ನವದೆಹಲಿ : ಪ್ರಮುಖವಾದ ಅನ್ಪ್ಯಾಚ್ ಸೆಕ್ಯೂರಿಟಿ ದೋಷದಿಂದಾಗಿ (critical unpatched security vulnerability) 2 ಲಕ್ಷಕ್ಕೂ ಹೆಚ್ಚು ವರ್ಡ್‌ಪ್ರೆಸ್ ವೆಬ್‌ಸೈಟ್‌ಗಳು ಹ್ಯಾಕ್ ಆಗುವ ಅಪಾಯದಲ್ಲಿವೆ ಎಂದು ವರದಿಗಳು ತಿಳಿಸಿವೆ. ಹ್ಯಾಕರ್ಗಳು ಈಗಾಗಲೇ ಈ ದೋಷದ ದುರುಪಯೋಗ ಪಡೆಯಲು ಮುಂದಾಗಿದ್ದಾರೆ ಎನ್ನಲಾಗಿದೆ. WordPress ನ ಭದ್ರತಾ ಅಂಗವಾಗಿರುವ WPScan ಪ್ರಕಾರ, ದೋಷವು ಅಲ್ಟಿಮೇಟ್ ಮೆಂಬರ್ ಪ್ಲಗಿನ್‌ನಲ್ಲಿದೆ. ಇದು ಉಚಿತ ಬಳಕೆದಾರ ಪ್ರೊಫೈಲ್ ವರ್ಡ್ ಪ್ರೆಸ್ ಪ್ಲಗಿನ್ ಆಗಿದ್ದು ಅದು ಪ್ರಬಲ ಆನ್‌ಲೈನ್ ಸಮುದಾಯಗಳು ಮತ್ತು ಸದಸ್ಯತ್ವ ಸೈಟ್‌ಗಳನ್ನು ವರ್ಡ್ ಪ್ರೆಸ್ನೊಂದಿಗೆ ರಚಿಸಲು ಸುಲಭಗೊಳಿಸುತ್ತದೆ.
"ಇದು ಅತ್ಯಂತ ಗಂಭೀರವಾದ ಸಮಸ್ಯೆಯಾಗಿದೆ. ಏಕೆಂದರೆ ಈ ದೋಷವನ್ನು ಬಳಸಿಕೊಂಡು ಹ್ಯಾಕರ್ಗಳು ಆ್ಯಡ್ಮಿನಿಸ್ಟ್ರೇಟಿವ್ ಸಾಮರ್ಥ್ಯದಿಂದ ಹೊಸ ಯೂಸರ್ ಅಕೌಂಟ್ಗಳನ್ನು ರಚಿಸಬಹುದು ಮತ್ತು ಈ ಸಮಸ್ಯೆ ಹೊಂದಿರುವ ಸೈಟ್‌ಗಳ ಸಂಪೂರ್ಣ ನಿಯಂತ್ರಣವನ್ನು ತೆಗೆದುಕೊಳ್ಳುವ ಅಧಿಕಾರವನ್ನು ಅವರು ಪಡೆಯಬಹುದು" ಎಂದು ಭದ್ರತಾ ಸಂಸ್ಥೆ ಎಚ್ಚರಿಸಿದೆ. ಈ ಸಮಸ್ಯೆಗೆ ಸಂಪೂರ್ಣ ಪರಿಹಾರವಿಲ್ಲ ಮತ್ತು ಈ ಸಮಸ್ಯೆಯನ್ನು ದುರುದ್ದೇಶದ ಹ್ಯಾಕರ್ಗಳು ಸಕ್ರಿಯವಾಗಿ ಬಳಸಿಕೊಳ್ಳುತ್ತಿರುವುದು ಆತಂಕಕಾರಿಯಾಗಿದೆ ಎಂದು ಸಂಸ್ಥೆಯು ತಿಳಿಸಿದೆ.
ತಮ್ಮ ಪ್ಲಗಿನ್ನಲ್ಲಿ ದೋಷವಿರುವುದು ಪತ್ತೆಯಾಗುತ್ತಿರುವಂತೆಯೇ ಪ್ಲಗಿನ್‌ನ ರಚನೆಕಾರರು ಸಮಸ್ಯೆಯನ್ನು ಪರಿಹರಿಸಲು ಉದ್ದೇಶದ ಪ್ಲಗಿನ್‌ನ ಹೊಸ ಆವೃತ್ತಿ, 2.6.4 ಅನ್ನು ತ್ವರಿತವಾಗಿ ಬಿಡುಗಡೆ ಮಾಡಿದ್ದಾರೆ. ಆದಾಗ್ಯೂ, ಈ ಅಪ್ಡೇಟ್ ಅನ್ನು ತನಿಖೆ ಮಾಡಿದಾಗ ಇದರಲ್ಲೂ ಕೆಲ ದೋಷಗಳಿರುವುದು ಪತ್ತೆಯಾಗಿದೆ. ಅಂದರೆ ಸಮಸ್ಯೆ ಈಗಳು ಮೊದಲಿನಂತೆಯೇ ಇದೆ ಎಂದು WPScan ತಂಡ ಹೇಳಿದೆ. ಬಳಕೆದಾರರು ಹಸ್ತಕ್ಷೇಪ ಮಾಡಬಾರದಂಥ ಬಳಕೆದಾರರ ಮೆಟಾಡೇಟಾ ಕೀಗಳ ಪೂರ್ವ-ನಿರ್ಧರಿತ ಪಟ್ಟಿಯನ್ನು ಬಳಸಿಕೊಂಡು ಪ್ಲಗಿನ್ ಕಾರ್ಯನಿರ್ವಹಿಸುತ್ತದೆ. ಖಾತೆಯನ್ನು ರಚಿಸುವಾಗ ಬಳಕೆದಾರರು ಈ ಕೀಗಳನ್ನು ನೋಂದಾಯಿಸಲು ಪ್ರಯತ್ನಿಸುತ್ತಿದ್ದಾರೆಯೇ ಎಂದು ಪರಿಶೀಲಿಸಲು ಇದು ಈ ಪಟ್ಟಿಯನ್ನು ಬಳಸುತ್ತದೆ.
ದುರದೃಷ್ಟವಶಾತ್, ಅಲ್ಟಿಮೇಟ್ ಮೆಂಬರ್ಗಳ ಬ್ಲಾಕ್‌ಲಿಸ್ಟ್ ಲಾಜಿಕ್ ಮತ್ತು ವರ್ಡ್‌ಪ್ರೆಸ್ ಮೆಟಾಡೇಟಾ ಕೀಗಳನ್ನು ಹೇಗೆ ಪರಿಗಣಿಸುತ್ತದೆ ಎಂಬುದರ ವ್ಯತ್ಯಾಸಗಳು ದಾಳಿಕೋರರಿಗೆ ಪ್ಲಗಿನ್ ಅನ್ನು ಮಾಡಬಾರದ ರೀತಿಯಲ್ಲಿ ಅಪ್‌ಡೇಟ್ ಮಾಡಲು ಸಾಧ್ಯವಾಗಿಸಿತು ಎಂದು ತಂಡ ಹೇಳಿದೆ. ಈ ಭದ್ರತಾ ಸಮಸ್ಯೆಯನ್ನು ಸಂಪೂರ್ಣವಾಗಿ ನಿವಾರಿಸುವ ಪ್ಯಾಚ್ ಲಭ್ಯವಾಗುವವರೆಗೆ ಬಳಕೆದಾರರು ಅಲ್ಟಿಮೇಟ್ ಮೆಂಬರ್ ಪ್ಲಗಿನ್ ಅನ್ನು ನಿಷ್ಕ್ರಿಯಗೊಳಿಸಬೇಕೆಂದು ಭದ್ರತಾ ಸಂಶೋಧಕರು ಶಿಫಾರಸು ಮಾಡಿದ್ದಾರೆ.
ವರ್ಡ್‌ಪ್ರೆಸ್ ಎಂಬುದು ನಿಮ್ಮ ಸ್ವಂತ ವೆಬ್‌ಸೈಟ್ ಅಥವಾ ಬ್ಲಾಗ್ ಅನ್ನು ರಚಿಸಲು ಸರಳ ಹಾಗೂ ಅತ್ಯಂತ ಜನಪ್ರಿಯವಾದ ಮಾರ್ಗವಾಗಿದೆ. ವಾಸ್ತವವಾಗಿ, ಇಂಟರ್ನೆಟ್ನಲ್ಲಿರುವ ಶೇ 43.3 ಕ್ಕೂ ಅಧಿಕ ವೆಬ್ಸೈಟ್ಗಳನ್ನು ವರ್ಡ್‌ಪ್ರೆಸ್ ಬಳಸಿಯೇ ತಯಾರಿಸಲಾಗಿದೆ. ನೀವು ಭೇಟಿ ನೀಡುವ ನಾಲ್ಕರಲ್ಲಿ ಒಂದಕ್ಕಿಂತ ಹೆಚ್ಚು ವೆಬ್‌ಸೈಟ್‌ಗಳು ವರ್ಡ್‌ಪ್ರೆಸ್‌ನಿಂದ ಚಾಲಿತವಾಗಿರಬಹುದು. ತಾಂತ್ರಿಕ ಮಟ್ಟದಲ್ಲಿ ನೋಡುವುದಾದರೆ ವರ್ಡ್ ಪ್ರೆಸ್ ಎನ್ನುವುದು GPLv2 ಅಡಿಯಲ್ಲಿ ಪರವಾನಗಿ ಪಡೆದ ಒಂದು ಓಪನ್ ಸೋರ್ಸ್ ಕಂಟೆಂಟ್ ಮ್ಯಾನೇಜ್ಮೆಂಟ್ ಸಿಸ್ಟಮ್ ಆಗಿದೆ. ಅಂದರೆ ಯಾರು ಬೇಕಾದರೂ ವರ್ಡ್ ಪ್ರೆಸ್ ಸಾಫ್ಟ್‌ವೇರ್ ಅನ್ನು ಉಚಿತವಾಗಿ ಬಳಸಬಹುದು ಅಥವಾ ಮಾರ್ಪಡಿಸಬಹುದು.
ಇದನ್ನೂ ಓದಿ : ಕಂಪನಿ ವಿಳಾಸಗಳ ಜಿಯೋಟ್ಯಾಗಿಂಗ್ ಕಡ್ಡಾಯ: ನಕಲಿ ನೋಂದಣಿ ತಡೆಗೆ ಕ್ರಮ