ನವದೆಹಲಿ : ಕಂಪ್ಯೂಟರ್ ಗೇಮರ್ಗಳಿಗೆ ಖುಷಿಯ ಸುದ್ದಿಯೊಂದು ಬಂದಿದೆ. ವರ್ಷದ ಬ್ಯಾನ್ ನಂತರ ಪಬ್ಜಿ ಗೇಮ್ ಮತ್ತೆ ಭಾರತದಲ್ಲಿ ಲಭ್ಯವಾಗಲಿದೆ. ವೀಡಿಯೋ ಗೇಮ್ ಬ್ಯಾಟಲ್‌ಗ್ರೌಂಡ್ಸ್ ಮೊಬೈಲ್ ಇಂಡಿಯಾ (ಬಿಜಿಎಂಐ) (Battlegrounds Mobile India) ಕಾರ್ಯಾಚರಣೆಯನ್ನು ಪುನರಾರಂಭಿಸಲು ಭಾರತ ಸರ್ಕಾರದಿಂದ ಅನುಮೋದನೆಯನ್ನು ಪಡೆದುಕೊಂಡಿರುವುದಾಗಿ ದಕ್ಷಿಣ ಕೊರಿಯಾದ ಬೃಹತ್ ತಂತ್ರಜ್ಞಾನ ಕಂಪನಿ ಕ್ರಾಫ್ಟನ್ ಶುಕ್ರವಾರ ಪ್ರಕಟಿಸಿದೆ. ಗೇಮ್ ಶೀಘ್ರದಲ್ಲೇ ದಕ್ಷಿಣ ಏಷ್ಯಾ ಮಾರುಕಟ್ಟೆಯಲ್ಲಿ ಡೌನ್‌ಲೋಡ್‌ಗೆ ಲಭ್ಯವಾಗಲಿದೆ.
"ಬ್ಯಾಟಲ್‌ಗ್ರೌಂಡ್ಸ್ ಮೊಬೈಲ್ ಇಂಡಿಯಾದ ಕಾರ್ಯಾಚರಣೆಯನ್ನು ಪುನರಾರಂಭಿಸಲು ನಮಗೆ ಅನುಮತಿ ನೀಡಿದ್ದಕ್ಕಾಗಿ ಭಾರತೀಯ ಅಧಿಕಾರಿಗಳಿಗೆ ಕೃತಜ್ಞರಾಗಿದ್ದೆವೆ. ಕಳೆದ ಕೆಲವು ತಿಂಗಳುಗಳಿಂದ ನಮ್ಮ ಭಾರತೀಯ ಗೇಮಿಂಗ್ ಸಮುದಾಯದ ಬೆಂಬಲ ಮತ್ತು ತಾಳ್ಮೆಗಾಗಿ ನಾವು ನಮ್ಮ ಕೃತಜ್ಞತೆಯನ್ನು ಸಲ್ಲಿಸಲು ಬಯಸುತ್ತೇವೆ" ಎಂದು ಕ್ರಾಫ್ಟನ್ ಇಂಡಿಯಾದ ಸಿಇಓ ಸೀನ್ ಹ್ಯುನಿಲ್ ಸೋಹ್ನ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.
"ಬ್ಯಾಟಲ್‌ಗ್ರೌಂಡ್ಸ್ ಮೊಬೈಲ್ ಇಂಡಿಯಾ ಶೀಘ್ರದಲ್ಲೇ ಡೌನ್‌ಲೋಡ್‌ಗೆ ಲಭ್ಯವಾಗಲಿದೆ ಎಂಬುದನ್ನು ತಿಳಿಸಲು ಖುಷಿಯಾಗುತ್ತಿದೆ. ನಮ್ಮ ಪ್ಲಾಟ್‌ಫಾರ್ಮ್‌ಗೆ ನಿಮ್ಮನ್ನು ಸ್ವಾಗತಿಸಲು ಕಾಯುತ್ತಿದ್ದೇವೆ. ಭಾರತ ಮತ್ತು ಹೊರಗಿನ ನಮ್ಮ ಬಳಕೆದಾರರಿಗೆ ಅಸಾಧಾರಣ ಉತ್ಪನ್ನಗಳು ಮತ್ತು ಸೇವೆಗಳನ್ನು ತಲುಪಿಸಲು ನಾವು ಬದ್ಧರಾಗಿದ್ದೇವೆ. ನಿಮ್ಮೊಂದಿಗೆ ನಮ್ಮ ಪ್ರಯಾಣವನ್ನು ಮುಂದುವರಿಸುತ್ತೇವೆ” ಎಂದು ಅವರು ಹೇಳಿದರು.
ಕ್ರಾಫ್ಟನ್ನ ಪಬ್ ಜಿ ಗೇಮ್ ಒಂದು ವರ್ಷಕ್ಕೂ ಹೆಚ್ಚು ಅವಧಿಯಿಂದ ಭಾರತದಲ್ಲಿ ಬ್ಯಾನ್ ಆಗಿತ್ತು. ಸೆಪ್ಟೆಂಬರ್ 2020 ರಲ್ಲಿ ಮಾಹಿತಿ ತಂತ್ರಜ್ಞಾನ ಕಾಯಿದೆ, 2000 ರ ಸೆಕ್ಷನ್ 69A ಅಡಿಯಲ್ಲಿ ಭಾರತದ ಸಾರ್ವಭೌಮತೆ, ಸಮಗ್ರತೆ ಮತ್ತು ರಕ್ಷಣೆಗೆ ಅಪಾಯವಾಗುವ ಸಾಧ್ಯತೆಯನ್ನು ಉಲ್ಲೇಖಿಸಿ, 117 ಚೀನೀ ಅಪ್ಲಿಕೇಶನ್‌ಗಳ ಜೊತೆಗೆ PlayerUnknown's Battlegrounds (PUBG) ಮೊಬೈಲ್ ಗೇಮ್ ಅನ್ನು ಭಾರತ ಸರ್ಕಾರ ನಿಷೇಧಿಸಿತ್ತು.
ಆ ಸಮಯದಲ್ಲಿ ಪಬ್ ಜಿ ದೇಶದಲ್ಲಿ ಸುಮಾರು 33 ಮಿಲಿಯನ್ ಬಳಕೆದಾರರನ್ನು ಹೊಂದಿತ್ತು ಮತ್ತು ವೇಗವಾಗಿ ಬೆಳವಣಿಗೆ ಕಾಣುತ್ತಿತ್ತು. ನವೆಂಬರ್ 2020 ರಲ್ಲಿ, 'PUBG ಮೊಬೈಲ್ ಇಂಡಿಯಾ' ಎಂಬ ಹೊಸ ಕಂಪನಿಯ ಅಡಿಯಲ್ಲಿ ಭಾರತದಲ್ಲಿ PUBG ಮೊಬೈಲ್ ಅನ್ನು ಮರುಪ್ರಾರಂಭಿಸಲಾಗುವುದು ಎಂದು ಮೊದಲ ಬಾರಿಗೆ ಬಹಿರಂಗಪಡಿಸಲಾಯಿತು. ಅದೇ ತಿಂಗಳಲ್ಲಿ, ಪಬ್ ಜಿ ಸ್ಟುಡಿಯೋಸ್ ಮತ್ತು ದಕ್ಷಿಣ ಕೊರಿಯಾದ ವೀಡಿಯೊ ಗೇಮ್ ಕಂಪನಿ ಕ್ರಾಫ್ಟನ್ ದೇಶದಲ್ಲಿ ಪಬ್ ಜಿ ಮೊಬೈಲ್ ಅನ್ನು ಮರುಪ್ರಾರಂಭಿಸುವ ಸಲುವಾಗಿ ಕಾರ್ಪೊರೇಟ್ ವ್ಯವಹಾರಗಳ ಸಚಿವಾಲಯದ ಅಡಿಯಲ್ಲಿ ಪಬ್ ಜಿ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಹೆಸರಿನ ಕಂಪನಿಯನ್ನು ನೋಂದಾಯಿಸಿದೆ.
ಕ್ರಾಫ್ಟನ್ ಮೇ 2021 ರಲ್ಲಿ BGMI ಗೇಮ್ ಬಿಡುಗಡೆಯನ್ನು ಘೋಷಿಸಿತ್ತು. ಅಂತಿಮವಾಗಿ ಆ್ಯಂಡ್ರಾಯ್ಡ್ ಸಾಧನಗಳಿಗೆ ಜುಲೈ 2 ರಂದು ಮತ್ತು iOS ಸಾಧನಗಳಿಗಾಗಿ ಆಗಸ್ಟ್ 18 ರಂದು ಗೇಮ್ ಬಿಡುಗಡೆ ಮಾಡಲಾಗಿತ್ತು. ಒಂದು ವರ್ಷದ ಅವಧಿಯಲ್ಲಿ, BGMI 100 ಮಿಲಿಯನ್ ನೋಂದಾಯಿತ ಬಳಕೆದಾರರನ್ನು ಮೀರಿಸಿತ್ತು. ನಂತರ, ಭಾರತ ಸರ್ಕಾರವು ಆಯಾ ಆನ್‌ಲೈನ್ ಸ್ಟೋರ್‌ಗಳಿಂದ BGMI ಗೇಮಿಂಗ್ ಅಪ್ಲಿಕೇಶನ್ ಅನ್ನು ನಿರ್ಬಂಧಿಸಲು ಗೂಗಲ್ ಮತ್ತು ಆ್ಯಪಲ್ಗೆ ಆದೇಶಿಸಿತ್ತು.
ಇದನ್ನೂ ಓದಿ : ಫುಕುಶಿಮಾ ಪರಮಾಣು ಸ್ಥಾವರದ ನೀರು ಸಮುದ್ರಕ್ಕೆ: ಜೀವಸಂಕುಲಕ್ಕೆ ಅಪಾಯದ ಆತಂಕ