ನವದೆಹಲಿ: ಎಲೆಕ್ಟ್ರಾನಿಕ್ ಉಪಕರಣಗಳು ಮತ್ತು ಎಲೆಕ್ಟ್ರಿಕ್ ವಾಹನಗಳನ್ನು ಅತ್ಯಂತ ವೇಗವಾಗಿ ಚಾರ್ಜ್ ಮಾಡಲು ಇನ್ನು ಬಹಳ ಕಷ್ಟ ಪಡಬೇಕಿಲ್ಲ. ಇದಕ್ಕೆ ಸಂಶೋಧಕರು ಹೊಸ ದಾರಿ ಕಂಡು ಕೊಂಡಿದ್ದಾರೆ.
ಈ ನಿಟ್ಟಿನಲ್ಲಿ ಐಐಟಿ ಗಾಂಧಿನಗರ ಮತ್ತು ಜಪಾನ್ ಅಡ್ವಾನ್ಸ್ಡ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್ ಅಂಡ್ ಟೆಕ್ನಾಲಜಿಯ ಸಂಶೋಧಕರು ಹೊಸ ಆನೋಡ್ ವಸ್ತುವನ್ನು ವಿನ್ಯಾಸಗೊಳಿಸಿದ್ದಾರೆ. ಇದು ಲಿಥಿಯಂ ಬ್ಯಾಟರಿಗಳನ್ನು ನಿಮಿಷಗಳಲ್ಲಿ ರೀಚಾರ್ಜ್ ಮಾಡಲು ಸಮರ್ಥವಾಗುವಂತೆ ಅಭಿವೃದ್ಧಿಪಡಿಸಿದ್ದಾರೆ.
ಈ 2D ಆನೋಡ್ ವಸ್ತುವನ್ನು ಟೈಟಾನಿಯಂ ಡೈಬೋರೈಡ್‌ನಿಂದ ಮಾಡಿದ ನ್ಯಾನೊಪ್ಲೇಟ್‌ಗಳೊಂದಿಗೆ ಅಭಿವೃದ್ಧಿಪಡಿಸಲಾಗಿದೆ. ದೊಡ್ಡ ಉಪಕರಣದ ಸ್ವತ್ತುಗಳ ಅಗತ್ಯವಿಲ್ಲದೇ ಈ ವಸ್ತುವನ್ನು ದೊಡ್ಡ ಪ್ರಮಾಣದಲ್ಲಿ ಉತ್ಪಾದಿಸಬಹುದಾಗಿದೆ ಎಂದು ಗಾಂಧಿನಗರ ಐಐಟಿ ಸಂಶೋಧಕರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಈ ವಸ್ತುವಿನಿಂದ ಮಾಡಿದ ಆನೋಡ್ ಬ್ಯಾಟರಿಯನ್ನು ವೇಗವಾಗಿ ಚಾರ್ಜ್ ಮಾಡುವುದಲ್ಲದೇ ದೀರ್ಘ ಬಾಳಿಕೆಯೂ ಬರುತ್ತದೆ ಎನ್ನುವುದು ಸಂಶೋಧಕರ ಮಾತು. ಪ್ರಸ್ತುತ, ವಾಣಿಜ್ಯಿಕವಾಗಿ ಲಭ್ಯವಿರುವ ಲಿಥಿಯಂ ಐಯಾನ್ ಬ್ಯಾಟರಿಗಳು ಗ್ರ್ಯಾಫೈಟ್ ಮತ್ತು ಲಿಥಿಯಂ ಟೈಟನೇಟ್ ವಸ್ತುಗಳನ್ನು ಆನೋಡ್‌ಗಳಾಗಿ ಬಳಸಲಾಗುತ್ತದೆ.
ಗ್ರ್ಯಾಫೈಟ್ ಆನೋಡ್ ಹೊಂದಿರುವ ಲಿಥಿಯಂ-ಐಯಾನ್ ಬ್ಯಾಟರಿಗಳು ಹೆಚ್ಚಿನ ಇಂಧನ ಸಾಂದ್ರತೆಯನ್ನು ಹೊಂದಿರುತ್ತವೆ. ಎಲೆಕ್ಟ್ರಿಕ್ ವಾಹನವನ್ನು ಒಂದೇ ಚಾರ್ಜ್‌ನಲ್ಲಿ ನೂರಾರು ಕಿಲೋಮೀಟರ್ ಓಡಿಸಬಹುದು. ಆದರೆ, ಅವು ಬೆಂಕಿಗೆ ಹೆಚ್ಚು ಒಳಗಾಗುತ್ತವೆ. ಲಿಥಿಯಂ ಟೈಟನೇಟ್ ಆನೋಡ್‌ಗಳು ಅವುಗಳಿಗೆ ಹೋಲಿಸಿದರೆ ಸುರಕ್ಷಿತವಾಗಿರುತ್ತವೆ. ಅವುಗಳನ್ನು ವೇಗವಾಗಿ ಚಾರ್ಜ್ ಮಾಡಬಹುದು ಎನ್ನುತ್ತಾರೆ ಐಐಟಿ ತಜ್ಞರು.
ಲಿಥಿಯಂ ಟೈಟನೇಟ್ ಆನೋಡ್‌ನಿಂದ ತಯಾರಿಸಿದ ಬ್ಯಾಟರಿಗಳು ಕಡಿಮೆ ಇಂಧನ ಕ್ಷಮತೆ ಹೊಂದಿರುತ್ತವೆ. ಹಾಗಾಗಿ ಆಗಾಗ ರೀಚಾರ್ಜ್ ಮಾಡುತ್ತಿರಬೇಕು. ಟೈಟಾನಿಯಂ ಡೈಬೋರೈಡ್ ಆನೋಡ್‌ನಿಂದ ಈ ತೊಂದರೆಗಳನ್ನು ನಿವಾರಿಸಬಹುದಾಗಿದೆಯಂತೆ.
ಇದನ್ನು ಓದಿ: ಇನ್ಸ್ಟಾಗ್ರಾಮ್ ಸರ್ವರ್ ಡೌನ್: ಬಳಕೆದಾರರ ಕೆಲ ಖಾತೆಗಳು ಅಮಾನತು