ನವದೆಹಲಿ: ಇನ್ಸ್ಟಾಗ್ರಾಮ್ ಮತ್ತು ಫೇಸ್ಬುಕ್ ಮೆಸೆಂಜರ್ ನಡುವಿನ ಕ್ರಾಸ್ - ಅಪ್ಲಿಕೇಶನ್ ಮೆಸೇಜಿಂಗ್ ಅನ್ನು ನಿಲ್ಲಿಸುವುದಾಗಿ ಮೆಟಾ ಘೋಷಿಸಿದೆ. ಕ್ರಾಸ್ ಮೆಸೇಜಿಂಗ್ ಎಕೆ ನಿಲ್ಲಿಸಲಾಗುತ್ತಿದೆ ಎಂಬ ಬಗ್ಗೆ ಕಂಪನಿ ಯಾವುದೇ ಕಾರಣ ನೀಡಿಲ್ಲ. ಬಹುಶಃ ಯುರೋಪಿನ ಡಿಜಿಟಲ್ ಮಾರ್ಕೆಟ್ಸ್ ಆಕ್ಟ್ (ಡಿಎಂಎ) ನ ಕಾರಣದಿಂದ ಮೆಟಾ ಈ ಕ್ರಮಕ್ಕೆ ಮುಂದಾಗಿರಬಹುದು ಎನ್ನಲಾಗಿದೆ.
ಡಿಸೆಂಬರ್ 2023 ರ ಮಧ್ಯದಿಂದ, ಬಳಕೆದಾರರು ಇನ್ನು ಮುಂದೆ ಇನ್ಸ್ಟಾಗ್ರಾಮ್ನಲ್ಲಿ ಫೇಸ್ಬುಕ್ ಖಾತೆಗಳೊಂದಿಗೆ ಚಾಟ್ ಮಾಡಲು ಸಾಧ್ಯವಾಗುವುದಿಲ್ಲ. ಕ್ರಾಸ್ - ಅಪ್ಲಿಕೇಶನ್ ಮೆಸೇಜಿಂಗ್ ಸ್ಥಗಿತಗೊಂಡ ನಂತರ ನೀವು ಇನ್ಸ್ಟಾಗ್ರಾಮ್ನಿಂದ ಫೇಸ್ಬುಕ್ ಖಾತೆಗಳೊಂದಿಗೆ ಹೊಸ ಸಂಭಾಷಣೆಗಳು ಅಥವಾ ಕರೆಗಳನ್ನು ಪ್ರಾರಂಭಿಸಲು ಸಾಧ್ಯವಾಗುವುದಿಲ್ಲ ಎಂದು ಕಂಪನಿ ಅಪ್ಡೇಟ್ನಲ್ಲಿ ತಿಳಿಸಿದೆ.
ಈ ಫೇಸ್ಬುಕ್ ಖಾತೆಗಳನ್ನು ಚಾಟ್ನಿಂದ ತೆಗೆದುಹಾಕಿದರೂ ಸಹ, ಇನ್ಸ್ಟಾಗ್ರಾಮ್ನಲ್ಲಿ ಆ ಫೇಸ್ಬುಕ್ ಖಾತೆಗಳೊಂದಿಗೆ ನೀವು ಹಿಂದೆ ನಡೆಸಿದ ಚಾಟ್ಗಳು ರೀಡ್ ಓನ್ಲಿ ಆಗಿ ಮಾರ್ಪಾಟಾಗುತ್ತವೆ ಎಂದು ಮೆಟಾ ಹೇಳಿದೆ. ಹಾಗೆಯೇ ಯಾವುದೇ ಫೇಸ್ಬುಕ್ ಅಕೌಂಟಿನಿಂದ ನಿಮ್ಮ ಚಟುವಟಿಕೆಯ ಸ್ಥಿತಿಯನ್ನು ವೀಕ್ಷಿಸಲು ಅಥವಾ ನೀವು ಸಂದೇಶ ನೋಡಿದ್ದೀರಾ ಎಂಬುದನ್ನು ತಿಳಿಯಲು ಸಾಧ್ಯವಾಗುವುದಿಲ್ಲ.
ಥ್ರೆಡ್ಸ್ ಹೊಸ ಅಪ್ಡೇಟ್ ಬಿಡುಗಡೆ: ಇನ್ಸ್ಟಾಗ್ರಾಮ್ನ ಥ್ರೆಡ್ಸ್ ಇತ್ತೀಚೆಗೆ ಕೀವರ್ಡ್ ಸರ್ಚ್ ಅಪ್ಡೇಟ್ ಬಿಡುಗಡೆ ಮಾಡಿದ್ದು, ಈಗ ಈ ಸರ್ಚ್ ಎಲ್ಲಾ ಭಾಷೆಗಳನ್ನು ಬೆಂಬಲಿಸುತ್ತದೆ. ಎಲೋನ್ ಮಸ್ಕ್ ಅವರ ಎಕ್ಸ್ಗೆ ಪೈಪೋಟಿ ನೀಡುವ ನಿಟ್ಟಿನಲ್ಲಿ ಥ್ರೆಡ್ಸ್ ಈ ಹೊಸ ಅಪ್ಡೇಟ್ ನೀಡಿದೆ. ಇನ್ನು ಮುಂದೆ ಥ್ರೆಡ್ಸ್ನಲ್ಲಿ ಎಲ್ಲ ಭಾಷೆಗಳಲ್ಲೂ ಕೀವರ್ಡ್ ಹುಡುಕಬಹುದು ಎಂದು ಇನ್ಸ್ಟಾಗ್ರಾಮ್ ಮುಖ್ಯಸ್ಥ ಆಡಮ್ ಮೊಸ್ಸೆರಿ ಹೇಳಿದ್ದಾರೆ.
"ಶೀಘ್ರದಲ್ಲೇ ಥ್ರೆಡ್ಸ್ನಲ್ಲಿ ಮತ್ತಷ್ಟು ವೈಶಿಷ್ಟ್ಯಗಳು ಬರಲಿವೆ. ಈ ಬಗ್ಗೆ ಸಲಹೆ ಇದ್ದರೆ ರಿಪ್ಲೈ ಮೂಲಕ ನನಗೆ ತಿಳಿಸಿ" ಎಂದು ಅವರು ಪೋಸ್ಟ್ ಮಾಡಿದ್ದಾರೆ. ಭಾರತಕ್ಕೂ ಮುನ್ನ ಆಗಸ್ಟ್ನಲ್ಲಿ ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ ಸೇರಿದಂತೆ ಇಂಗ್ಲಿಷ್ ಮಾತನಾಡುವ ಮಾರುಕಟ್ಟೆಗಳಲ್ಲಿ ಎಲ್ಲ ಭಾಷೆ ವೈಶಿಷ್ಟ್ಯ ಪರಿಚಯಿಸಲಾಗಿತ್ತು. ಮೆಟಾ ಒಡೆತನದ ಸಾಮಾಜಿಕ ನೆಟ್ವರ್ಕ್ ಥ್ರೆಡ್ಸ್ ಮುಂದಿನ ತಿಂಗಳು ಯುರೋಪಿಯನ್ ಯೂನಿಯನ್ ದೇಶಗಳಲ್ಲಿ ಪ್ಲಾಟ್ಫಾರ್ಮ್ ಲಾಂಚ್ ಮಾಡಬಹುದು ಎಂದು ವಾಲ್ ಸ್ಟ್ರೀಟ್ ಜರ್ನಲ್ ತಿಳಿಸಿದೆ. ಸದ್ಯ ಥ್ರೆಡ್ಸ್ ಸುಮಾರು 100 ಮಿಲಿಯನ್ ಬಳಕೆದಾರರನ್ನು ಹೊಂದಿದೆ.
ಇದನ್ನೂ ಓದಿ : ಆನ್ಲೈನ್ ಪೋರ್ನ್ ನೋಡಲು ವಯಸ್ಸಿನ ದಾಖಲೆ ತೋರಿಸುವುದು ಕಡ್ಡಾಯ: ಮಕ್ಕಳ ಸುರಕ್ಷತೆಗಾಗಿ ಕ್ರಮ