ಬೆಂಗಳೂರು: ಚಂದ್ರಯಾನ -3 ಮಿಷನ್ನ ಲ್ಯಾಂಡರ್ 'ವಿಕ್ರಮ್' ಮತ್ತು ರೋವರ್ 'ಪ್ರಜ್ಞಾನ್' ಮೇಲೆ ಈಗ ಎಲ್ಲರ ದೃಷ್ಟಿ ನೆಟ್ಟಿದೆ. ಆದರೆ, ಚಂದ್ರನ ಮೇಲಿನ ಕಾರ್ಯಾಚರಣೆಯ ಒಟ್ಟಾರೆ ಯಶಸ್ಸಿಗೆ ನಿರ್ಣಾಯಕವಾದ ಲ್ಯಾಂಡರ್ ಮತ್ತು ರೋವರ್ ಇವುಗಳು ತಕ್ಷಣವೇ ಕೆಲ ಮುಖ್ಯ ಕೆಲಸಗಳನ್ನು ಮಾಡಲಿವೆ. ಏತನ್ಮಧ್ಯೆ ವಿಕ್ರಮ್ ಮತ್ತು ಪ್ರಜ್ಞಾನ್ ಇವೆರಡೂ ಯಶಸ್ವಿಯಾಗಿ ಕೆಲಸ ಮಾಡಲಿವೆ ಎಂದು ಇಸ್ರೋ ವಿಜ್ಞಾನಿಗಳು ಕೂಡ ವಿಶ್ವಾಸ ಹೊಂದಿದ್ದಾರೆ.
ಲ್ಯಾಂಡರ್ ಚಂದ್ರನನ್ನು ಸ್ಪರ್ಶಿಸುವ ಮತ್ತು ರೋವರ್ ಅನ್ನು ನಿಯೋಜಿಸುವ ಕೆಲಸ ಮಾಡಲಿದೆ. ನಂತರ ಅದು ಚಂದ್ರನ ಮೇಲ್ಮೈಯ ಆಂತರಿಕ ರಾಸಾಯನಿಕ ವಿಶ್ಲೇಷಣೆಯನ್ನು ನಡೆಸುತ್ತದೆ. ಚಂದ್ರನ ಮೇಲ್ಮೈಯಲ್ಲಿ ಪ್ರಯೋಗಗಳನ್ನು ನಡೆಸಲು ಇವೆರಡರಲ್ಲಿಯೂ ವೈಜ್ಞಾನಿಕ ಪೇಲೋಡ್ಗಳನ್ನು ಅಳವಡಿಸಲಾಗಿದೆ. ಲ್ಯಾಂಡರ್ ಮತ್ತು ರೋವರ್ನ ವಿಶೇಷತೆಗಳು ಮತ್ತು ಅವುಗಳ ಕಾರ್ಯಗಳ ಬಗ್ಗೆ ಸಾಕಷ್ಟು ಕುತೂಹಲವಿದೆ. ಅದರ ಬಗ್ಗೆ ಒಂದಿಷ್ಟು ಮಾಹಿತಿ ಇಲ್ಲಿದೆ.
ಏನೆಲ್ಲ ಮಾಡುತ್ತೆ ರೋವರ್: ಲ್ಯಾಂಡರ್ ಇದು ಒಂದು ಚಂದ್ರ ದಿನದ ಮಿಷನ್ ಜೀವಿತಾವಧಿ ಹೊಂದಿದೆ. ಚಂದ್ರನ ಒಂದು ದಿನ ಅಂದರೆ 14 ಭೂಮಿಯ ದಿನಗಳಿಗೆ ಸಮಾನವಾಗಿರುತ್ತದೆ. ಇದು ರೋವರ್ ಸೇರಿದಂತೆ 1749.86 ಕೆಜಿ ತೂಕವನ್ನು ಹೊಂದಿದೆ. ಇದರಲ್ಲಿ ನಾಲ್ಕು ವೈಜ್ಞಾನಿಕ ಪೇಲೋಡ್ಗಳಿವೆ. ರೇಡಿಯೋ ಅನಾಟಮಿ ಆಫ್ ಮೂನ್ ಬೌಂಡ್ ಹೈಪರ್ ಸೆನ್ಸಿಟಿವ್ ಅಯೋನೋಸ್ಪಿಯರ್ ಅಂಡ್ ಅಟ್ಮಾಸ್ಫಿಯರ್ (RAMBHA-ರಂಭಾ) ಹತ್ತಿರದ ಮೇಲ್ಮೈ ಪ್ಲಾಸ್ಮಾ (ಅಯಾನುಗಳು ಮತ್ತು ಎಲೆಕ್ಟ್ರಾನ್ ಗಳು) ಸಾಂದ್ರತೆ ಮತ್ತು ಸಮಯದೊಂದಿಗೆ ಅದರ ಬದಲಾವಣೆಗಳನ್ನು ಅಳೆಯುತ್ತದೆ.
ಚಂದ್ರನ ChaSTE (ಸರ್ಫೇಸ್ ಥರ್ಮೊ ಫಿಸಿಕಲ್ ಎಕ್ಸ್ಪಿರಿಮೆಂಟ್) ಧ್ರುವ ಪ್ರದೇಶದ ಬಳಿ ಚಂದ್ರನ ಮೇಲ್ಮೈಯ ಉಷ್ಣ ಗುಣಲಕ್ಷಣಗಳ ಮಾಪನಗಳನ್ನು ನಡೆಸುವ ಉದ್ದೇಶವನ್ನು ಹೊಂದಿದೆ. ಚಂದ್ರನ ಭೂಕಂಪನ ಚಟುವಟಿಕೆಯನ್ನು ಅಳೆಯಲು ಅಳವಡಿಸಲಾಗಿರುವ (ಐಎಲ್ಎಸ್ಎ) ಉಪಕರಣವು ಚಂದ್ರನಲ್ಲಿ ತಾನು ಇಳಿಯುವ ಸ್ಥಳದ ಸುತ್ತಲಿನ ಭೂಕಂಪನವನ್ನು ಅಳೆಯುತ್ತದೆ ಮತ್ತು ಚಂದ್ರನ ಹೊರಪದರ ಮತ್ತು ಕವಚದ ರಚನೆಯನ್ನು ಪರಿಶೀಲಿಸಿ ಮಾಹಿತಿ ರವಾನಿಸುತ್ತದೆ.
ನಾಸಾದ ಎಲ್ಆರ್ಎ (ಲೇಸರ್ ರೆಟ್ರೊರೆಫ್ಲೆಕ್ಟರ್ ಅರೇ) ಒಂದು ಪರ್ಯಾಯ ಪ್ರಯೋಗವಾಗಿದ್ದು, ಇದು ಚಂದ್ರನ ವ್ಯವಸ್ಥೆಯ ಚಲನಶಾಸ್ತ್ರವನ್ನು ಅರ್ಥಮಾಡಿಕೊಳ್ಳುವ ಗುರಿಯನ್ನು ಹೊಂದಿದೆ. ಎಲ್ಆರ್ಎ ಲ್ಯಾಂಡರ್, ಅಪಾಯ ಪತ್ತೆ ಮತ್ತು ಅಪಾಯ ತಪ್ಪಿಸುವ ಕ್ಯಾಮೆರಾ ಸೇರಿದಂತೆ ಒಟ್ಟು 7 ಸಂವೇದಕಗಳನ್ನು ಇದು ಹೊಂದಿದೆ. ಲ್ಯಾಂಡರ್ ಆರು ಕಾರ್ಯವಿಧಾನಗಳನ್ನು ಹೊಂದಿದೆ, ಅವುಗಳೆಂದರೆ ಲ್ಯಾಂಡರ್ ಲೆಗ್, ರೋವರ್ ರ‍್ಯಾಂಪ್ (ಪ್ರಾಥಮಿಕ ಮತ್ತು ದ್ವಿತೀಯ), ರೋವರ್, ಐಎಲ್ಎಸ್ಎ, ರಾಂಭಾ ಮತ್ತು ಚಾಸ್ಟೆ ಪೇಲೋಡ್ಗಳು, ಉಂಬ್ಲಿಕಲ್ ಕನೆಕ್ಟರ್ ಪ್ರೊಟೆಕ್ಷನ್ ಮೆಕ್ಯಾನಿಸಂ ಮತ್ತು ಎಕ್ಸ್ - ಬ್ಯಾಂಡ್ ಆಂಟೆನಾ.
ರೋವರ್ ಗುಣಾತ್ಮಕ ಮತ್ತು ಪರಿಮಾಣಾತ್ಮಕ ಧಾತು ವಿಶ್ಲೇಷಣೆಗಾಗಿ ಲಿಬ್ಸ್ (ಲೇಸರ್ ಪ್ರೇರಿತ ಬ್ರೇಕ್ಡೌನ್ ಸ್ಪೆಕ್ಟ್ರೋಸ್ಕೋಪ್) ಪ್ರೊಪಲ್ಷನ್ ಮಾಡ್ಯೂಲ್ ಅನ್ನು ಹೊಂದಿದೆ. ಚಂದ್ರನ ಮೇಲ್ಮೈಯ ಬಗ್ಗೆ ನಮ್ಮ ತಿಳಿವಳಿಕೆಯನ್ನು ಹೆಚ್ಚಿಸಲು ರಾಸಾಯನಿಕ ಸಂಯೋಜನೆಯನ್ನು ಪಡೆಯಲು ಮತ್ತು ಖನಿಜಶಾಸ್ತ್ರೀಯ ಸಂಯೋಜನೆಯನ್ನು ಊಹಿಸಲು ಲಿಬ್ಸ್ ಸಹಾಯ ಮಾಡುತ್ತದೆ.
ಆಲ್ಫಾ ಪಾರ್ಟಿಕಲ್ ಎಕ್ಸ್ - ರೇ ಸ್ಪೆಕ್ಟ್ರೋಮೀಟರ್ (ಎಪಿಎಕ್ಸ್ಎಸ್) ಚಂದ್ರನ ಮಣ್ಣು ಮತ್ತು ಚಂದ್ರನ ಲ್ಯಾಂಡಿಂಗ್ ಪ್ರದೇಶದ ಸುತ್ತಲಿನ ಬಂಡೆಗಳ ಮೆಗ್ನೀಸಿಯಮ್, ಅಲ್ಯೂಮಿನಿಯಂ, ಸಿಲಿಕಾನ್, ಪೊಟ್ಯಾಸಿಯಮ್, ಕ್ಯಾಲ್ಸಿಯಂ, ಟೈಟಾನಿಯಂ, ಕಬ್ಬಿಣದಂತಹ ಧಾತು ಸಂಯೋಜನೆಯನ್ನು ನಿರ್ಧರಿಸುತ್ತದೆ. ಲ್ಯಾಂಡರ್ ಮತ್ತು ರೋವರ್ ಹೊರತಾಗಿ, ಪ್ರೊಪಲ್ಷನ್ ಮಾಡ್ಯೂಲ್ (ಪಿಎಂ) ಮತ್ತೊಂದು ವೈಜ್ಞಾನಿಕ ಪೇಲೋಡ್ ಅನ್ನು ಹೊಂದಿದೆ.
ಇದನ್ನೂ ಓದಿ : ಚಂದ್ರನ ದಕ್ಷಿಣ ಧ್ರುವದ ಅಧ್ಯಯನದ ಮಹತ್ವವೇನು? ಇಲ್ಲಿದೆ ಉಪಯುಕ್ತ ಮಾಹಿತಿ