ಟೋಕಿಯೊ (ಜಪಾನ್) : ಫುಕುಶಿಮಾ ಡೈಚಿ ಅಣು ವಿದ್ಯುತ್ ಸ್ಥಾವರದಿಂದ ಪರಮಾಣು ಕಲುಷಿತ ತ್ಯಾಜ್ಯ ನೀರನ್ನು ಗುರುವಾರದಿಂದ ಸಮುದ್ರಕ್ಕೆ ಬಿಡಲಾರಂಭಿಸಲಾಗುವುದು ಎಂದು ಜಪಾನ್ ಸರ್ಕಾರ ಮಂಗಳವಾರ ಪ್ರಕಟಿಸಿದೆ. ದೇಶ ಮತ್ತು ವಿದೇಶಗಳಲ್ಲಿ ತೀವ್ರ ವಿರೋಧದ ಹೊರತಾಗಿಯೂ, ಪ್ರಧಾನಿ ಫ್ಯೂಮಿಯೊ ಕಿಶಿಡಾ ಮಂಗಳವಾರ ಬೆಳಗ್ಗೆ ನಡೆದ ಸಚಿವರ ಸಭೆಯ ನಂತರ ಈ ವಿವಾದಾತ್ಮಕ ನಿರ್ಧಾರವನ್ನು ಪ್ರಕಟಿಸಿದ್ದಾರೆ ಎಂದು ಸ್ಥಳೀಯ ಸುದ್ದಿ ಸಂಸ್ಥೆಗಳು ವರದಿ ಮಾಡಿವೆ.
ಕಳೆದ ತಿಂಗಳು ಅಂತಾರಾಷ್ಟ್ರೀಯ ಪರಮಾಣು ಶಕ್ತಿ ಸಂಸ್ಥೆ (ಐಎಇಎ)ಯು ಪರಮಾಣು ತ್ಯಾಜ್ಯ ನೀರನ್ನು ಸಮುದ್ರಕ್ಕೆ ಬಿಡಲು ಅಂತಿಮ ಅನುಮೋದನೆ ನೀಡಿತ್ತು. ನೀರು ಬಿಡುಗಡೆಗೆ ಅಗತ್ಯವಾದ ಅಂತಾರಾಷ್ಟ್ರೀಯ ಮಾನದಂಡಗಳನ್ನು ಜಪಾನ್ ಪೂರೈಸಿದೆ ಎಂದು ಅದು ಹೇಳಿದೆ. ತ್ಯಾಜ್ಯ ನೀರು ಬಿಡುಗಡೆಗೆ ಮುನ್ನ ಪ್ರಧಾನಿ ಫ್ಯೂಮಿಯೊ ಕಿಶಿಡಾ ಸೋಮವಾರ ಜಪಾನ್ ನ ರಾಷ್ಟ್ರೀಯ ಮೀನುಗಾರಿಕಾ ಒಕ್ಕೂಟದ ಮುಖ್ಯಸ್ಥರೊಂದಿಗೆ ಮಾತುಕತೆ ನಡೆಸಿ, ಯೋಜನೆಯ ಬಗ್ಗೆ ಅವರಿಗೆ ಮಾಹಿತಿ ನೀಡಿದ್ದರು. ಆದಾಗ್ಯೂ ದೇಶದ ಮೀನುಗಾರಿಕೆ ಉದ್ಯಮದ ಪ್ರತಿನಿಧಿಗಳು ಅಣುತ್ಯಾಜ್ಯ ನೀರು ಬಿಡುಗಡೆಗೆ ತೀವ್ರ ವಿರೋಧ ವ್ಯಕ್ತಪಡಿಸುವುದನ್ನು ಮುಂದುವರಿಸಿದ್ದಾರೆ.
ಮಾರ್ಚ್ 11, 2011 ರಂದು ಸಂಭವಿಸಿದ 9.0 ತೀವ್ರತೆಯ ಭೂಕಂಪ ಮತ್ತು ನಂತರದ ಸುನಾಮಿಯಿಂದ ಫುಕುಶಿಮಾ ಡೈಚಿ ಅಣು ವಿದ್ಯುತ್ ಸ್ಥಾವರ ಸಂಪೂರ್ಣವಾಗಿ ಹಾನಿಗೀಡಾಗಿತ್ತು. ಈ ದುರಂತದಿಂದ ಸ್ಥಾವರದ ಮೂಲ ಘಟಕದಿಂದ ಲೆವೆಲ್ -7 ಮಟ್ಟದ ವಿಕಿರಣ ಉಂಟಾಗಿತ್ತು. ಇದು ಅಂತಾರಾಷ್ಟ್ರೀಯ ಪರಮಾಣು ಮತ್ತು ವಿಕಿರಣಶಾಸ್ತ್ರೀಯ ಘಟನೆ ಮಾಪಕದಲ್ಲಿ ಅತ್ಯಧಿಕ ವಿಕಿರಣ ಸೋರಿಕೆಯ ಮಟ್ಟವಾಗಿದೆ.
ಈ ಸ್ಥಾವರದ ರಿಯಾಕ್ಟರ್ ಕಟ್ಟಡಗಳಲ್ಲಿನ ಪರಮಾಣು ಇಂಧನವನ್ನು ಸತತವಾಗಿ ನೀರು ಹಾಯಿಸುವ ಮೂಲಕ ತಂಪಾಗಿಡಲಾಗುತ್ತಿದೆ. ಆದರೆ, ಹೀಗೆ ಬಳಕೆಯಾದ ಭಾರಿ ಪ್ರಮಾಣದ ನೀರು ವಿಕಿರಣಶೀಲ ನೀರಾಗಿ ಹೊರಗೆ ಬರುತ್ತಿದೆ. ಪ್ರಸ್ತುತ ಸುಮಾರು 1,000 ಶೇಖರಣಾ ಟ್ಯಾಂಕ್ಗಳಷ್ಟು ಅಪಾಯಕಾರಿಯಾದ ವಿಕಿರಣಶೀಲ ನೀರನ್ನು ಸಂಗ್ರಹಿಸಿ ಇಡಲಾಗಿದೆ.
ನೀರಿನ ಬಿಡುಗಡೆಯಿಂದ ಜಪಾನ್ನ ಪರಿಸರ ಹಾಗೂ ದಕ್ಷಿಣ ಕೊರಿಯಾ ಮತ್ತು ಚೀನಾ ಸೇರಿದಂತೆ ನೆರೆಯ ದೇಶಗಳ ಮೇಲೆ ಮೇಲೆ ನಗಣ್ಯ ಪರಿಣಾಮ ಬೀರಲಿದೆ ಎಂದು ಐಎಇಎ ಹೇಳಿದ್ದರೂ, ಕಡಲ ಆಹಾರ ವಿಕಿರಣದಿಂದ ಕಲುಷಿತವಾಗಬಹುದು ಎಂಬ ಆತಂಕ ಮನೆಮಾಡಿದೆ. ತ್ಯಾಜ್ಯ ನೀರು ಬಿಡುಗಡೆಯ ಬಗ್ಗೆ ಜನರ ಅಭಿಪ್ರಾಯ ಪಡೆಯಲು ನಡೆಸಲಾದ ಸಮೀಕ್ಷೆಯಲ್ಲಿ ಭಾಗವಹಿಸಿದ ಒಟ್ಟು 88.1 ಪ್ರತಿಶತದಷ್ಟು ಜನರು ಸಂಸ್ಕರಿಸಿದ ವಿಕಿರಣಶೀಲ ತ್ಯಾಜ್ಯದ ನೀರನ್ನು ಸಮುದ್ರಕ್ಕೆ ಬಿಡುಗಡೆ ಮಾಡುವುದರ ವಿರುದ್ಧವಾಗಿರುವುದು ಕಂಡು ಬಂದಿದೆ.
ಮೀನುಗಾರಿಕೆ ಸಹಕಾರ ಸಂಘಗಳಿಗೆ ತಿಳಿಸದೇ ಹಾಗೂ ಅವರ ಒಪ್ಪಿಗೆಯಿಲ್ಲದೇ ತ್ಯಾಜ್ಯ ನೀರನ್ನು ಸಮುದ್ರಕ್ಕೆ ಬಿಡುವುದಿಲ್ಲ ಎಂದು 2015 ರಲ್ಲಿ ಜಪಾನ್ ಸರ್ಕಾರ ಮತ್ತು ಸ್ಥಾವರವನ್ನು ನಿರ್ವಹಿಸುತ್ತಿರುವ ಟೋಕಿಯೊ ಎಲೆಕ್ಟ್ರಿಕ್ ಪವರ್ ಕಂಪನಿ ಫುಕುಶಿಮಾ ಪ್ರಾಂತ್ಯ ಮತ್ತು ರಾಷ್ಟ್ರದ ಮೀನುಗಾರಿಕೆ ಸಹಕಾರ ಸಂಘಗಳೊಂದಿಗೆ ಒಪ್ಪಂದ ಮಾಡಿಕೊಂಡಿದ್ದವು.
ಇದನ್ನೂ ಓದಿ : ಚಂದ್ರನ ದಕ್ಷಿಣ ಧ್ರುವದ ಅಧ್ಯಯನದ ಮಹತ್ವವೇನು? ಇಲ್ಲಿದೆ ಉಪಯುಕ್ತ ಮಾಹಿತಿ