ಬೆಂಗಳೂರು: ಮೆಸೇಜಿಂಗ್ ಪ್ಲಾಟ್ಫಾರ್ಮ್ ವಾಟ್ಸ್ಆ್ಯಪ್ ಆಗಾಗ ಹೊಸ ವೈಶಿಷ್ಟ್ಯಗಳನ್ನು ಸೇರಿಸುತ್ತಿರುತ್ತದೆ. ಈಗ ಈ ಸಾಲಿಗೆ ಮತ್ತೊಂದು ವೈಶಿಷ್ಟ್ಯ ಸೇರ್ಪಡೆಯಾಗಿದೆ. ಮೊಬೈಲ್ ನಂಬರ್ ಮೂಲಕ ಲಾಗಿನ್ ಮಾಡುವುದಕ್ಕೆ ಪರ್ಯಾಯವಾಗಿ ಮತ್ತೊಂದು ರೀತಿಯಲ್ಲಿ ಈಗ ನೀವು ವಾಟ್ಸ್ಆ್ಯಪ್ಗೆ ಲಾಗಿನ್ ಮಾಡಬಹುದಾದ ವೈಶಿಷ್ಟ್ಯ ಇದಾಗಿದೆ. ಇದರ ಬಗ್ಗೆ ಇಲ್ಲಿದೆ ಸಂಪೂರ್ಣ ಮಾಹಿತಿ.
ಇನ್ನು ಮುಂದೆ ಇಮೇಲ್ ಮೂಲಕ ನಿಮ್ಮ ವಾಟ್ಸ್ಆ್ಯಪ್ ಖಾತೆಗೆ ಲಾಗಿನ್ ಮಾಡುವ ವೈಶಿಷ್ಟ್ಯ ಶೀಘ್ರದಲ್ಲೇ ಬರಲಿದೆ ಎಂದು ಕಂಪನಿ ಹೇಳಿದೆ. ಅಪ್ಲಿಕೇಶನ್ನ ಬೀಟಾ ಆವೃತ್ತಿಯಲ್ಲಿ ಕಾಣಿಸಿಕೊಂಡಿರುವ ಈ ವೈಶಿಷ್ಟ್ಯವು ವಾಟ್ಸ್ಆ್ಯಪ್ಗೆ ಸೈನ್ ಇನ್ ಮಾಡುವ ಪರ್ಯಾಯ ಮಾರ್ಗವನ್ನು ನೀಡಲಿದೆ. ಪ್ರಸ್ತುತ, ಬಳಕೆದಾರರು ತಮ್ಮ ಫೋನ್ ನಂಬರ್ ಮೂಲಕ ಮಾತ್ರ ವಾಟ್ಸ್ಆ್ಯಪ್ಗೆ ಸೈನ್ ಇನ್ ಮಾಡಬಹುದಾಗಿದೆ.
ವಾಟ್ಸ್ಆ್ಯಪ್ನ ಬೀಟಾ ಆವೃತ್ತಿಯನ್ನು ಬಳಸುತ್ತಿರುವವರು ಅಪ್ಲಿಕೇಶನ್ನಲ್ಲಿ ಸೆಟ್ಟಿಂಗ್ಗಳು > ಖಾತೆ > ಇಮೇಲ್ ವಿಳಾಸಕ್ಕೆ ಹೋಗುವ ಮೂಲಕ ಹೊಸ ವೈಶಿಷ್ಟ್ಯವನ್ನು ಪರಿಶೀಲಿಸಬಹುದು. ಆಂಡ್ರಾಯ್ಡ್ 2.23.24.10 ಆವೃತ್ತಿ, 2.23.24.8 ಮತ್ತು 2.23.24.9 ಆವೃತ್ತಿಗಳಲ್ಲಿ ಹೊಸ ವಾಟ್ಸ್ಆ್ಯಪ್ ಬೀಟಾದಲ್ಲಿ ಮಾತ್ರ ಈ ವೈಶಿಷ್ಟ್ಯ ಕಾಣಿಸುತ್ತದೆ.
ಇದಲ್ಲದೆ, ವಾಟ್ಸ್ಆ್ಯಪ್ ಇತ್ತೀಚೆಗೆ ಒಂದು ಖಾತೆಯಲ್ಲಿ ಎರಡು ಮೊಬೈಲ್ ಸಂಖ್ಯೆಗಳನ್ನು ಬಳಸುವ ಆಯ್ಕೆಯನ್ನು ಸೇರಿಸಿದೆ. ಒಂದೇ ಸಾಧನದಲ್ಲಿ ಎರಡು ವಿಭಿನ್ನ ಖಾತೆಗಳನ್ನು ಬಳಸಲು ಜನರು ಈ ಹಿಂದೆ ಫೋನ್ಗಳಲ್ಲಿ ಡ್ಯುಯಲ್ ಅಥವಾ ಕ್ಲೋನ್ ಅಪ್ಲಿಕೇಶನ್ ವೈಶಿಷ್ಟ್ಯವನ್ನು ಬಳಸಬೇಕಾಗಿತ್ತು. ಆದರೆ ಈಗ ಇದರ ಅಗತ್ಯವಿಲ್ಲದೆ ಎರಡು ಮೊಬೈಲ್ ಸಂಖ್ಯೆಗಳನ್ನು ಒಂದೇ ಫೋನ್ನ ವಾಟ್ಸ್ಆ್ಯಪ್ನಲ್ಲಿ ಬಳಸಬಹುದು.
ಪೋಲ್ ಶೇರ್ ವೈಶಿಷ್ಟ್ಯ: ಮೆಟಾ ಒಡೆತನದ ಮೆಸೇಜಿಂಗ್ ಮತ್ತು ಕಾಲಿಂಗ್ ಪ್ಲಾಟ್ಪಾರ್ಮ್ ವಾಟ್ಸ್ಆ್ಯಪ್ ಶೀಘ್ರದಲ್ಲೇ ಚಾನೆಲ್ ಆ್ಯಡ್ಮಿನ್ಗಳಿಗೆ ಪೋಲ್ ಶೇರ್ ಮಾಡುವ ಅವಕಾಶ ನೀಡಲಿದೆ. ಆಡ್ಮಿನ್ಗಳು ಮತ್ತು ಅವರ ಫಾಲೋವರ್ಗಳ ನಡುವಿನ ಸಂವಹನವನ್ನು ಆಸಕ್ತಿದಾಯಕ ಮತ್ತು ಆಕರ್ಷಕವಾಗಿಸುವುದು ಈ ವಾಟ್ಸ್ಆ್ಯಪ್ ಚಾನೆಲ್ ಪೋಲ್ಸ್ ವೈಶಿಷ್ಟ್ಯದ ಮುಖ್ಯ ಉದ್ದೇಶವಾಗಿದೆ. ಪ್ರಸ್ತುತ ಚಾನೆಲ್ ಪೋಲ್ ವೈಶಿಷ್ಟ್ಯವು ಅಭಿವೃದ್ಧಿ ಹಂತದಲ್ಲಿದ್ದು ಶೀಘ್ರದಲ್ಲೇ ಬೀಟಾ ಪರೀಕ್ಷಕರಿಗೆ ಲಭ್ಯವಾಗಲಿದೆ ಎಂದು ವರದಿಗಳು ಹೇಳಿವೆ.
ಮ್ಯಾಕ್ ಸ್ಟೋರ್ನಲ್ಲಿ ಹೊಸ ಆವೃತ್ತಿ ಲಭ್ಯ: ವಾಟ್ಸ್ಆ್ಯಪ್ ಈ ವರ್ಷ ತನ್ನ ಮ್ಯಾಕ್ಒಎಸ್ ಅಪ್ಲಿಕೇಶನ್ನ ಹೊಸ ಆವೃತ್ತಿಯನ್ನು ಪರಿಚಯಿಸಿತ್ತು. ಇದನ್ನು ಮ್ಯಾಕ್ ಕಂಪ್ಯೂಟರ್ಗಳಿಗಾಗಿ ಸಂಪೂರ್ಣವಾಗಿ ಮರುನಿರ್ಮಾಣ ಮಾಡಲಾಯಿತ್ತು. ಈ ಅಪ್ಲಿಕೇಶನ್ ಅನ್ನು ಆಗಸ್ಟ್ನಲ್ಲಿ ಪ್ರಾರಂಭಿಸಲಾಗಿತ್ತು. ಆದರೆ ಇದು ವಾಟ್ಸ್ಆ್ಯಪ್ ವೆಬ್ಸೈಟ್ ಮೂಲಕ ಮಾತ್ರ ಲಭ್ಯವಿತ್ತು. ಸದ್ಯ ಇದು ಮ್ಯಾಕ್ ಆ್ಯಪ್ಸ್ಟೋರ್ನಲ್ಲಿ ಕೂಡ ಡೌನ್ಲೋಡ್ಗೆ ಲಭ್ಯವಿದೆ.
ಇದನ್ನೂ ಓದಿ: ವಾಟ್ಸ್ಆ್ಯಪ್ನಲ್ಲೂ ಕಾಣಿಸಲಿವೆ ಜಾಹೀರಾತು; ಆದರೆ ಮೇನ್ ಬಾಕ್ಸ್ನಲ್ಲಿ ಅಲ್ಲ!