ಬೆಂಗಳೂರು: ಭಾರತದಲ್ಲಿ ತಂತ್ರಜ್ಞಾನ ತೀವ್ರಗತಿಯಲ್ಲಿ ಬೆಳವಣಿಗೆ ಕಾಣುತ್ತಿದೆ. ಅದು ನಿಮಗೆಲ್ಲರಿಗೂ ಗೊತ್ತೇ ಇದೆ. ಈ ತಂತ್ರಜ್ಞಾನವನ್ನು ಬಳಸಿಕೊಳ್ಳಲು ಇಸ್ರೋ ಸಹ ಮುಂದಾಗಿದೆ. ಬಾಹ್ಯಾಕಾಶ ತಂತ್ರಜ್ಞಾನ ಸ್ಟಾರ್ಟ್‌ಅಪ್‌ಗಳ ಬೆಳವಣಿಗೆಗೆ ಉತ್ತೇಜನ ನೀಡಲು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ -ಇಸ್ರೋ ಮತ್ತು ಮೈಕ್ರೋಸಾಫ್ಟ್ ಗುರುವಾರ ಸಹಮತಕ್ಕೆ ಬಂದಿವೆ.
ಈ ಸಹಯೋಗವು ದೇಶದಾದ್ಯಂತ ಬಾಹ್ಯಾಕಾಶ ಟೆಕ್ ಸ್ಟಾರ್ಟ್ - ಅಪ್‌ಗಳನ್ನು, ತಂತ್ರಜ್ಞಾನ ಪರಿಕರಗಳು ಮತ್ತು ಪ್ಲಾಟ್‌ಫಾರ್ಮ್‌ಗಳೊಂದಿಗೆ ಸಶಕ್ತಗೊಳಿಸಲು ನೆರವಾಗುತ್ತದೆ ಎಂದು ವಿಶ್ಲೇಷಿಸಲಾಗುತ್ತಿದೆ. ತಂತ್ರಜ್ಞಾನದ ಬೆಂಬಲ ಮತ್ತು ಮಾರ್ಗದರ್ಶನವನ್ನು ಪಡೆಯಲು ಮತ್ತು ಬಳಸಲು ಇದು ಸಹಾಯ ಮಾಡುತ್ತದೆ. ಮೈಕ್ರೋಸಾಫ್ಟ್ ಚೇರ್ಮನ್ ಮತ್ತು ಸಿಇಒ ಸತ್ಯ ನಾಡೆಲ್ಲಾ ಅವರು ಮೈಕ್ರೋಸಾಫ್ಟ್ ಫ್ಯೂಚರ್ ರೆಡಿ ಟೆಕ್ನಾಲಜಿ ಶೃಂಗಸಭೆಯಲ್ಲಿ ಭಾಗವಹಿಸಲು ಬೆಂಗಳೂರಿಗೆ ಆಗಮಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಅವರ ಜತೆ ಇಸ್ರೋ ಮಾತುಕತೆ ನಡೆಸಿ ಒಪ್ಪಂದಕ್ಕೆ ಸಹಿ ಹಾಕಿದೆ.
ಇಸ್ರೋ ಜೊತೆಗಿನ ಒಪ್ಪಂದ ಹಲವು ಲಾಭ: ಭಾರತದ ಅತ್ಯಂತ ಭರವಸೆಯ ಬಾಹ್ಯಾಕಾಶ ತಂತ್ರಜ್ಞಾನದ ಸಂಶೋಧಕರು ಮತ್ತು ಉದ್ಯಮಿಗಳ ಮಾರುಕಟ್ಟೆ ಸಾಮರ್ಥ್ಯವನ್ನು ಬಳಸಿಕೊಳ್ಳುವ ದೃಷ್ಟಿಕೋನದಿಂದ ಇಸ್ರೋದ ಜೊತೆ ಸಹಯೋಗಕ್ಕೆ ಬರಲಾಗಿದೆ ಎಂದು ಮೈಕ್ರೋಸಾಫ್ಟ್ ತಾನು ನೀಡಿರುವ ಪ್ರಕಟಣೆಯಲ್ಲಿ ತಿಳಿಸಿದೆ. ಈ ಸಂಬಂಧವಾಗಿ ಇಸ್ರೋ ಗುರುತಿಸಿರುವ ಬಾಹ್ಯಾಕಾಶ ತಂತ್ರಜ್ಞಾನದ ಸ್ಟಾರ್ಟ್-ಅಪ್‌ಗಳನ್ನು 'ಮೈಕ್ರೋಸಾಫ್ಟ್ ಫಾರ್ ಸ್ಟಾರ್ಟ್-ಅಪ್ಸ್ ಫೌಂಡರ್ಸ್ ಹಬ್ ಪ್ಲಾಟ್‌ಫಾರ್ಮ್'ಗೆ ಸೇರಿಸಲಾಗುತ್ತದೆ. ಸ್ಟಾರ್ಟ್ - ಅಪ್‌ಗಳನ್ನು ಇಸ್ರೋ ಪ್ರಯಾಣದ ಪ್ರತಿ ಹಂತದಲ್ಲೂ ಬೆಂಬಲಿಸುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.
ತನ್ನ ತಂತ್ರಜ್ಞಾನದ ಹಬ್ ಮೂಲಕ, ಭಾರತದಲ್ಲಿನ ಬಾಹ್ಯಾಕಾಶ - ತಂತ್ರಜ್ಞಾನದ ಸ್ಟಾರ್ಟ್-ಅಪ್‌ಗಳ ಸಂಸ್ಥಾಪಕರು ತಮ್ಮ ವ್ಯವಹಾರ ನಡೆಸಲು ಮತ್ತು ಅವರಿಗೆ ಬೇಕಾದ ಟೆಕ್ ಉಪಕರಣಗಳು ಮತ್ತು ಸಂಪನ್ಮೂಲಗಳಿಗೆ ಉಚಿತ ಪ್ರವೇಶ ಇದೆ ಎಂದು ಮೈಕ್ರೋಸಾಫ್ಟ್ ಪ್ರಕಟಣೆ ತಿಳಿಸಿದೆ. GitHub ಎಂಟರ್‌ಪ್ರೈಸ್, ವಿಷುಯಲ್ ಸ್ಟುಡಿಯೋ ಎಂಟರ್‌ಪ್ರೈಸ್ ಮತ್ತು ಮೈಕ್ರೋಸಾಫ್ಟ್ 365 ಮತ್ತು ಪವರ್ ಬಿಐ ಮತ್ತು ಡೈನಾಮಿಕ್ಸ್ 365 ನೊಂದಿಗೆ ಸ್ಮಾರ್ಟ್ ಅನಾಲಿಟಿಕ್ಸ್‌ಗೆ ಪ್ರವೇಶ ಒಳಗೊಂಡಂತೆ ಅತ್ಯುತ್ತಮ - ದರ್ಜೆಯ ಡೆವಲಪರ್ ಮತ್ತು ಉತ್ಪಾದಕತೆಯ ಪರಿಕರಗಳನ್ನು ಒದಗಿಸಲಿದೆ ಎಂದು ಮೈಕ್ರೋಸಾಫ್ಟ್ ತನ್ನ ಹೇಳಿಕೆಯಲ್ಲಿ ತಿಳಿಸಿದೆ.
ಇಸ್ರೋ ಸಂತಸ: ಮೈಕ್ರೋಸಾಫ್ಟ್ ಜೊತೆಗಿನ ಬಾಹ್ಯಾಕಾಶ ಸಂಸ್ಥೆಯ ಸಹಯೋಗವು ಕೃತಕ ಬುದ್ಧಿಮತ್ತೆ, ಯಂತ್ರ ಕಲಿಕೆ ಮತ್ತು ಆಳವಾದ ಕಲಿಕೆಯಂತಹ ಅತ್ಯಾಧುನಿಕ ವಿಧಾನಗಳನ್ನು ಬಳಸಿಕೊಂಡು ವಿವಿಧ ಅಪ್ಲಿಕೇಶನ್‌ಗಳಿಗಾಗಿ ಅಪಾರ ಪ್ರಮಾಣದ ಉಪಗ್ರಹ ಡೇಟಾವನ್ನು ವಿಶ್ಲೇಷಿಸಲು ನೆರವಾಗುತ್ತದೆ. ಮತ್ತು ಇವುಗಳನ್ನು ಸಕ್ರಿಯೆಗೊಳಿಸಲು ಬಾಹ್ಯಾಕಾಶ ತಂತ್ರಜ್ಞಾನದ ಸ್ಟಾರ್ಟ್-ಅಪ್‌ಗಳಿಗೆ ಹೆಚ್ಚು ಪ್ರಯೋಜನವನ್ನು ನೀಡುತ್ತದೆ ಎಂದು ಇಸ್ರೋ ಅಧ್ಯಕ್ಷ ಎಸ್ ಸೋಮನಾಥ್ ಹೇಳಿದ್ದಾರೆ.
"ಮೈಕ್ರೋಸಾಫ್ಟ್ ಫಾರ್ ಸ್ಟಾರ್ಟ್ - ಅಪ್‌ಗಳ ಸಂಸ್ಥಾಪಕರ ಹಬ್ ರಾಷ್ಟ್ರೀಯ ಬಾಹ್ಯಾಕಾಶ ತಂತ್ರಜ್ಞಾನ ಪರಿಸರವನ್ನು ಮತ್ತಷ್ಟು ಬಲಪಡಿಸಲು ಸಹಕಾರಿಯಾಗಿದೆ. ಸ್ಟಾರ್ಟ್-ಅಪ್‌ಗಳು ಮತ್ತು ತಂತ್ರಜ್ಞಾನ ಪರಿಹಾರಗಳ ಪೂರೈಕೆದಾರರನ್ನು ಒಟ್ಟುಗೂಡಿಸಲು ಇಸ್ರೋ - ಮೈಕ್ರೋಸಾಫ್ಟ್ ಒಪ್ಪಂದ ಒಂದು ಉಪಯುಕ್ತ ವೇದಿಕೆಯಾಗಿದೆ. ಭಾರತೀಯರಿಗೆ ಅನುಕೂಲವಾಗುವಂತೆ ಉದ್ಯಮಿಗಳಿಗೆ ಸಹಾಯ ಮಾಡಲು ಮತ್ತು ಬೆಂಬಲಿಸಲು ನಾವು ಒಟ್ಟಾಗಿ ಕೆಲಸ ಮಾಡಲು ಸಂತಸವಾಗುತ್ತಿದೆ‘‘ ಎಂದು ಎಸ್ ಸೋಮನಾಥ್ ಹೇಳಿದ್ದಾರೆ. ಈ ಒಪ್ಪಂದ ಆರ್ಥಿಕ ಬೆಳವಣಿಗೆಗೂ ಪೂರಕವಾಗಿದೆ ಎಂದು ಇಸ್ರೋ ಅಧ್ಯಕ್ಷರು ತಿಳಿಸಿದ್ದಾರೆ.
ಮೈಕ್ರೋಸಾಫ್ಟ್ ಇಂಡಿಯಾ ಅಧ್ಯಕ್ಷ ಅನಂತ್ ಮಹೇಶ್ವರಿ ಮಾತನಾಡಿ, ಭಾರತದಲ್ಲಿ ಬಾಹ್ಯಾಕಾಶ ತಂತ್ರಜ್ಞಾನದ ನವೋದ್ಯಮಗಳು ತಂತ್ರಜ್ಞಾನದ ಶಕ್ತಿಯೊಂದಿಗೆ ದೇಶದ ಬಾಹ್ಯಾಕಾಶ ಸಾಮರ್ಥ್ಯಗಳನ್ನು ಮುನ್ನಡೆಸುವಲ್ಲಿ ಮಹತ್ವದ ಪಾತ್ರವನ್ನು ವಹಿಸುತ್ತಿವೆ. ಇಸ್ರೋ ಜೊತೆಗಿನ ಸಹಯೋಗಕ್ಕಿಂತ ಸಂತಸದ ವಿಚಾರ ಮತ್ತೊಂದಿಲ್ಲ. ಇದರಿಂದ ಬಾಹ್ಯಾಕಾಶದಲ್ಲಿ ಸಾಧ್ಯವಿರುವ ಎಲ್ಲವನ್ನೂ ಸಾಧಿಸುವ ತವಕ ಹೊಂದಿದ್ದೇವೆ. ನಮ್ಮ ತಂತ್ರಜ್ಞಾನ ಪರಿಕರಗಳು, ವೇದಿಕೆಗಳು ಮತ್ತು ಮಾರ್ಗದರ್ಶನದ ಅವಕಾಶಗಳ ಮೂಲಕ ದೇಶದಲ್ಲಿ ಅತ್ಯಾಧುನಿಕ ಮತ್ತು ವೈಜ್ಞಾನಿಕ ಆವಿಷ್ಕಾರಗಳನ್ನು ನಡೆಸಲು ಮತ್ತು ವೃದ್ದಿಸಲು ಬಾಹ್ಯಾಕಾಶ ತಂತ್ರಜ್ಞಾನದ ನವೋದ್ಯಮಗಳನ್ನು ಸಬಲೀಕರಣಗೊಳಿಸಲು ನಾವು ಬದ್ಧರಾಗಿದ್ದೇವೆ ಎಂದು ಹೇಳಿದ್ದಾರೆ.
ತಂತ್ರಜ್ಞಾನಕ್ಕೆ ಪ್ರವೇಶ ಮಾತ್ರವಲ್ಲದೆ, ಮೈಕ್ರೋಸಾಫ್ಟ್ ಸಂಸ್ಥೆಯು ಬಾಹ್ಯಾಕಾಶ ತಂತ್ರಜ್ಞಾನದ ಉದ್ಯಮಿಗಳಿಗೆ ಸ್ಪೇಸ್ ಎಂಜಿನಿಯರಿಂಗ್‌ನಿಂದ ಆರಂಭಿಸಿ ಕ್ಲೌಡ್ ತಂತ್ರಜ್ಞಾನಗಳ ಉತ್ಪನ್ನ ಮತ್ತು ವಿನ್ಯಾಸ, ನಿಧಿಸಂಗ್ರಹ, ಮಾರಾಟ ಮತ್ತು ಮಾರ್ಕೆಟಿಂಗ್‌ವರೆಗಿನ ಕ್ಷೇತ್ರಗಳಲ್ಲಿ ಮಾರ್ಗದರ್ಶನ ಮತ್ತು ಬೆಂಬಲ ಒದಗಿಸುತ್ತದೆ. ಜೊತೆಗೆ, ಸಂಸ್ಥಾಪಕರು, ಉದ್ಯಮಗಳು ಮತ್ತು ಗ್ರಾಹಕರೊಂದಿಗೆ ಸಂಪರ್ಕವನ್ನು ಹೊಂದಲು ಮತ್ತು ಬೆಳವಣಿಗೆಯನ್ನು ತ್ವರಿತಗೊಳಿಸಲು ಸೂಕ್ತವಾದ ನವೋದ್ಯಮ ಕೇಂದ್ರಿತ ತರಬೇತಿ ವಿಷಯ ಮತ್ತು ಕಾರ್ಯಕ್ರಮಗಳಿಗಾಗಿ ಮೈಕ್ರೋಸಾಫ್ಟ್ ಲರ್ನ್ಗೆ ಪ್ರವೇಶ ಪಡೆಯುತ್ತಾರೆ ಎಂದಿದ್ದಾರೆ.
ಬಾಹ್ಯಾಕಾಶ ಉದ್ಯಮದ ತಜ್ಞರು ನವೋದ್ಯಮಗಳಿಗಾಗಿ ಜ್ಞಾನ ಹಂಚಿಕೆಯ ಕೆಲಸವನ್ನು ಮೈಕ್ರೋಸಾಫ್ಟ್ ಮತ್ತು ಇಸ್ರೋ ಸಂಸ್ಥೆಗಳು ಜಂಟಿಯಾಗಿ ಆಯೋಜಿಸಿದೆ. ಅಲ್ಲದೆ, ಈ ಸಹಯೋಗವು ನವೋದ್ಯಮಗಳ ಸಂಸ್ಥಾಪಕರಿಗೆ ಗೋ-ಟು-ಮಾರ್ಕೆಟ್ ತಂತ್ರಗಳು, ತಾಂತ್ರಿಕ ಬೆಂಬಲ ಮತ್ತು ಮೈಕ್ರೋಸಾಫ್ಟ್ ಚಾನೆಲ್‌ಗಳು ಮತ್ತು ಮಾರುಕಟ್ಟೆಯ ಮೂಲಕ ತಮ್ಮ ಪರಿಕರವನ್ನು ಮಾರಾಟ ಮಾಡಲು ಅವಕಾಶ ಒದಗಿಸುತ್ತವೆ ಎಂದು ಅನಂತ್ ಮಹೇಶ್ವರಿ ಮಾಹಿತಿ ನೀಡಿದ್ದಾರೆ.
ಇದನ್ನು ಓದಿ: ನಾಸಾದ ಮೊದಲ ಬಾಹ್ಯಾಕಾಶ ಮಿಷನ್ನ ಗಗನಯಾತ್ರಿ ಕನ್ನಿಂಗ್ಹ್ಯಾಮ್ ಇನ್ನಿಲ್ಲ