ಸ್ಯಾನ್ ಫ್ರಾನ್ಸಿಸ್ಕೊ : 2023ನೇ ವರ್ಷಕ್ಕೆ ಗೂಗಲ್ ತನ್ನ ಕೆಲ ಮುನ್ನೋಟಗಳನ್ನು ಬಿಡುಗಡೆ ಮಾಡಿದೆ. ಈ ವರ್ಷದಲ್ಲಿ ಆ್ಯಂಡ್ರಾಯ್ಡ್ ಮತ್ತು ಗೂಗಲ್ ಪ್ಲೇ ಗಳನ್ನು ಹೆಚ್ಚು ಸುರಕ್ಷಿತವಾಗಿಸುವುದು ಕಂಪನಿಯ ಗುರಿಯಾಗಿದೆ ಎಂದು ಗೂಗಲ್ ಹೇಳಿದೆ. ಸಫಲ ಉದ್ಯಮಗಳನ್ನು ನಿರ್ಮಿಸಲು ಡೆವಲಪರ್‌ಗಳಿಗೆ ಆ್ಯಂಡ್ರಾಯ್ಡ್ ಮತ್ತು ಗೂಗಲ್ ಪ್ಲೇಗಳನ್ನು ಸುರಕ್ಷಿತವಾಗಿರಿಸುವುದು ಮತ್ತು ಪ್ರಪಂಚದಾದ್ಯಂತದ ಶತಕೋಟಿ ಬಳಕೆದಾರರಿಗೆ ಗುಣಮಟ್ಟದ ಅಪ್ಲಿಕೇಶನ್‌ಗಳು ಮತ್ತು ಗೇಮ್ಗಳನ್ನು ಒದಗಿಸುವುದು ನಮ್ಮ ಪ್ರಮುಖ ಆದ್ಯತೆಯಾಗಿದೆ ಎಂದು ಗೂಗಲ್ ಸೋಮವಾರ ಆ್ಯಂಡ್ರಾಯ್ಡ್ ಡೆವಲಪರ್‌ಗಳ ಬ್ಲಾಗ್‌ಪೋಸ್ಟ್‌ನಲ್ಲಿ ತಿಳಿಸಿದೆ.
ಮತ್ತಷ್ಟು ಹೆಚ್ಚು ಖಾಸಗಿ ಮೊಬೈಲ್ ಪರಿಸರ ವ್ಯವಸ್ಥೆಯನ್ನು ನಿರ್ಮಿಸುವ ನಿಟ್ಟಿನಲ್ಲಿ ನಾವು ಡೆವಲಪರ್‌ಗಳು, ಪ್ರಕಾಶಕರು, ನಿಯಂತ್ರಕರ ಸಹಯೋಗದೊಂದಿಗೆ ಕೆಲಸ ಮಾಡುವುದನ್ನು ಮುಂದುವರಿಸುತ್ತೇವೆ. ಈ ವರ್ಷ ಕಂಪನಿಯು ಗೂಗಲ್ ಪ್ಲೇ ನ ಡೇಟಾ ಸುರಕ್ಷತೆ ವಿಭಾಗವನ್ನು ಹೊಸ ವೈಶಿಷ್ಟ್ಯಗಳು ಮತ್ತು ನೀತಿಗಳೊಂದಿಗೆ ಸುಧಾರಿಸುವುದನ್ನು ಮುಂದುವರಿಸುತ್ತದೆ. ಡಿಲೀಶನ್ ಪ್ರ್ಯಾಕ್ಟೀಸ್ಗಳ ಬಗ್ಗೆ ಬಳಕೆದಾರರಿಗೆ ಹೆಚ್ಚಿನ ಸ್ಪಷ್ಟತೆ ಮತ್ತು ನಿಯಂತ್ರಣವನ್ನು ನೀಡುವ ಗುರಿಯನ್ನು ಹೊಂದಿದ್ದೇವೆ ಎಂದು ಗೂಗಲ್ ತಿಳಿಸಿದೆ.
ಬಳಕೆದಾರರ ಡೇಟಾಗೆ ಪ್ರವೇಶ ಪಡೆಯಲು ಬಳಕೆದಾರರಿಂದ ಪಡೆಯುವ ಪರ್ಮಿಶನ್ಗಳನ್ನು ಕಡಿಮೆ ಮಾಡುವ ಮೂಲಕ ಡೆವಲಪರ್‌ಗಳು ತಮ್ಮ ಬಳಕೆದಾರರ ಸುರಕ್ಷತೆ ಹೆಚ್ಚಿಸಬಹುದು. ಅಲ್ಲದೇ, ಡೆವಲಪರ್‌ಗಳು ಆ್ಯಂಡ್ರಾಯ್ಡ್ 14 ಡೆವಲಪರ್ ಪೂರ್ವವೀಕ್ಷಣೆ 1 ರಲ್ಲಿ ಗೌಪ್ಯತೆ, ಭದ್ರತೆ ಮತ್ತು ಪಾರದರ್ಶಕತೆ ವರ್ಧನೆಗಳನ್ನು ಪರೀಕ್ಷಿಸಲು ಪ್ರಾರಂಭಿಸಬಹುದು. ತಮ್ಮ ವ್ಯಾಪಾರ, ಬಳಕೆದಾರರು ಮತ್ತು IP ಗಳನ್ನು ರಕ್ಷಿಸಲು ಹೆಚ್ಚಿನ ಸಹಾಯ ಬಯಸುತ್ತೇವೆ ಎಂದು ಡೆವಲಪರ್‌ಗಳು ತಿಳಿಸಿದ್ದಾರೆ. ಆದ್ದರಿಂದ, Play ಇಂಟೆಗ್ರಿಟಿ ಅಪ್ಲಿಕೇಶನ್ ಪ್ರೋಗ್ರಾಮಿಂಗ್ ಇಂಟರ್ಫೇಸ್ (API) ಮತ್ತು ಸ್ವಯಂಚಾಲಿತ ಸಮಗ್ರತೆಯ ರಕ್ಷಣೆ ಹೆಚ್ಚಿಸುವುದನ್ನು ಮುಂದುವರಿಸಿದ್ದೇವೆ ಮತ್ತು ಅಪಾಯಗಳನ್ನು ಸುಲಭವಾಗಿ ಪತ್ತೆಹಚ್ಚಲು ಮತ್ತು ತಡೆಯಲು ಸಹಾಯ ಮಾಡುತ್ತಿದ್ದೇವೆ ಎಂದು ಗೂಗಲ್ ತಿಳಿಸಿದೆ.
ಚಾಟ್ ಜಿಪಿಟಿ ಹಿಂದಿಕ್ಕಲು ಗೂಗಲ್ ಯತ್ನ: ಗೂಗಲ್ ಯುನಿವರ್ಸಲ್ ಸ್ಪೀಚ್ ಮಾಡೆಲ್ (USM) ಕುರಿತು ಹೆಚ್ಚಿನ ಮಾಹಿತಿಯನ್ನು ಇತ್ತೀಚೆಗೆ ಹಂಚಿಕೊಂಡಿದೆ. ಗೂಗಲ್ ಈಗ 1,000 ವಿಭಿನ್ನ ಭಾಷೆಗಳನ್ನು ಬೆಂಬಲಿಸುವ AI ಭಾಷಾ ಮಾದರಿಯನ್ನು ನಿರ್ಮಿಸುವ ಗುರಿಯತ್ತ ಸಾಗುತ್ತಿದೆ. ChatGPT ಅನ್ನು ಹಿಂದಿಕ್ಕಲು ಗೂಗಲ್ ಈಗ ನಿರ್ಣಾಯಕ ಹೆಜ್ಜೆಯನ್ನಿಡುತ್ತಿದೆ. ಕಳೆದ ವರ್ಷ ನವೆಂಬರ್‌ನಲ್ಲಿ, ಕಂಪನಿಯು ತನ್ನ USM ಮಾದರಿಯನ್ನು ಬಹಿರಂಗಪಡಿಸುವ ಸಂದರ್ಭದಲ್ಲಿ ವಿಶ್ವದ ಹೆಚ್ಚು ಮಾತನಾಡುವ 1,000 ಭಾಷೆಗಳನ್ನು ಬೆಂಬಲಿಸುವ ಭಾಷಾ ಮಾದರಿಯನ್ನು ರಚಿಸುವ ಯೋಜನೆಯನ್ನು ಪ್ರಕಟಿಸಿದೆ.
ಟೆಕ್ ದೈತ್ಯ ಗೂಗಲ್, ಗೂಗಲ್ ಯುನಿವರ್ಸಲ್ ಸ್ಪೀಚ್ ಮಾಡೆಲ್ ಇದು 300+ ಭಾಷೆಗಳಲ್ಲಿ ವ್ಯಾಪಿಸಿರುವ 12 ಮಿಲಿಯನ್ ಗಂಟೆಗಳ ಭಾಷಣ ಮತ್ತು 28 ಶತಕೋಟಿ ವಾಕ್ಯಗಳ ಮೇಲೆ ತರಬೇತಿ ಪಡೆದ 2 ಬಿಲಿಯನ್ ಪ್ಯಾರಾಮೀಟರ್‌ಗಳೊಂದಿಗೆ ಅತ್ಯಾಧುನಿಕ ಭಾಷಣ ಮಾದರಿಗಳ ವ್ಯವಸ್ಥೆ ಎಂದು ವಿವರಿಸಿದೆ. ಸದ್ಯ ಯುನಿವರ್ಸಲ್ ಸ್ಪೀಚ್ ಮಾಡೆಲ್ 100 ಕ್ಕೂ ಹೆಚ್ಚು ಭಾಷೆಗಳನ್ನು ಬೆಂಬಲಿಸುತ್ತದೆ ಮತ್ತು ಹೆಚ್ಚು ದೊಡ್ಡ ಸಿಸ್ಟಮ್‌ಗೆ ಅಡಿಪಾಯ ಆಗಿ ಕಾರ್ಯನಿರ್ವಹಿಸುತ್ತದೆ ಎಂದು ಗೂಗಲ್ ಪ್ರಸ್ತುತ ಹೇಳಿಕೊಂಡಿದೆ.
ಇದನ್ನೂ ಓದಿ : ಕ್ರೋಮ್ನಲ್ಲಿ ಶೇ 300ರಷ್ಟು ಜೂಮಿಂಗ್: ಹೊಸ ವೈಶಿಷ್ಟ್ಯ ಪರಿಚಯಿಸಿದ ಗೂಗಲ್