲಿದೆ.
ಹೌದು, ಇನ್ಸ್ಟಾಗ್ರಾಮ್ ಮತ್ತು ಫೇಸ್ಬುಕ್ ಸಾಮಾಜಿಕ ಜಾಲತಾಣಗಳ ಮಾತೃಸಂಸ್ಥೆಯಾದ ಮೆಟಾ ತನ್ನ ಬಳಕೆದಾರರ ರಕ್ಷಣೆ ಮತ್ತು ಸಾಮಾಜಿಕ ಸ್ವಾಸ್ಥ್ಯ ಕಾಪಾಡುವ ಮಹತ್ವದ ನಿರ್ಧಾರಕ್ಕೆ ಬಂದಿದೆ. ಹದಿಹರೆಯದವರ ಖಾತೆಗಳಿಂದ ಸೂಕ್ತವಲ್ಲದ ವಿಷಯವನ್ನು ಮರೆಮಾಡಲು ಪ್ರಾರಂಭಿಸುವುದಾಗಿ ಮೆಟಾ ಮಂಗಳವಾರ ಹೇಳಿದೆ.
ವಯಸ್ಸಿಗೆ ಸೂಕ್ತವಲ್ಲದ ಪೋಸ್ಟ್ಗಳನ್ನು ಖಾತೆದಾರರಿಗೆ ಸಿಗದಂತೆ ನಿರ್ಬಂಧಿಸಲಾಗುವುದು. ಅವರು ಹುಡುಕಿದರೂ ಫೀಡ್ಗಳಲ್ಲಿ ತೋರಿಸುವುದಿಲ್ಲ. ಅಂತಹ ಪೋಸ್ಟ್ ಹಂಚಿಕೊಂಡರೂ ಅದು ಪ್ರಸರಣವಾಗದಂತೆ ಸೆಟ್ಟಿಂಗ್ನಲ್ಲಿ ಮಾರ್ಪಾಡು ಮಾಡಲಾಗುವುದು ಎಂದು ತಿಳಿಸಿದೆ.
ನಮ್ಮ ಅಪ್ಲಿಕೇಶನ್‌ಗಳಲ್ಲಿ ಹದಿಹರೆಯದವರು ಸುರಕ್ಷಿತ, ವಯಸ್ಸಿಗೆ ಸೂಕ್ತವಾದ ಮಾಹಿತಿಯನ್ನು ಮಾತ್ರ ಹೊಂದಬೇಕೆಂದು ನಾವು ಬಯಸುತ್ತೇವೆ. ಬಳಕೆದಾರರು Instagram ಅಥವಾ Facebook ಗೆ ಸೈನ್ ಅಪ್ ಆದಾಗ ವಯಸ್ಸಿನ ಬಗ್ಗೆ ಸೂಕ್ತ ಮಾಹಿತಿ ನೀಡಿದಲ್ಲಿ, ಅವರ ಖಾತೆಗಳನ್ನು ಅತ್ಯಂತ ನಿರ್ಬಂಧಿತ ಸೆಟ್ಟಿಂಗ್‌ಗಳಲ್ಲಿ ಇರಿಸಲಾಗುತ್ತದೆ. ಹಾನಿಕಾರಕ ಮಾಹಿತಿಯಿಂದ ಅವರನ್ನು ದೂರ ಇಡಲಾಗುವುದು ಎಂದು ಮೆಟಾ ಹೇಳಿದೆ.
ಅಮೆರಿಕದಲ್ಲಿ ಹೆಚ್ಚಿದ ದೂರುಗಳು: ಅಮೆರಿಕದಲ್ಲಿ ಇನ್ಸ್ಟಾಗ್ರಾಮ್ ಮತ್ತು ಫೇಸ್ಬುಕ್ನಲ್ಲಿ ಹಂಚಿಕೊಳ್ಳುವ ಪೋಸ್ಟ್ಗಳ ಬಗ್ಗೆ ವ್ಯಾಪಕ ಆಕ್ಷೇಪ ವ್ಯಕ್ತವಾಗಿದೆ. ಇದು ಯುವಕರ ಮೇಲೆ ಋಣಾತ್ಮಕ ಪರಿಣಾಮ ಬೀರುತ್ತಿದೆ ಎಂದು ದೂರುಗಳು ಬಂದಿವೆ. ಇದನ್ನು ಪರಿಗಣಿಸಿ ಎಲ್ಲ ಬಳಕೆದಾರರಿಗೂ ಸುರಕ್ಷಿತ ಆಯ್ಕೆಗಾಗಿ, ಯುವಕರ ಮಾನಸಿಕ ಆರೋಗ್ಯ ಕಾಪಾಡಲು ಕೆಲ ನಿರ್ಬಂಧಗಳನ್ನು ವಿಧಿಸಲಾಗುವುದು ಎಂದು ಮಾಹಿತಿ ನೀಡಿದೆ.
ಯಾರೋ ಮಾಡಿದ ಒಂದು ಹಾನಿಕಾರಕ ಪೋಸ್ಟ್ ಎಲ್ಲರನ್ನೂ ತಲುಪುವುದು ಸೂಕ್ತವಲ್ಲ. ಯುವಜನರಿಗೆ ಅದು ಸೂಕ್ತವಾಗಿರಲಿಕ್ಕಿಲ್ಲ. ಹೀಗಾಗಿ ನಾವು ಇನ್ಸ್ಟಾಗ್ರಾಮ್ ಮತ್ತು ಫೇಸ್ಬುಕ್ನಲ್ಲಿ ವಯಸ್ಸಿಗನುಗುಣವಾದ ವಿಷಯಗಳ ಪೋಸ್ಟ್ಗಳು ಬರುವಂತೆ ನೋಡಿಕೊಳ್ಳುವುದಾಗಿ ಮೆಟಾ ತಿಳಿಸಿದೆ.
ಇಷ್ಟು ಕಾಲ ಬೇಕೆ?: ಮೆಟಾದ ಈ ಹೇಳಿಕೆಗೆ ವಿಮರ್ಶಕರಿಂದ ಟೀಕೆ ವ್ಯಕ್ತವಾಗಿದೆ. ಸಾಮಾಜಿಕ ಜಾಲತಾಣಗಳ ಮಾತೃಸಂಸ್ಥೆಯಾದ ಮೆಟಾ ನಿರ್ಬಂಧಗಳನ್ನು ವಿಧಿಸುವುದಾಗಿ ಈಗ ಘೋಷಿಸಿದೆ. ಇಂತಹ ಮಹತ್ವದ ನಿರ್ಧಾರವನ್ನು ತೆಗೆದುಕೊಳ್ಳಲು 2024ರ ವರೆಗೆ ಯಾಕೆ ಕಾಯಬೇಕಿತ್ತು. ಈ ಪ್ರಕಟಣೆಯು ಮತ್ತೊಂದು ಹತಾಶ ಪ್ರಯತ್ನವಾಗಿದೆ. ಆನ್‌ಲೈನ್ ಎಡವಟ್ಟಿನಿಂದಾಗಿ ತಮ್ಮ ಮಕ್ಕಳನ್ನು ಕಳೆದುಕೊಂಡ ಪೋಷಕರಿಗೆ ಇದು ಹೇಗೆ ಸಮಾಧಾನ ತರುತ್ತದೆ ಎಂದು ಮಕ್ಕಳ ಆನ್‌ಲೈನ್ ವಕೀಲರ ಗುಂಪಾದ ಫೇರ್‌ಪ್ಲೇ ಕಾರ್ಯನಿರ್ವಾಹಕ ನಿರ್ದೇಶಕ ಜೋಶ್ ಗೋಲಿನ್ ಪ್ರಶ್ನಿಸಿದ್ದಾರೆ. ಕಂಪನಿಯು ಆತ್ಮಹತ್ಯೆಯ ವಿರೋಧಿ ಮತ್ತು ಅನಾರೋಗ್ಯಕರ ಮಾಹಿತಿಯ ಪೋಸ್ಟ್ಗಳನ್ನು ಮರೆಮಾಡಲು ಸಮರ್ಥವಾಗಿದ್ದರೆ ಅದರ ಅನುಷ್ಠಾನಕ್ಕೆ ಇಷ್ಟು ಕಾಲ ಬೇಕಿರಲಿಲ್ಲ ಎಂದಿದ್ದಾರೆ.
ಇದನ್ನೂ ಓದಿ: ವಾಟ್ಸ್ಆ್ಯಪ್ ಉಚಿತ ಬ್ಯಾಕಪ್ ಶೀಘ್ರ ಅಂತ್ಯ; ಜಿಮೇಲ್ ಸ್ಟೊರೇಜ್ ಆಕ್ರಮಿಸಲಿವೆ ಚಾಟ್ಗಳು