ನವದೆಹಲಿ: ಚೀನಾದ ಶೆನ್ಝೆನ್ ಮೂಲದ ಆಟೋಮೊಬೈಲ್ ಕಂಪನಿ ಬಿವೈಡಿ 2023ರ ಅಕ್ಟೋಬರ್ ನಿಂದ ಡಿಸೆಂಬರ್ ಅವಧಿಯಲ್ಲಿ ದಾಖಲೆಯ 5,26,000 ಎಲೆಕ್ಟ್ರಿಕ್ ವಾಹನಗಳನ್ನು ಮಾರಾಟ ಮಾಡಿದ್ದು, ಎಲೋನ್ ಮಸ್ಕ್ ನೇತೃತ್ವದ ಟೆಸ್ಲಾವನ್ನು ಹಿಂದಿಕ್ಕಿ ವಿಶ್ವದ ಅಗ್ರ ಇವಿ ತಯಾರಕ ಕಂಪನಿಯಾಗಿ ಹೊರಹೊಮ್ಮಿದೆ.
ಇಡೀ ವರ್ಷದಲ್ಲಿ ಬಿವೈಡಿ 3 ದಶಲಕ್ಷಕ್ಕೂ ಹೆಚ್ಚು ಬ್ಯಾಟರಿ ಎಲೆಕ್ಟ್ರಿಕ್ ವಾಹನಗಳು (ಬಿಇವಿಗಳು) ಮತ್ತು ಪ್ಲಗ್-ಇನ್ ಹೈಬ್ರಿಡ್ ವಾಹನಗಳನ್ನು ಮಾರಾಟ ಮಾಡಿದೆ. ಒಟ್ಟಾರೆಯಾಗಿ, ಚೀನಾದ ಬಿವೈಡಿ 2023 ರಲ್ಲಿ ಸುಮಾರು 3.02 ಮಿಲಿಯನ್ ವಾಹನಗಳನ್ನು ಮಾರಾಟ ಮಾಡಿದೆ. ಇದು ಹಿಂದಿನ ವರ್ಷಕ್ಕೆ ಹೋಲಿಸಿದರೆ ಸುಮಾರು 62 ಪ್ರತಿಶತದಷ್ಟು ಹೆಚ್ಚಾಗಿದೆ. ಬಿವೈಡಿ ಸುಮಾರು 1.6 ಮಿಲಿಯನ್ ಬ್ಯಾಟರಿ ಇವಿಗಳು ಮತ್ತು ಸುಮಾರು 1.4 ಮಿಲಿಯನ್ ಪ್ಲಗ್-ಇನ್ ಹೈಬ್ರಿಡ್ ಇವಿಗಳನ್ನು ಮಾರಾಟ ಮಾಡಿದೆ.
ಉದ್ಯಮದ ಅಂದಾಜಿನ ಪ್ರಕಾರ, ಟೆಸ್ಲಾ ಅಕ್ಟೋಬರ್-ಡಿಸೆಂಬರ್ ಅವಧಿಯಲ್ಲಿ ಸುಮಾರು 4,83,000 ಎಲೆಕ್ಟ್ರಿಕ್ ವಾಹನಗಳನ್ನು ಮಾರಾಟ ಮಾಡಿದೆ ಮತ್ತು 2023 ರಲ್ಲಿ ಒಟ್ಟು 1.82 ಮಿಲಿಯನ್ ಇವಿ ವಾಹನಗಳನ್ನು ಮಾರಾಟ ಮಾಡಿದೆ.
ಬಿವೈಡಿ ಕಳೆದ ವರ್ಷ ಹಂಗೇರಿಯಲ್ಲಿ ಉತ್ಪಾದನಾ ಘಟಕ ನಿರ್ಮಿಸುವ ಯೋಜನೆಗಳನ್ನು ಘೋಷಿಸಿತ್ತು. ಏತನ್ಮಧ್ಯೆ, ಜಾಗತಿಕ ಪ್ರಯಾಣಿಕ ಬ್ಯಾಟರಿ ಎಲೆಕ್ಟ್ರಿಕ್ ವಾಹನ (ಬಿಇವಿ) ಗಳ ಮಾರಾಟ ಸಂಖ್ಯೆ ಈ ವರ್ಷದ ಮೂರನೇ ತ್ರೈಮಾಸಿಕದಲ್ಲಿ (ಜುಲೈ- ಸೆಪ್ಟೆಂಬರ್ ಅವಧಿ) ಶೇಕಡಾ 29 ರಷ್ಟು (ವರ್ಷದಿಂದ ವರ್ಷಕ್ಕೆ) ಹೆಚ್ಚಾಗಿದೆ.
ಕೌಂಟರ್ ಪಾಯಿಂಟ್ ರಿಸರ್ಚ್ ಪ್ರಕಾರ, ವಾರ್ಷಿಕ ಬಿಇವಿ ಮಾರಾಟ 2023 ರಲ್ಲಿ ಸುಮಾರು 10 ಮಿಲಿಯನ್ಗೆ ತಲುಪುವ ನಿರೀಕ್ಷೆಯಿದೆ. ಟೆಸ್ಲಾ, ಬಿವೈಡಿ ಆಟೋ ಮತ್ತು ಫೋಕ್ಸ್ ವ್ಯಾಗನ್ ಎಜಿ ಇವು ಅತ್ಯಧಿಕ ಬಿಇವಿ ವಾಹನ ಮಾರಾಟ ಮಾಡಿದ ಪ್ರಮುಖ ಕಂಪನಿಗಳಾಗಿವೆ. ಬ್ಯಾಟರಿಯಿಂದ ಪಡೆದ ವಿದ್ಯುತ್ ಮೂಲಕ ಚಲಿಸುವ ಮತ್ತು ಬಾಹ್ಯ ಮೂಲದಿಂದ ಚಾರ್ಜ್ ಮಾಡುವ ಸಾಮರ್ಥ್ಯವನ್ನು ಹೊಂದಿರುವ ಎಲೆಕ್ಟ್ರಿಕ್ ಮೋಟರ್ ನಿಂದ ಚಾಲಿತವಾಗಬಹುದಾದ ವಾಹನವನ್ನು ಇವಿ ವಾಹನಗಳೆಂದು ಕರೆಯಲಾಗುತ್ತದೆ.
ಜಾಗತಿಕ ಬ್ಯಾಟರಿ ಎಲೆಕ್ಟ್ರಿಕ್ ವೆಹಿಕಲ್ ಮಾರುಕಟ್ಟೆಯಲ್ಲಿ ಚೀನಾ ಈಗಲೂ ಶೇಕಡಾ 58 ರಷ್ಟು ಪಾಲನ್ನು ಹೊಂದಿದೆ. ಹಾಗೆಯೇ ಯುಎಸ್ ಶೇಕಡಾ 12 ರಷ್ಟು ಪಾಲು ಹೊಂದಿದೆ. ಮೂರನೇ ಅತಿದೊಡ್ಡ ಬಿಇವಿ ಮಾರುಕಟ್ಟೆಯಾದ ಜರ್ಮನಿ ಕೂಡ ವಾರ್ಷಿಕವಾಗಿ ಶೇಕಡಾ 60 ಕ್ಕಿಂತ ಹೆಚ್ಚು ಬೆಳೆದಿದೆ ಎಂದು ಹಿರಿಯ ವಿಶ್ಲೇಷಕ ಸೌಮೆನ್ ಮಂಡಲ್ ಹೇಳಿದ್ದಾರೆ.
ಇದನ್ನೂ ಓದಿ : iOS 17.2.1 ಅಪ್ಡೇಟ್ ನಂತರ ಐಫೋನ್ನಲ್ಲಿ ನೆಟ್ವರ್ಕ್ ಕನೆಕ್ಷನ್ ಸಮಸ್ಯೆ