ಬೆಂಗಳೂರು : ಗೂಗಲ್ ತನ್ನ ಎಐ ಸಾಫ್ಟ್ವೇರ್ ಬಾರ್ಡ್ ಅನ್ನು ಈ ವರ್ಷದ ಫೆಬ್ರವರಿಯಲ್ಲಿ ಬಿಡುಗಡೆ ಮಾಡಿತ್ತು. ಪ್ರಾರಂಭದ ಸಮಯದಲ್ಲಿ ಬಾರ್ಡ್ ಚಾಟ್‌ಬಾಟ್ ಅನ್ನು ಹೊಸ ಸರ್ಚ್ ಎಂಜಿನ್ ಆಗಿ ಜನ ಬಳಸಲಾರಂಭಿಸಿದ್ದರು ಮತ್ತು ಗೂಗಲ್ಗೆ ಪರ್ಯಾಯವೆಂದು ನೋಡಲಾಗಿತ್ತು. ಆದಾಗ್ಯೂ, ಬಾರ್ಡ್ ಇನ್ನೂ ಸುಧಾರಿಸುತ್ತಿರುವುದರಿಂದ ಅದು ಸರಿಯಾಗಿ ಕೆಲಸ ಮಾಡಲು ಇನ್ನೂ ಸಾಕಷ್ಟು ಸಮಯ ಬೇಕಿದೆ ಎಂದು ವರದಿಗಳು ತಿಳಿಸಿವೆ.
ಬಾರ್ಡ್ ಇನ್ನೂ ಸುಧಾರಿಸಬೇಕಿದೆ ಎಂಬುದರ ಮಧ್ಯೆ ಅದರ ಹೋಮ್ಪೇಜ್ನಲ್ಲಿ ಹಾಕಲಾಗಿರುವ ಡಿಸ್ಕ್ಲೇಮರ್ ಈಗ ಅಚ್ಚರಿಗೆ ಕಾರಣವಾಗಿದೆ. ಬಾರ್ಡ್ ಕೆಲವೊಂದು ಸಮಯದಲ್ಲಿ ತಪ್ಪು ಫಲಿತಾಂಶಗಳನ್ನು ನೀಡಬಹುದು ಎಂದು ಡಿಸ್ಕ್ಲೇಮರ್ ಹೇಳುತ್ತದೆ. ಈಗ ಗೂಗಲ್ನ ಯುಕೆ ಮುಖ್ಯಸ್ಥರು ಕೂಡ ಈ ಬಗ್ಗೆ ಮಾತನಾಡಿದ್ದು, ಗೂಗಲ್ ಬಾರ್ಡ್ ಯಾವಾಗಲೂ ಸರಿಯಾದ ಉತ್ತರ ನೀಡಲಾರದು ಮತ್ತು ಬಳಕೆದಾರರು ಬಾರ್ಡ್‌ನ ಫಲಿತಾಂಶಗಳನ್ನು ಗೂಗಲ್ ಸರ್ಚ್ ಎಂಜಿನ್ ಫಲಿತಾಂಶಗಳೊಂದಿಗೆ ಕ್ರಾಸ್ ಚೆಕ್ ಮಾಡಿಕೊಳ್ಳಬೇಕೆಂದು ಹೇಳಿದ್ದಾರೆ.
ಅಂತಾರಾಷ್ಟ್ರೀಯ ಮಾಧ್ಯಮಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ Google UK ವ್ಯವಸ್ಥಾಪಕ ನಿರ್ದೇಶಕ ಡೆಬ್ಬಿ ವೈನ್‌ಸ್ಟೈನ್, ಗೂಗಲ್ ಯಾವಾಗಲೂ ವಿಶ್ವಾಸಾರ್ಹ ಮಾಹಿತಿ ನೀಡುವುದಿಲ್ಲ ಎಂದು ಹೇಳಿದರು. ಗೂಗಲ್‌ನಲ್ಲಿ ಜನರು ವಿಶ್ವಾಸಾರ್ಹ ಮತ್ತು ನಿಖರವಾದ ಮಾಹಿತಿಯನ್ನು ಪಡೆಯಲು ಸರ್ಚ್ ಇಂಜಿನ್ ಅನ್ನು ನಂಬುತ್ತಾರೆ. ಆದರೆ ಸರ್ಚ್ ಎಂಜಿನ್ ರೀತಿಯಲ್ಲಿ ಬಾರ್ಡ್ 'ನಿರ್ದಿಷ್ಟ ಮಾಹಿತಿ' ಹುಡುಕುವ ಸಾಧನವಲ್ಲ ಅವರು ಹೇಳಿದರು.
ಬಾರ್ಡ್‌ನ ಉತ್ತರಗಳು ವಿಶ್ವಾಸಾರ್ಹವಲ್ಲ ಎಂದು ಗೂಗಲ್ ಉದ್ಯೋಗಿಯೊಬ್ಬರು ಎಚ್ಚರಿಕೆ ನೀಡಿರುವುದು ಇದೇ ಮೊದಲಲ್ಲ. ಬಾರ್ಡ್ ಕಡಿಮೆ ನಿಖರತೆಯ ಫಲಿತಾಂಶಗಳನ್ನು ನೀಡುತ್ತಿದೆ ಎಂದು ಗೂಗಲ್ನ 18 ಹಾಲಿ ಮತ್ತು ಮಾಜಿ ಉದ್ಯೋಗಿಗಳು ಹೇಳಿದ್ದಾರೆ ಎಂದು ಈ ವರ್ಷದ ಏಪ್ರಿಲ್ನಲ್ಲಿ ಮಾಧ್ಯಮಗಳು ವರದಿ ಮಾಡಿದ್ದವು.
ಬಾರ್ಡ್ಗೆ ಟ್ರೇನಿಂಗ್ ನೀಡುವುದರಲ್ಲಿ ತೊಡಗಿಸಿಕೊಂಡಿರುವ ಕೆಲ ಗೂಗಲ್ ಉದ್ಯೋಗಿಗಳು ಸಹ ಈ ಬಗ್ಗೆ ಇತ್ತೀಚೆಗೆ ಮಾತನಾಡಿದ್ದಾರೆ. ತಾವು ಕೆಲಸ ಮಾಡುವ ಸ್ಥಳದಲ್ಲಿನ ವ್ಯವಸ್ಥೆಗಳಿಂದ ನಾವು ಖುಷಿಯಾಗಿಲ್ಲ, ಅತಿಯಾದ ಕೆಲಸ ಹಾಗೂ ಕಡಿಮೆ ಸಂಬಳಕ್ಕೆ ನಾವು ಕೆಲಸ ಮಾಡುತ್ತಿದ್ದೇವೆ ಎಂದು ಅವರು ಹೇಳಿದ್ದರು.
ಕಂಪನಿಯು OpenAI ನೊಂದಿಗೆ ಪೈಪೋಟಿಗೆ ಬಿದ್ದಾಗಿನಿಂದ ಈ ವಿಭಾಗದಲ್ಲಿ ಕೆಲಸ ಮಾಡುವ ಉದ್ಯೋಗಿಗಳ ಕೆಲಸದ ಹೊರೆಯ ಗಾತ್ರ ಮತ್ತು ಕಾರ್ಯಗಳ ಸಂಕೀರ್ಣತೆ ಹೆಚ್ಚಾಗಿದೆ ಎಂದು ಕೆಲ ಗುತ್ತಿಗೆ ಕಾರ್ಮಿಕರು ಹೇಳಿದ್ದರು. ಯಾವುದೇ ಸರಿಯಾದ ತರಬೇತಿಯಿಲ್ಲದೆ, ಗುತ್ತಿಗೆ ಕಾರ್ಮಿಕರಿಗೆ ಔಷಧಿಯಿಂದ ಹಿಡಿದು ಕಾನೂನಿನವರೆಗಿನ ವಿಷಯಗಳಲ್ಲಿ ಉತ್ತರಗಳನ್ನು ಪರೀಕ್ಷಿಸುವ ಕೆಲಸ ನೀಡಲಾಯಿತು. ಕೆಲವೊಮ್ಮೆ ಬಾರ್ಡ್‌ನ ಉತ್ತರಗಳನ್ನು ಪರಿಶೀಲಿಸಲು ಉದ್ಯೋಗಿಗಳಿಗೆ ಕೇವಲ ಮೂರು ನಿಮಿಷಗಳ ಸಮಯ ನೀಡಲಾಗಿತ್ತು ಎಂದು ಮಾಧ್ಯಮ ವರದಿಗಳು ಹೇಳಿವೆ.
Google Bard ಎಂಬುದು AI-ಚಾಲಿತ ಚಾಟ್‌ಬಾಟ್ ಸಾಧನವಾಗಿದ್ದು, ನೈಸರ್ಗಿಕ ಭಾಷಾ ಸಂಸ್ಕರಣೆ ಮತ್ತು ಯಂತ್ರ ಕಲಿಕೆಯನ್ನು ಬಳಸಿಕೊಂಡು ಮಾನವ ಸಂಭಾಷಣೆಗಳನ್ನು ಅನುಕರಿಸುವಂತೆ ವಿನ್ಯಾಸಗೊಳಿಸಲಾಗಿದೆ. ಗೂಗಲ್ ಸರ್ಚ್ ಜೊತೆಗೆ, ಬಳಕೆದಾರರ ಪ್ರಶ್ನೆಗಳಿಗೆ ವಾಸ್ತವಿಕ ನೈಸರ್ಗಿಕ ಭಾಷೆಯ ಪ್ರತಿಕ್ರಿಯೆಗಳನ್ನು ಒದಗಿಸಲು ಬಾರ್ಡ್ ಅನ್ನು ವೆಬ್‌ಸೈಟ್‌ಗಳು, ಸಂದೇಶ ಕಳುಹಿಸುವ ವೇದಿಕೆಗಳು ಅಥವಾ ಅಪ್ಲಿಕೇಶನ್‌ಗಳಲ್ಲಿ ಸಂಯೋಜಿಸಬಹುದು.
ಇದನ್ನೂ ಓದಿ : Dead Satellite: ಭೂಮಿಗೆ ಮರಳಿದ ನಿಷ್ಕ್ರಿಯ ಉಪಗ್ರಹ 'ಏಯೋಲಸ್'; ವಿಜ್ಞಾನಿಗಳ ಮಹತ್ತರ ಸಾಧನೆ